ಸವದತ್ತಿ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗಣ್ಣವರಗೆ ಸಹಾಯಕ ಆಯುಕ್ತರಾಗಿ ಬಡ್ತಿ: ಆತ್ಮೀಯ ಸನ್ಮಾನ
ಸವದತ್ತಿ 13: ತಾಲೂಕಿನಲ್ಲಿ ತಹಶೀಲ್ದಾರರಾಗಿ ಅತ್ಯಂತ ದಕ್ಷ, ಪ್ರಾಮಾಣಿಕ ಹಾಗೂ ಜನಪರ ಸೇವೆಯನ್ನು ಸಲ್ಲಿಸಿ, ಇದೀಗ ಉನ್ನತ ಹುದ್ದೆಯಾದ ಅಸಿಸ್ಟೆಂಟ್ ಕಮಿಷನರ್ ಆಗಿ ಬಡ್ತಿ ಪಡೆದಿರುವ ಮಲ್ಲಿಕಾರ್ಜುನ ಹೆಗ್ಗನ್ನವರ ಅವರಿಗೆ ಜಿಲ್ಲಾ ಪಂಚಾಯತ್ ನಿವೃತ್ತ ಕಾರ್ಯನಿರ್ವಾಹಕ ಎಇಇ ಎಚ್.ಎ. ಕದ್ರಾಪೂರಕರ ಅವರು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿ, ಶುಭ ಹಾರೈಸಿದ್ದಾರೆ.ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಅಧಿಕಾರಾವಧಿಯಲ್ಲಿ ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ, ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಜನಸ್ನೇಹಿ ವಾತಾವರಣವನ್ನು ತರುವ ಮೂಲಕ ಮಲ್ಲಿಕಾರ್ಜುನ ಹೆಗ್ಗನ್ನವರ ಅವರು ತಾಲೂಕಿನಲ್ಲಿ ತಮ್ಮದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದ್ದರು. ಸಾಮಾನ್ಯ ಹಾಗೂ ಬಡತನದ ಹಿನ್ನೆಲೆಯಿಂದ ಬಂದು, ಕಷ್ಟಪಟ್ಟು ಉನ್ನತ ಶಿಕ್ಷಣ ಪಡೆದು, ತಂದೆ-ತಾಯಿಯ ಆಶೀರ್ವಾದದೊಂದಿಗೆ ಅತ್ಯುತ್ತಮ ಆಡಳಿತ ನೀಡಿರುವ ಇವರ ಕಾರ್ಯವೈಖರಿಗೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಪ್ರಶಂಸಿಸಿದರು.ನಂತರ ಮಲ್ಲಿಕಾರ್ಜುನ ಹೆಗ್ಗನ್ನವರ ಅವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಮುಂಬರುವ ದಿನಗಳಲ್ಲಿಯೂ ಉನ್ನತ ಹುದ್ದೆಯಲ್ಲಿ ಇನ್ನೂ ಹೆಚ್ಚಿನ ಯಶಸ್ಸು ಸಾಧಿಸಿ, ಸಾರ್ವಜನಿಕರಿಗೆ ಮತ್ತಷ್ಟು ಉತ್ತಮ ಸೇವೆ ಸಲ್ಲಿಸುವ ಮೂಲಕ ಮತ್ತಷ್ಟು ಉತ್ತುಂಗಕ್ಕೇರಲಿ ಎಂದು ಈ ವೇಳೆ ಹಾರೈಸಲಾಯಿತು.ಈ ಸಂದರ್ಭದಲ್ಲಿ ಶಿರಸ್ತೇದಾರ ಶಶಿರಾಜ ವನಕಿ, ಹಾಗೂ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು,