ಹಾವೇರಿ ವಿವಿ ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ಎಸ್‌ಎಫ್‌ಐ ಪ್ರತಿಭಟನೆ

ಹಾವೇರಿ ವಿವಿ ಪರೀಕ್ಷಾ ಶುಲ್ಕ ಹೆಚ್ಚಳ ಖಂಡಿಸಿ ಎಸ್‌ಎಫ್‌ಐ ಪ್ರತಿಭಟನೆ  SFI protests against Haveri University exam fee hike

ಹಾವೇರಿ 13: ಹಾವೇರಿ ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಹೆಚ್ಚಳವನ್ನು ಖಂಡಿಸಿ ಹಾಗೂ ಹೆಚ್ಚುವರಿ ಶುಲ್ಕವನ್ನು ಹಿಂಪಡೆಯುವಂತೆ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಹಾವೇರಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.  

ಕಳ್ಳಿಹಾಳ ಗ್ರಾಮದ ಸರ್ಕಾರಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ವಸತಿಯುತ ಪ್ರಥಮ ದರ್ಜೆ ಕಾಲೇಜಿನ ಎದುರು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಕಾಲೇಜಿನ ಪ್ರಾಂಶುಪಾಲರ ಮೂಲಕ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ಮನವಿ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾ ಮುಖಂಡ ಅರುಣ್ ಕುಮಾರ್ ನಗವತ್, 2025-26ನೇ ಸಾಲಿನ ಬಿಎ, ಬಿಕಾಂ ಹಾಗೂ ಬಿಎಸ್ಸಿ ಎಲ್ಲಾ ಸೆಮಿಸ್ಟರ್ಗಳ ಪರೀಕ್ಷೆಗಳಿಗೆ ವಿಶ್ವವಿದ್ಯಾಲಯವು ಪರೀಕ್ಷಾ ಶುಲ್ಕ, ಅಂಕಪಟ್ಟಿ ಶುಲ್ಕ ಹಾಗೂ ಘಟಿಕೋತ್ಸವ ಅರ್ಜಿ ಶುಲ್ಕ ಸೇರಿದಂತೆ ವಿವಿಧ ಹೆಸರಿನಲ್ಲಿ ?1,095 ಮತ್ತು ವೃತ್ತಿಪರ ತರಬೇತಿ (ಇಂಟರ್ನ್ಶಿಪ್) ಹಾಗೂ ಮೌಖಿಕ ಪರೀಕ್ಷೆ (ವೈವಾ-ವೋಸ್)ಗಾಗಿ ?550 ಶುಲ್ಕ ವಿಧಿಸಿರುವುದನ್ನು ತೀವ್ರವಾಗಿ ಖಂಡಿಸಿದರು.  

ಅಂತಿಮ ವರ್ಷದ ವಿದ್ಯಾರ್ಥಿಗಳಿಂದ ಘಟಿಕೋತ್ಸವ ಅರ್ಜಿ, ನಕಲು ಪ್ರಮಾಣಪತ್ರ, ಶ್ರೇಣಿ ಪ್ರಮಾಣಪತ್ರ (ರ್ಯಾಂಕ್ ಸರ್ಟಿಫಿಕೇಟ್) ಸೇರಿದಂತೆ ಅನಗತ್ಯ ಶುಲ್ಕಗಳನ್ನು ಕಡ್ಡಾಯಗೊಳಿಸಿರುವ ಕ್ರಮವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.  

ಸರ್ಕಾರವು ಎಸ್ಸಿ, ಎಸ್ಟಿ ಹಾಗೂ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಆದಾಯ ಮತ್ತು ಜಾತಿ ಪ್ರಮಾಣಪತ್ರ ಆಧಾರದಲ್ಲಿ ಶುಲ್ಕ ವಿನಾಯಿತಿ ಘೋಷಿಸಿದ್ದರೂ, ವಿಶ್ವವಿದ್ಯಾಲಯವು ಸರ್ಕಾರದ ಆದೇಶಗಳನ್ನು ಪಾಲಿಸದೆ ಸಂಪೂರ್ಣ ಶುಲ್ಕ ವಸೂಲಿ ಮಾಡುತ್ತಿದೆ ಎಂದು ಆರೋಪಿಸಿದರು.  

ರಾಜ್ಯದ ಇತರ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಾ ಹಾಗೂ ಅಂಕಪಟ್ಟಿ ಶುಲ್ಕ ಮಾತ್ರ ವಸೂಲಿ ಮಾಡಲಾಗುತ್ತಿದ್ದು, ಹಾವೇರಿ ವಿಶ್ವವಿದ್ಯಾಲಯದಲ್ಲಿ ಮಾತ್ರ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಇದರಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆ ಉಂಟಾಗಿದ್ದು, ಹೆಚ್ಚುವರಿ ಶುಲ್ಕವನ್ನು ತಕ್ಷಣ ಹಿಂಪಡೆದು ವಿದ್ಯಾರ್ಥಿಗಳಿಂದ ವಸೂಲಿ ಮಾಡಿರುವ ಮೊತ್ತವನ್ನು ಮರುಪಾವತಿಸಬೇಕು ಎಂದು ಆಗ್ರಹಿಸಿದರು.  

ಎಸ್‌ಎಫ್‌ಐ ಕಾಲೇಜು ಘಟಕದ ಅಧ್ಯಕ್ಷ ಗುದ್ದೇಶ ಇಚ್ಚಂಗಿ ಮಾತನಾಡಿ, ಏಕಾಏಕಿ ಶುಲ್ಕ ಹೆಚ್ಚಳ ಮಾಡಿರುವುದು ಬಡ ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದು, ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳು ಮಧ್ಯಪ್ರವೇಶಿಸಿ ಶುಲ್ಕ ಕಡಿತಗೊಳಿಸಬೇಕು ಎಂದು ಒತ್ತಾಯಿಸಿದರು.  

ಪ್ರತಿಭಟನೆಯಲ್ಲಿ ಆಕಾಶ ನಾಗಣ್ಣನವರ, ಮಹಾಂತೇಶ ಯಳಗಚ್ಚ, ಜಯಂತಿ ಸಂತೋಷ ಗೊಣಿ, ಶಿವರಾಜ ಬಿದರಿ, ಭಾಗ್ಯಲಕ್ಷ್ಮಿ ಪಾಟೀಲ, ರಕ್ಷಿತಾ ಎತ್ತಿನಹಳ್ಳಿ, ಮೇಘಾ ಅಡಪದ, ಶೋಭಾ ಅಂಬಿಗೇರಿ, ಮುಕ್ತಾ ಬರಲಿಂಗಣ್ಣವರ, ಕಾವ್ಯ ಅಣ್ಣಿ, ಸಚಿನ್ ಗಾಜಿ, ನಂದಿನಿ ಡಬ್ಬಳ್ಳಿ, ಸೌಮ್ಯ ಪಾಟೀಲ, ಬಸವರಾಜ ಮೂಲಿಮನಿ, ಶಿವಕುಮಾರ ಮೂಲಿಮನಿ ಸೇರಿದಂತೆ ಹಲವಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.