ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ಬೆಳಗಾವಿ : ಪತ್ನಿಯೋರ್ವಳು ತನ್ನ ಪ್ರೀಯಕರನ ಜೊತೆ ಸೇರಿ ಮಾಜಿ ಸೈನಿಕನಾಗಿದ್ದ ಪತಿಗೆ ಚುಚ್ವುಮದ್ದು ನೀಡಿ ಹತ್ಯೆ ಮಾಡಿ ಪತಿ ಅಪಘಾತದಲ್ಲಿ ಮೃತಪಟ್ಟಿದ್ದಾನೆ ಎಂದು ಬಿಂಬಿಸಲು ಯತ್ನಿಸಿದ್ದ ಪ್ರಕರಣವು ಈಗ ಸ್ಪೋಟಕ ತಿರುವು ಪಡೆದಿದ್ದು, ಈ ಪ್ರಕರಣದ ಪತ್ತೆಗಾಗಿ 3 ತಿಂಗಳ ಹಿಂದೆ ಮಣ್ಣಲ್ಲಿ ಸಮಾಧಿಯಾಗಿದ್ದ ಪತಿ, ಮಾಜಿ ಸೈನಿಕನ ಶವವನ್ನು ಗುರುವಾರ ಹೊರತೆಗೆಯಲಾಗಿದ್ದು, ಮರಣ್ಣೊತ್ತರ ಪರೀಕ್ಷೆ ನಡೆಸಲು ವೈದ್ಯರ ವಶಕ್ಕೆ ನೀಡಲಾಗಿದೆ.
ಮಾಜಿ ಸೈನಿಕ ಸಂದೀಪ್ ಎಂಬುವರು ಕಳೆದ 3 ತಿಂಗಳ ಹಿಂದೆ ಹುಕ್ಕೇರಿಯ ಲಕ್ಷ್ಮೀ ಜಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಸಣ್ಣ ಅಪಘಾತವಾಗಿತ್ತು. ಹುಕ್ಕೇರಿ ತಾಲೂಕಿನ ಘೋಡಗೇರಿಯ ಸಂದೀಪ್ ನ ಪತ್ನಿ ವಿಮೆಯ ಹಣ ಪಡೆಯುವ ಆಸೆಯಿಂದ ತನ್ನ ಪ್ರಿಯಕರನ ಸಹಾಯದಿಂದ ತನ್ನ ಪತಿಯನ್ನೇ ಹತ್ಯೆ ಮಾಡಿ ನಂತರ ಈ ಕೃತ್ಯಕ್ಕೆ ಅಪಘಾತದ ಕಥೆ ಕಟ್ಟಿದ್ದಳು ಎನ್ನಲಾಗಿತ್ತು.
ಬಳಿಕ ಅಲ್ಪ ಪ್ರಮಾಣದಲ್ಲಿ ಗಾಯಗೊಂಡಿದ್ದ ಮಾಜಿ ಸೈನಿಕ ಸಂದೀಪ್ ರನ್ನು ಘಟಪ್ರಭಾದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಕ್ರಮೇಣವಾಗಿ ಮಾಜಿ ಸೈನಿಕ ಸಂದೀಪ ಗುಣಮುಖರಾಗುತ್ತಿದ್ದಂತೆ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ಆಸ್ಪತ್ರೆಯಲ್ಲಿ ಸಂದೀಪಗೆ ಹಾಕಲಾಗಿದ್ದ ಸಾಲಾಯನ್ ಬಾಟಲಿನಲ್ಲಿ ಕ್ರಿಮಿನಾಶಕ ಔಷಧಿ ಹಾಕಿ ಮಾಜಿ ಸೈನಿಕನನ್ನು ಕೊಲೆ ಮಾಡಿ ಅಪಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಬಿಂಬಿಸಿದ್ದರು.
ಬಳಿಕ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಯಮಕನಮರಡಿ ಹಾಗೂ ಘಟಪ್ರಭಾ ಪೊಲೀಸರು ಈ ಬಗ್ಗೆ ಮಾಜಿ ಸೈನಿಕನ ಸಾವಿನ ಕುರಿತು ತನಿಖೆ ನಡೆಸಿದಾಗ ಇದು ಅಪಘಾತದಿಂದ ಮೃತಪಟ್ಟಿರುವುದು ಅಲ್ಲ. ಈ ವ್ಯಕ್ತಿಯನ್ನು ಕೊಲೆ ಮಾಡಲಾಗಿದೆ ಎಂದು ಬಹಿರಂಗಗೊಂಡಿತ್ತು ಎನ್ನಲಾಗಿದೆ. ಸದ್ಯ ಪತ್ನಿ ಹಾಗೂ ಆಕೆಯ ಪ್ರೀಯಕರನನ್ನು ಯಮಕನಮರಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆದರೆ ಗುರುವಾರ ಬೆಳಗಾವಿ ಎಸಿ ಶ್ರವಣಕುಮಾರ ನಾಯ್ಕ ಹಾಗೂ ಯಮಕನಮರಡಿ ಹಾಗೂ ಘಟಪ್ರಭಾ ಪೊಲೀಸರು ಮೃತ ಮಾಜಿ ಸೈನಿಕ ಸಂದೀಪ್ ಅವರ ಶವವನ್ನು 3 ತಿಂಗಳ ಬಳಿಕ ಸಮಾಧಿಯಿಂದ ಹೊರಗೆ ತೆಗೆಯಲಾಗಿದೆ.
ಬಳಿಕ ಸಮಾಧಿಯಲ್ಲಿನ ಶವವನ್ನು ಪರೀಕ್ಷೆ ಗೆ ಒಳಪಡಿಸುವ ಸಲುವಾಗಿ ವೈದ್ಯರಿಗೆ ಒಪ್ಪಿಸಲಾಗಿದೆ ಎಂದು ಎಸಿ ಶ್ರವಣಕುಮಾರ ನಾಯ್ಕ ಅವರು ತಿಳಿಸಿದ್ದಾರೆ.
ಸಂದೀಪ್ ಈತ ಹುಕ್ಕೇರಿ ತಾಲೂಕಿನ ಅಮ್ಮಣಗಿ ಗ್ರಾಮದವರಾಗಿದ್ದು, ಅವರು ತಂದೆ, ತಾಯಿ ಯಾರಿಲ್ಲದ ಕಾರಣದಿಂದ ಪತ್ನಿಯ ತವರೂರಾದ ಘೋಡಗೇರಿ ಗ್ರಾಮದಲ್ಲಿ ವಾಸವಾಗಿದ್ದರು.
ಬಳಿಕ ಸಂದೀಪ್ ಈತ ಸೇನೆಯಲ್ಲಿ ಕೆಲಸ ಮಾಡಿ ಸೇವಾ ನಿವೃತ್ತಿ ಹೊಂದಿದ್ದರು. ಬಳಿಕ ಅವರ ವಿಮೆಯ ಹಣಗಾಗಿ ಈ ಕೃತ್ಯ ನಡೆದಿದೆ ಎಂದು ತಿಳಿದು ಬಂದಿದೆ.