ಮಾನವ ಕಳ್ಳಸಾಗಣೆ ತಡೆಗೆ ಸಾರ್ವಜನಿಕರ ಜಾಗೃತಿ ಅಗತ್ಯ: ಅಲ್ಲಪ್ಪ ಬಡಿಗೇರ
ಲೋಕದರ್ಶನ ವರದಿ
ಧಾರವಾಡ 30: ಮಾನವ ಕಳ್ಳಸಾಗಣೆ ದೇಶದ ಎದುರಿನ ಗಂಭೀರ ಸಾಮಾಜಿಕ ಸಮಸ್ಯೆಯಾಗಿದ್ದು, ಜಾಗೃತಿ, ಶಿಕ್ಷಣ, ಕಾನೂನು ಪಾಲನೆ ಹಾಗೂ ಸಾರ್ವಜನಿಕರ ಸಹಭಾಗಿತ್ವದ ಮೂಲಕವೇ ಇದನ್ನು ಪರಿಣಾಮಕಾರಿಯಾಗಿ ತಡೆಯಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಅಲ್ಲಪ್ಪ ಎಂ. ಬಡಿಗೇರ ಹೇಳಿದರು. ಜಿಲ್ಲಾ ನ್ಯಾಯಾಲಯದ ಎಡಿಆರ್ ಕಟ್ಟಡದಲ್ಲಿ ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಕಳ್ಳಸಾಗಣೆ ಎಂದರೆ ಕೇವಲ ಮಕ್ಕಳ ಕಳ್ಳಸಾಗಣೆ ಮಾತ್ರವಲ್ಲ, ಮಹಿಳೆಯರು, ಪುರುಷರು ಹಾಗೂ ವೃದ್ಧರೂ ಇದರ ಬಲಿಯಾಗುತ್ತಿದ್ದಾರೆ. ಆರ್ಥಿಕ ಲಾಭ, ಶೋಷಣೆ, ಬಲವಂತದ ದುಡಿಮೆ, ವೇಶ್ಯಾವಾಟಿಕೆ ಹಾಗೂ ಇತರ ಅಕ್ರಮ ಚಟುವಟಿಕೆಗಳಿಗೆ ಮಾನವ ಕಳ್ಳಸಾಗಣೆ ನಡೆಯುತ್ತಿದೆ ಎಂದು ಅವರು ಹೇಳಿದರು. ಕಾನೂನು ಅಪರಾಧಿಗಳಿಗೆ ಶಿಕ್ಷೆ ವಿಧಿಸುವುದರ ಜೊತೆಗೆ ಸಂತ್ರಸ್ತರ ರಕ್ಷಣೆ ಮತ್ತು ಪುನರ್ವಸತಿಗೂ ಆದ್ಯತೆ ನೀಡುತ್ತದೆ. ಸಮಾಜದಲ್ಲಿ ಇಂತಹ ಅಪರಾಧಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ, ನ್ಯಾಯಾಂಗ, ವಿವಿಧ ಸರ್ಕಾರಿ ಇಲಾಖೆಗಳು, ಸ್ವಯಂಸೇವಾ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಅವರು ಕರೆ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಮಾನವ ಕಳ್ಳಸಾಗಣೆ ತಡೆ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಅನುಮಾನಾಸ್ಪದ ಘಟನೆಗಳು ಕಂಡುಬಂದಲ್ಲಿ ಕೂಡಲೇ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು. ಮಾಹಿತಿ ನೀಡುವವರ ಗೌಪ್ಯತೆ ಕಾಪಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಮಾನವ ಕಳ್ಳಸಾಗಣೆ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಪ್ರತಿಜ್ಞಾವಿಧಿ ಸ್ವೀಕರಿಸಿದರು. ವೇದಿಕೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಪರಶುರಾಮ ಎಫ್.ಕೆ., ಪೊಲೀಸ್ ಇನ್ಸ್ಪೆಕ್ಟರ್ ರಾಮನಗೌಡ ಸಂಕನಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ವಾರ್ತಾ ಇಲಾಖೆಯ ಪ್ರತಿನಿಧಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಧಾರವಾಡ ಗ್ರಾಮೀಣ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುನಾಥ ಕುಂಬಾರ ಸ್ವಾಗತಿಸಿದರು. ಹಿರಿಯ ಮೇಲ್ವಿಚಾರಕಿ ಸುನಿತಾ ನಾಡಗೇರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನಲ್ ವಕೀಲೆ ಶ್ರೀದೇವಿ ಎಸ್. ಕೋಲಾರ, ಸಖಿ ಒನ್ ಸ್ಟಾಪ್ ಸೆಂಟರ್ನ ಪ್ಯಾರಾಲೀಗಲ್ ವಕೀಲೆ ಶೋಭಾ ಪವಾರ್, ಪೊಲೀಸ್, ಆರೋಗ್ಯ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.