ಕಿರ್ಗಿಸ್ತಾನ್‌ನಲ್ಲಿ ಘರ್ಷಣೆ: ಓರ್ವ ವ್ಯಕ್ತಿ ಸಾವು, 590 ಮಂದಿಗೆ ಗಾಯ
ಬಿಷ್ಕೆಕ್, ಅಕ್ಟೋಬರ್ 6: ಕಿರ್ಗಿಸ್ತಾನ್‌ನಲ್ಲಿ ನಡೆದ ಘರ್ಷಣೆಯಲ್ಲಿ ಗಾಯಗೊಂಡವರ ಸಂಖ್ಯೆ 590ಕ್ಕೆ ಏರಿದ್ದು, ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾನೆ ಎಂದು ದೇಶದ ಆರೋಗ್ಯ ಸಚಿವಾಲಯ ಸ್ಪುಟ್ನಿಕ್ ಸುದ್ದಿಸಂಸ್ಥೆಗೆ ತಿಳಿಸಿದೆ.
ಬೆಳಿಗ್ಗೆ 8 ಗಂಟೆಗೆ ದೊರೆತ ಮಾಹಿತಿಯಂತೆ, ಗಲಭೆಯ ನಂತರ 590 ಜನರು ಗಾಯಗೊಂಡಿದ್ದು, 439 ಜನರನ್ನು ಹೊರರೋಗಿಗಳ ವಿಭಾಗಕ್ಕೆ ಚಿಕಿತ್ಸೆಗೆ ಕಳುಹಿಸಲಾಗಿದ್ದು, 150 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಪೈಕಿ 13 ಗಾಯಾಳುಗಳು ತೀವ್ರ ನಿಗಾದಲ್ಲಿದ್ದಾರೆ. ಒಬ್ಬಒಬ್ಬ ಗಾಯಾಳು ಸಾವನ್ನಪ್ಪಿದ್ದಾನೆ ಎಂದು ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ಕಿರ್ಗಿಸ್ತಾನ ಗಣರಾಜ್ಯದ ಸಂಸತ್ತಿನಲ್ಲಿ ಹೆಚ್ಚು ಸ್ಥಾನ ಪಡೆಯಲು ವಿಫಲವಾದ ರಾಜಕೀಯ ಪಕ್ಷಗಳ ಸುಮಾರು 2,000 ಬೆಂಬಲಿಗರು ಸೋಮವಾರ ಬಿಷ್ಕೆಕ್‍ನಲ್ಲಿನ ಕೇಂದ್ರ ಭಾಗದ ಅಲಾ-ಟೂ ಚೌಕದಲ್ಲಿ ಜಮಾಯಿಸಿದ್ದರು. ಚುನಾವಣಾ ಫಲಿತಾಂಶಗಳನ್ನು ರದ್ದುಪಡಿಸಬೇಕು ಮತ್ತು ಪುನರಾವರ್ತಿತ ಮತದಾನ ನಡೆಸಬೇಕು ಪ್ರತಿಭಟನಾಕಾರರು ಒತ್ತಾಯಿಸಿದರು. ಸಂಜೆ, ಪ್ರತಿಭಟನಾಕಾರರು ಮತ್ತು ಭದ್ರತಾ ಅಧಿಕಾರಿಗಳ ನಡುವೆ ಘರ್ಷಣೆ ಆರಂಭವಾಗಿತ್ತು.
ಸಂಸತ್ತು ಮತ್ತು ಅಧ್ಯಕ್ಷೀಯ ಕಚೇರಿಗೆ ಆತಿಥ್ಯ ವಹಿಸುವ ಶ್ವೇತಭವನದ ಕಟ್ಟಡಕ್ಕೆ ಸೋಮವಾರ ರಾತ್ರಿಯಿಡೀ ಪ್ರತಿಭಟನಾಕಾರರು ನುಗ್ಗಿದ್ದಾರೆ. ನಂತರ ರಾಷ್ಟ್ರೀಯ ಭದ್ರತೆ ರಾಜ್ಯ ಸಮಿತಿಯತ್ತ ಧಾವಿಸಿದ್ದಾರೆ. ಅಲ್ಲಿ ಕಸ್ಟಡಿಯಲ್ಲಿದ್ದ ದೇಶದ ಮಾಜಿ ನಾಯಕ ಅಲ್ಮಾಜ್ಬೆಕ್ ಅತಂಬಯೆವ್ ಅವರನ್ನು ಬಂಧಮುಕ್ತಗೊಳಿಸಿದ್ದಾರೆ.
ಅ 4 ರಂದು ಕಿರ್ಗಿಸ್ತಾನ ಸಂಸತ್ತಿಗೆ ಚುನಾವಣೆ ನಡೆದಿತ್ತು. ಶೇ 56.5 ರಷ್ಟು ಮತದಾನವಾಗಿತ್ತು.