ಮಾತೃ ವಂದನಾ ಕಾರ್ಯಕ್ರಮ
ವಿಜಯಪುರ 29 : ನಗರದ ಬಿಎಲ್ಡಿಇ ಸಂಸ್ಥೆಯ ಬಿ. ಎಂ. ಪಾಟೀಲ ಪಬ್ಲಿಕ್ ಸಿಬಿಎಸ್‌ಇ ಶಾಲೆಯಲ್ಲಿ ಬುಧವಾರ ಗುರುಪೂರ್ಣಿಮೆ ಅಂಗವಾಗಿ ವಿಶೇವಾಗಿ ಮಾತೃ ವಂದನಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲಿ ಭಾಗವಹಿಸಿದ ಅಮೇರಿಕದ ಖ್ಯಾತ ಅಕ್ಕ ಸಮ್ಮೇಳನದಲ್ಲಿ ಭಾಗವಹಿಸಿದ್ದ ಸಾಹಿತಿ ಶಾರದಾ ಮುಳ್ಳೂರ ಮಾತನಾಡಿ, ಪ್ರತಿಯೊಬ್ಬರ ಮನೆಯೇ ಮೊದಲ ಪಾಠ ಶಾಲೆ. ಜನನಿ ಮೊದಲ ಗುರು. ಅವಳಿಂದ ಪಾಠ ಕಲಿತ ನಾವೆಲ್ಲ ಧನ್ಯರು. ಮಗು ಮೊದಲ ಬಾರಿ ಹೊಸ್ತಿಲು ದಾಟಿದರೆ ಟೆಂಗಿನಕಾಯಿ ಒಡೆದು ಸಂಭ್ರಮಿಸುವ ತಾಯಿ, ಮಕ್ಕಳ ಪ್ರತಿ ಬೆಳವಣಿಗೆಯನ್ನು ಕಂಡು ಆನಂದಿಸುತ್ತಾಳೆ. ಅವರು ಬಾನೆತ್ತರಕ್ಕೆ ಬೆಳೆಯಲಿ ಎಂದು ನಿರಪೇಕ್ಷಿತ ಭಾವ ಹೊಂದಿರುವ ತಾಯಿಯ ಗುರುವಂದನೆ, ಮಾತೃವಂದನೆ ಎಂಬುದು ಒಂದೇ ದಿನಕ್ಕೆ ಸಲ್ಲಿಸುವ ಗೌರವವಲ್ಲ.
ಅದು ಜೀವನ ಪರ್ಯಂತ ಕೊಡಬೇಕಾದ ಗೌರವ ಎಂದು ಹೇಳಿದರು. 10ನೇ ತರಗತಿಯ ವಿದ್ಯಾರ್ಥಿಗಳ ತಾಯಂದಿರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಎಲ್ಲ ತಾಯಂದಿರನ್ನು ವೇದಿಕೆಯ ಎದುರಿಗೆ ವಿಶೇಷ ಆಸನದಲ್ಲಿ ಕುಳ್ಳಿರಿಸಿ ಮಕ್ಕಳು ಕಳಸ, ಹೂ-ಗಂಧದಿಂದ ಪಾದ ಪೂಜೆಯನ್ನು ಮಾಡಿದರು. ಇದೇ ವೇಳೆ ವಿಡಿಯೋಗಳ ಮೂಲಕ ಅಮ್ಮನಿಗಾಗಿ ಮಕ್ಕಳು ಹೇಳಿದ ನುಡಿ ನಮನಗಳು ಪರದೆಯ ಮೇಲೆ ಬಂದಾಗ ತಾಯಂದಿರ ಕಣ್ಣಲ್ಲಿ ನೀರು ತುಂಬಿಕೊಂಡವು. ಇಡೀ ವಾತಾವರಣ ಮಮತಾಮಯಿಯಾಗಿತ್ತು. ಭಾವನಾತ್ಮಕತೆಯಲ್ಲಿತ್ತು. ಈ ಸಂದರ್ಭದಲ್ಲಿ ಶಾಲೆಯ ಪ್ರಭಾರಿ ಪ್ರಾಚಾರ್ಯೆ ವಸುಧಾ ನಾರ್ವೇಕರ, ಹಿರಿಯ ಕಾರ್ಯ ಸಂಯೋಜಕಿ ದೀಪಾ ಜಂಬೂರೆ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. 9ನೇ ತರಗತಿ ವಿದ್ಯಾರ್ಥಿಗಳಾದ ವೈಭವಿ ನಾರ್ವೇಕರ ಮತ್ತು ಅದ್ವಿಕಾ ಸಾಸನೂರ ನಿರೂಪಿಸಿದರು. ವಿದ್ಯಾರ್ಥಿನಿ ನಿಯತಿ ಭಗವತಿ ಗುರು ಪೂರ್ಣಿಮೆಯ ಮಹತ್ವ ಕುರಿತು ಮಾತನಾಡಿದಳು.