ಉಪಕಾಲುವೆಗೆ ನೀರು ಹರಿಸಲು ಜುಲೈ 31ರಂದು ಅಂಜನಾದ್ರಿಯಿಂದ ಮುನಿರಾಬಾದ್ವರೆಗೆ ಬೃಹತ್ ಪಾದಯಾತ್ರೆ

ಉಪಕಾಲುವೆಗೆ ನೀರು ಹರಿಸಲು ಜುಲೈ 31ರಂದು ಅಂಜನಾದ್ರಿಯಿಂದ ಮುನಿರಾಬಾದ್ವರೆಗೆ ಬೃಹತ್ ಪಾದಯಾತ್ರೆ  Massive padayatra from Anjanadri to Munirabad on July 31 to release water into the distributary cana

ಕೊಪ್ಪಳ, ಜು. 29: ತುಂಗಭದ್ರಾ ಎಡದಂಡೆ 11-ಎ ಉಪಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಜುಲೈ 31ರಂದು ಅಂಜನಾದ್ರಿ ಬೆಟ್ಟದಿಂದ ಮುನಿರಾಬಾದ್ನ ತುಂಗಭದ್ರಾ ಅಣೆಕಟ್ಟೆ ಮುಖ್ಯ ಕಚೇರಿವರೆಗೆ ಬೃಹತ್ ಬೈಕ್ ರ್ಯಾಲಿ ಹಾಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ರೈತ ಮುಖಂಡ ಡಾ. ಬಸವರಾಜ ಕ್ಯಾವಟರ್ ತಿಳಿಸಿದ್ದಾರೆ.  

ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಜನಾದ್ರಿಯಿಂದ ಬೈಕ್ ಹಾಗೂ ಟ್ರ್ಯಕ್ಟರ್ ರ್ಯಾಲಿ ಮೂಲಕ ಹಿಟ್ನಾಳ ಕ್ರಾಸ್ವರೆಗೆ ತೆರಳಿ, ಅಲ್ಲಿಂದ ಮುನಿರಾಬಾದ್ ಅಣೆಕಟ್ಟೆ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು ಎಂದರು.  

ತುಂಗಭದ್ರಾ ಆಡಳಿತ ಮಂಡಳಿ ಅಷ್ಟರೊಳಗೆ ನೀರು ಹರಿಸುವ ಕುರಿತು ಕ್ರಮ ಕೈಗೊಳ್ಳದಿದ್ದರೆ, ಅಣೆಕಟ್ಟೆ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.  

ಜುಲೈ 20ರಂದು ಮುನಿರಾಬಾದ್ನಲ್ಲಿ ಪ್ರತಿಭಟನೆ ನಡೆಸಿ, 11-ಎ ಉಪಕಾಲುವೆಗೆ ಒಂದು ಬೆಳೆಗೆ ಅಗತ್ಯವಿರುವ 1.5 ಟಿಎಂಸಿ ನೀರು ಹರಿಸುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಜುಲೈ 21ರಂದು ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದರೂ ಸರ್ಕಾರದಿಂದ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.  

ಕೃಷ್ಣಾ ನ್ಯಾಯಮಂಡಳಿಯ ತೀಪು ಹಾಗೂ ಕೊರಗಲ್ ಅಣೆಕಟ್ಟೆ ಕಾಲುವೆಗಳ ಹಕ್ಕಿನ ಪ್ರಕಾರ ಈ ಭಾಗದ ರೈತರಿಗೆ ನೀರಿನ ಮೇಲೆ ಮೊದಲ ಹಕ್ಕು ಇದೆ. ಆದರೂ ಸರ್ಕಾರ ನೀರು ಹರಿಸಲು ನಿರ್ಲಕ್ಷ್ಯ ವಹಿಸುತ್ತಿದ್ದು, ರೈತರ ಹಕ್ಕನ್ನು ಕಸಿಯಲು ಅವಕಾಶ ನೀಡುವುದಿಲ್ಲ. ಇದೇ ಕಾರಣಕ್ಕೆ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಹೇಳಿದರು.  

ಜುಲೈ 31ರಂದು ಅಂಜನಾದ್ರಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿದ ಬಳಿಕ ರೈತರೊಂದಿಗೆ ಟ್ರ್ಯಕ್ಟರ್ ಹಾಗೂ ಬೈಕ್ ರ್ಯಾಲಿ ಮೂಲಕ ಹಿಟ್ನಾಳ ಕ್ರಾಸ್ಗೆ ಆಗಮಿಸಿ, ಅಲ್ಲಿಂದ ಮುನಿರಾಬಾದ್ ಅಣೆಕಟ್ಟೆ ಕಚೇರಿವರೆಗೆ ಪಾದಯಾತ್ರೆ ನಡೆಸಲಾಗುವುದು. ತುಂಗಭದ್ರಾ ಎಡದಂಡೆ ವ್ಯಾಪ್ತಿಯ ರೈತರು, ಯುವಕರು ಹಾಗೂ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.  

ಈ ವೇಳೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ತುಂಗಭದ್ರಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುವಂತೆ ರೈತರು ಕೇಳುತ್ತಿರುವ ಬೇಡಿಕೆ ನ್ಯಾಯಸಮ್ಮತವಾಗಿದೆ. ನೀರು ಬಿಡದಿದ್ದರೆ ಮುಂದಿನ ಹೋರಾಟಗಳಿಗೆ ಸರ್ಕಾರವೇ ಹೊಣೆಗಾರವಾಗಲಿದೆ ಎಂದು ಎಚ್ಚರಿಸಿದರು.  ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಖಾಜಾ ಹುಸೇನ್ ಹೊಸಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.