ಶಾಸಕ ಜಿ. ಎಸ್‌. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಉರುಳು ಸೇವೆ

ಶಾಸಕ ಜಿ. ಎಸ್‌. ಪಾಟೀಲರಿಗೆ ಸಚಿವ ಸ್ಥಾನಕ್ಕಾಗಿ ಉರುಳು ಸೇವೆ MLA G. S. Patil gets a ministerial berth

ಲೋಕದರ್ಶನ ವರದಿ 

ನರೇಗಲ್   06: ರೋಣ ಶಾಸಕ ಜಿ. ಎಸ್‌. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹಿಸಿ ನರೇಗಲ್ ಬ್ಲಾಕ್ ಕಾಂಗ್ರೆಸ್ ಹಾಗೂ ಅವರ ಅಭಿಮಾನಿಗಳು ಪಟ್ಟಣದ ಸಂತೆ ಬಜಾರದಲ್ಲಿರುವ ಆಂಜನೇಯ ದೇವಸ್ಥಾನದಿಂದ ಗ್ರಾಮದೇವಿ ದೇವಾಲಯದ ಆವರಣದವರೆಗೆ ಶನಿವಾರ ಉರುಳು ಸೇವೆ ಸಲ್ಲಿಸಿ, ದೇವರಲ್ಲಿ ಪ್ರಾರ್ಥಿಸಿ ಸಂಕಲ್ಪ ಮಾಡಿದರು.  ಈ ವೇಳೆ ಮಾತನಾಡಿದ ನರೇಗಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣಪ್ಪ ಬೆಟಗೇರಿ, ಜಿಲ್ಲೆಯ ಹಿರಿಯ ಶಾಸಕರಾಗಿ ಎಲ್ಲರನ್ನೂ ಸರಿಸಮನಾಗಿ ಕರೆದುಕೊಂಡು ಹೋಗಿ, ಒಂದೂ ಕಪ್ಪು ಚುಕ್ಕೆ ಇಲ್ಲದಂತೆ ರಾಜಕಾರಣ ಮಾಡಿದ್ದಾರೆ ಹಾಗೂ ಕ್ಷೇತ್ರದ ತುಂಬ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಿರಂತರವಾಗಿ ಕೈಗೊಂಡಿದ್ದಾರೆ. ಇಂದಿರಾಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ ಅವರ ಹಿರಿತನ ಹಾಗೂ ಪಕ್ಷಕ್ಕಾಗಿ ದುಡಿದ ಅವರ ಸೇವೆಯನ್ನು ಗುರುತಿಸಿ ಸಚಿವ ಸ್ಥಾನ ನೀಡುವ ಮೂಲಕ ಗೌರವಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಆಗುತ್ತದೆ ಎಂದರು. 

 ಉರುಳು ಸೇವೆ ಮಾಡಿ ಮಾತನಾಡಿದ ಯುವ ಮುಖಂಡರಾದ ಸದ್ದಾಂ ನಶೇಖಾನ ಹಾಗೂ ಗುಡದಪ್ಪ ಗೋಡಿ, ನೆಲ-ಜಲ ಅಭಿವೃದ್ಧಿ, ರೈತರ ಭೂಮಿ ಹಿತ ಕಾಪಾಡಲು ಕ್ಷೇತ್ರಾದ್ಯಂತ ಸಾಕಷ್ಟು ಕೆರೆಗಳನ್ನು ನಿರ್ಮಿಸಿ ಸಾವಿರ ಕೆರೆಗಳ ಸರದಾರ ಎಂದು ಹೆಸರು ಮಾಡಿದ್ದಾರೆ. ಯುವಕರಿಗೆ ಉದ್ಯೋಗಗಳನ್ನು ಸೃಷ್ಟಿಸಿ ಜೀವನ ಕಲ್ಪಿಸಿಕೊಟ್ಟಿದ್ದಾರೆ. ದೀನ ದಲಿತರಿಗೆ, ಹಿಂದುಳಿದ ವರ್ಗಗಳ ಜನರಿಗೆ ಶ್ರಮಿಕರಿಗೆ ಬದುಕು ಇಟ್ಟುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಇಂತಹ ನಾಯಕರಿಗೆ ಸಚಿವ ಸ್ಥಾನ ನೀಡದೆ ಅನ್ಯಾಯ ಮಾಡುತ್ತಾ ಬರಲಾಗಿದೆ. ಈಗಲಾದರು ಸಚಿವಸ್ಥಾನ ನೀಡಿ ಸರಿಪಡಿಸಬೇಕು. ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ನಮ್ಮೂರಿನ ದೇವರುಗಳಿಗೆ ಹರಕೆ ಹೊತ್ತು ಉರುಳು ಸೇವೆ ಮಾಡಿದ್ದೇವೆ ಎಂದರು. 

 ಈ ವೇಳೆ ನಿಂಗನಗೌಡ ಲಕ್ಕನಗೌಡ್ರ, ವೀರನಗೌಡ ಪಾಟೀಲ, ಅಲ್ಲಾಬಕ್ಷಿ ನದಾಫ್, ಸಂತೋಷ ಹನಮಸಾಗರ, ಕಳಕಪ್ಪ ಅಬ್ಬಿಗೇರಿ, ಶೇಖಪ್ಪ ಜುಟ್ಲದ, ಎ. ಸಿ. ಪಾಟೀಲ, ಕಳನಗೌಡ ಪೋಲಿಸ್ ಪಾಟೀಲ, ಕುಮಾರಸ್ವಾಮಿ ಕೋರಧಾನ್ಯಮಠ, ಶೇಖಪ್ಪ ಕೆಂಗಾರ, ಎ. ಎ. ನವಲಗುಂದ, ಸೋಮುನೌಡ ಲಕ್ಕನಗೌಡ್ರ , ಬಾಳಪ್ಪ ಸೋಮಗೊಂಡ, ಫಕ್ರುಸಾಬ್ ರೇವಡಿಗಾರ, ಮಹ್ಮದಗೌಸ ಹೊಸಮನಿ, ಮಾಸಪ್ಪ ಕೊಂಡಿ, ವೀರ​‍್ಪ ಹಾಲನ್ನವರ, ವೀರ​‍್ಪ ಜೋಗಿ, ಆಶೀಫ್ ಹೊಸಮನಿ, ಸುರೇಶ ಹುನಗುಂದ, ದಾದಾಸಾಬ ನದಾಫ್, ವೀರೇಶ ಪಮ್ಮಾರ, ಪ್ರಕಾಶ ಪಾದಗಟ್ಟಿ ಇದ್ದರು