ಗ್ರಂಥಾಲಯ: ಮಾಹಿತಿ ವಿಜ್ಞಾನ ವೃತ್ತಿಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಒತ್ತಾಯ

ಗ್ರಂಥಾಲಯ: ಮಾಹಿತಿ ವಿಜ್ಞಾನ ವೃತ್ತಿಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲು ಒತ್ತಾಯ Library: Urges to give higher priority to the development of the information science profession

ಬೆಳಗಾವಿ, ಜೂನ್ 1: ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘ  ಹಾಗೂ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನೇತೃತ್ವದಲ್ಲಿ ಗ್ರಂಥಪಾಲಕರ ನೇಮಕಾತಿಯನ್ನು ತ್ವರಿತಗೊಳಿಸುವುದು ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವೃತ್ತಿಯ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಒತ್ತಾಯಿಸಿ, ಜಿಲ್ಲಾಧಿಕಾರಿಯವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಪತ್ರ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಮಾನ್ಯ ಜಿಲ್ಲಾಧಿಕಾರಿಗಳಾದ ಮೊಹಮ್ಮದ ರೋಷನ್ ಅವರು ಮುಂದಿನ ಕ್ರಮದ ಭರವಸೆ ನೀಡಿದರು.     ಮನವಿಪತ್ರದಲ್ಲಿ ರಾಜ್ಯದ ಪದವಿ ಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಗ್ರಂಥಪಾಲಕರ ಹುದ್ದೆಗಳನ್ನು ಶೀಘ್ರವಾಗಿ ಭರ್ತಿ ಮಾಡುವುದು, ಗ್ರಂಥಾಲಯಗಳ ಅಭಿವೃದ್ಧಿಗೆ ಅಗತ್ಯ ಅನುದಾನ ಒದಗಿಸುವುದು, ಗ್ರಂಥಾಲಯ ಮೂಲಸೌಕರ್ಯವನ್ನು ಬಲಪಡಿಸುವುದು ಹಾಗೂ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಕ್ಷೇತ್ರದ ಬೆಳವಣಿಗೆಗೆ ಸರ್ಕಾರ ವಿಶೇಷ ಗಮನ ಹರಿಸಬೇಕೆಂದು ಆಗ್ರಹಿಸಲಾಯಿತು.   ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಪದಾಧಿಕಾರಿಗಳು, ಗ್ರಂಥಾಲಯಗಳು ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು, ಓದುವ ಸಂಸ್ಕೃತಿ, ಸಂಶೋಧನೆ ಮತ್ತು ಜ್ಞಾನ ವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತವೆ. ಆದ್ದರಿಂದ ಗ್ರಂಥಾಲಯ ಕ್ಷೇತ್ರದ ಅಭಿವೃದ್ಧಿ ಮತ್ತು ಅರ್ಹ ಗ್ರಂಥಪಾಲಕರ ನೇಮಕಾತಿಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಡಾ. ಕಿರಣ ಸವಣೂರ, ಡಾ. ಭರತ ಅಲಸಂದಿ, ರವಿ ಶಿವನಾಯ್ಕರ, ಡಾ. ರಮೇಶ ಕುರಿ, ಕಿರಣ ಮಾಳವದೆ, ಪ್ರಕಾಶ ಇಚಲಕರಂಜಿ, ಸುಪ್ರೀತ್ ಸಕಟ, ಸೋಮನಗೌಡ ಪಾಟೀಲ, ಕಿರಣ ರಾಣವಗೊಳ, ಲಕ್ಷ್ಮೀ ಕಾಂಬ್ಳೆ, ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದ ಸದಸ್ಯರು ಹಾಗೂ ಜಿಲ್ಲೆಯ ವಿವಿಧ ಗ್ರಂಥಾಲಯಗಳ ಗ್ರಂಥಪಾಲಕರು ಮತ್ತು ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ ವೃತ್ತಿಪರರು ಉಪಸ್ಥಿತರಿದ್ದರು.