ಪ್ರಾಕೃತಿಕ ವಿಕೋಪ ತಡೆಯಲು ಸನ್ನದ್ದರಾಗಿರಿ: ಜಿಲ್ಲಾಧಿಕಾರಿ

ಪ್ರಾಕೃತಿಕ ವಿಕೋಪ ತಡೆಯಲು ಸನ್ನದ್ದರಾಗಿರಿ: ಜಿಲ್ಲಾಧಿಕಾರಿ  Be prepared to prevent natural disasters: District Collector

ಲೋಕದರ್ಶನ ವರದಿ 

ಕಾರವಾರ, ಜೂ.2 :- ಜಿಲ್ಲೆಯಲ್ಲಿ ಮಳೆಗಾಲದ ಅವಧಿಯಲ್ಲಿ ಸಂಭವಿಸುವ ಯಾವುದೇ ರೀತಿಯ ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಈಗಿನಿಂದಲೇ ಎಲ್ಲಾ ಇಲಾಖೆಗಳು ಸನ್ನದ್ದರಾಗಿರುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.  ಅವರು ಮಂಗಳವಾರ, ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

 ಮಳೆಗಾಲದ ಸಂದರ್ಭದಲ್ಲಿ ರಾಷ್ಟಿಯ ಹೆದ್ದಾರಿ ವ್ಯಾಪ್ತಿಯಲ್ಲಿ ಮತ್ತು ನೌಕಾನೆಲೆಯ ಸಮೀಪದ ಪ್ರದೇಶದಲ್ಲಿ ನೆರೆ ಪರಿಸ್ಥಿತಿ ಉಂಟಾಗದಂತೆ, ಹಾಗೂ ಈ ಭಾಗದಲ್ಲಿ ಮಳೆಯ ನೀರು ಸರಾಗವಾಗಿ ಹರಿದು ಹೋಗಲು ಕೈಗೊಂಡಿರುವ ಕುರಿತು ಸಂಪೂರ್ಣ ವರದಿಯನ್ನು ನೀಡುವಂತೆ ನಿರ್ದೇಶನ ನೀಡಿದರು. 

 ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ನೆರೆ ಪರಿಸ್ಥಿತಿ ಉಂಟಾಗುವ ಮತ್ತು ಗುಡ್ಡ ಕುಸಿತ ಉಂಟಾಗುವ ಪ್ರದೇಶಗಳಲ್ಲಿ ಈಗಾಗಲೇ ಗುರುತಿಸಲಾಗಿದ್ದು, ಈ ಪ್ರದೇಶದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚನೆ ನೀಡಿದ ಅವರು, ರಾಷ್ಟಿಯ ಹೆದ್ದಾರಿ ಪಕ್ಕದಲ್ಲಿ ಗುಡ್ಡ ಕುಸಿತ ಪ್ರದೇಶದಲ್ಲಿ ಅತಿಕ್ರಮಿಸಿಕೊಂಡು ನಿರ್ಮಿಸಿರುವ ಮಳಿಗೆಗಳನ್ನು ತೆರವುಗೊಳಿಸುವಂತೆ ಎಲ್ಲಾ ಉಪ ವಿಭಾಗಾಧಿಕಾರಿಗಳಿಗೆ ಸೂಚಿಸಿದ ಅವರು ಹೆದ್ದಾರಿಗಳಲ್ಲಿ ಗುಡ್ಡ ಕುಸಿತ ಆಗುವಂತಹ ಪ್ರದೇಶಗಳಲ್ಲಿ ಪಾಕಿಂರ್ಗ್ ವ್ಯವಸ್ಥೆ ನಿಷೇಧಿಸಬೇಕು ಹಾಗೂ ಈ ಕುರಿತು ಸೂಚನಾ ಫಲಕಗಳನ್ನು ಅಳವಡಿಸುಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. 

ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಮತ್ತು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ವಿಫಲವಾಗಿರುವ ಕೊಳವೆ ಬಾವಿಗಳು ಮತ್ತು ಉಪಯೋಗವಿಲ್ಲದ ತೆರೆದ ಬಾವಿಗಳನ್ನು ಮುಚ್ಚಬೇಕು ಹಾಗೂ ಸಾರ್ವಜನಿಕರು ಯಾವುದೇ ಅಪಾಯಗಳಿಗೆ ಒಳಗಾಗದ ರೀತಿಯಲ್ಲಿ ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದರು. 

ವಿದ್ಯುತ್ ಸಂಬಂಧಿಸಿದಂತೆ ಹೆಚ್ಚಿನ ದೂರಗಳು ಬರುತ್ತಿದ್ದು, ಮಳೆಗಾಲದಲ್ಲಿ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು. 24 *7 ಕಾರ್ಯಗತರಾಗಿ ಕಾರ್ಯನಿರ್ವಹಿಸಿ ವಿದ್ಯುತ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಹಾಗೂ ಹೆಸ್ಕಾಂ ಸಿಬ್ಬಂದಿಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಂಟ್ರೋಲ್ ರೂಂ ನಿಯೋಜಿಸುವಂತೆ ಹೆಸ್ಕಾಂ ಅಧಿಕಾರಿಗೆ ಸೂಚಿಸಿದ ಅವರು, ಅಂಗನವಾಡಿ, ಶಾಲೆ, ಹಾಸ್ಟೆಲ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಪಾಯಕಾರಿ ಮರಗಳನ್ನು ತೆರವುಗೊಳಿಸಿ, ವಿದ್ಯುತ್ ಕಂಬ, ತಂತಿ, ಕಂಪೌಂಡ್ ಸೇರಿದಂತೆ ಯಾವುದೇ ಅಪಾಯವಿಲ್ಲವೆಂದು ಮುಂಜಾಗ್ರತೆ ಕ್ರಮ ತೆಗೆದುಕೊಂಡಿರುವ ಬಗ್ಗೆ ಪಿಡಿಓಗಳು ಸಂಬಂಧಿಸಿದ ಅಧಿಕಾರಿಗಳಿಂದ ಮಾಹಿತಿ ಪಡೆದು ವರದಿ ಸಲ್ಲಿಸುವಂತೆ ತಿಳಿಸಿದರು.  

ಮಾನ್ಸೂನ್ ಆರಂಭವಾಗುವ ಹಿನ್ನಲೆಯಲ್ಲಿ ಪ್ರಕೃತಿ ವಿಕೋಪ ಸಂಭವಿಸುವ ಸ್ಥಳಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಸ್ಥಳೀಯ ಸ್ಪಾಟರ್ಸ್‌ ಗಳ ಪಟ್ಟಿ ಮಾಡಿ ಅವರಿಗೆ ಸೂಕ್ತ ತರಬೇತಿ ನೀಡುವಂತೆ ತಿಳಿಸಿದರು. 

 ಸಂತ್ರಸ್ಥರ ಸುರಕ್ಷತೆಗೆ ಕಾಳಜಿ ಕೆಂದ್ರಗಳನ್ನು ತೆರೆಯಲು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಾಗೂ ಪಿಡಿಓ, ತಹಶೀಲ್ದಾರರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸಮನ್ವಯದಿಂದ ಸಭೆ ನಡೆಸಿ, ಕಾಳಜಿ ಕೇಂದ್ರಕ್ಕೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು ಎಂದರು. 

ಸಭೆಯಲ್ಲಿ ಜಿಲ್ಲಾ ಪಂಚಾಯತ ಸಿಇಓ ಡಾ. ದೀಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಎಲ್ಲಾ ಉಪ ವಿಭಾಗಾಧಿಕಾರಿಗಳು, ತಹಸೀಲ್ದಾರ್‌ಗಳು, ತಾ.ಪಂ.ಕಾರ್ಯನಿರ್ವಹಣಾಧಿಕಾರಿಗಳು, ಸೀಬರ್ಡ್‌ ಅಧಿಕಾರಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.