ಕನ್ನಡ ಚಿತ್ರರಂಗದ ದಂತಕತೆ; ಡಾ. ರಾಜ್‌ಕುಮಾರ

ಡಾ. ರಾಜ್‌ಕುಮಾರ್ ಪ್ರಸಿದ್ದ ಚಲನಚಿತ್ರ ನಟರು. ಕರ್ನಾಟಕದ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಪ್ರಮುಖರು. ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಶ್ರೇಷ್ಠ ನಟರಲ್ಲಿ ಒಬ್ಬರು. ಪೌರಾಣಿಕ ಕನ್ನಡ ನಟ ಎಂದು ಹೆಸರಾದ ಅವರು 200 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಡಾ.ರಾಜ್‌ಕುಮಾರ್ ಅವರು ‘ಬೇಡರ ಕಣ್ಣಪ್ಪ’ ಚಿತ್ರದ ಮೂಲಕ ಚಿತ್ರ ರಂಗಕ್ಕೆ ಪಾದಾರೆ​‍್ಣ ಮಾಡಿದರು ಮತ್ತು ನಟನೆಗಾಗಿ ಡಾಕ್ಟರೇಟ್ ಪಡೆದ ಮೊದಲ ಭಾರತೀಯ ನಟ. ಡಾ.ರಾಜ್‌ಕುಮಾರ್ ಅವರು ಭಾರತದಾದ್ಯಂತ ಅನೇಕರ ನೆಚ್ಚಿನ ನಟರಲ್ಲಿ ಒಬ್ಬರು. 1976 ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ನಟನೆಯಲ್ಲಿ ಡಾಕ್ಟರೇಟ್ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಮೆರಿಕದ ಕೆಂಟುಕಿ ರಾಜ್ಯವು ನೀಡಿದ ಪ್ರತಿಷ್ಠಿತ ಪ್ರಶಸ್ತಿ ಕೆಂಟುಕಿ ಕರ್ನಲ್ ಪಡೆದ ಏಕೈಕ ಭಾರತೀಯರೂ ಆಗಿದ್ದಾರೆ. ಕನ್ನಡ ಚಿತ್ರರಂಗದ ಧ್ರುವತಾರೆ ಎಂದೇ ಹೆಸರಾದ ಪ್ರಸಿದ್ಧ ನಟ, ಕೇವಲ ನಟರಾಗಿ ಉಳಿಯದೆ ಹಿನ್ನೆಲೆ ಗಾಯಕರಾಗಿ ಸಹ ಹೆಸರು ಮಾಡಿದ್ದಾರೆ. ಹಂಪಿ ವಿಶ್ವವಿದ್ಯಾಲಯದಿಂದ ನಾಡೋಜ ಪದವಿಯನ್ನು ಪಡೆದಿದ್ದಾರೆ. ಭಾರತ ಸರ್ಕಾರದಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಮತ್ತು ಚಿತ್ರರಂಗದಲ್ಲಿನ ಜೀವಮಾನದ ಸಾಧನೆ ಗಾಗಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗಳು ಸಹ ಲಭಿಸಿವೆ.  

ಕನ್ನಡ ರಂಗಭೂಮಿಯ ಹೆಸರಾಂತ ಪ್ರತಿಭೆ ಸಿಂಗನಲ್ಲೂರು ಪುಟ್ಟಸ್ವಾಮಯ್ಯ ಮತ್ತು ಲಕ್ಷ್ಮಮ್ಮ ದಂಪತಿಗಳ ಹಿರಿಯ ಮಗನಾಗಿ, ಚಾಮರಾಜನಗರ ಜಿಲ್ಲೆಯ ಗಡಿಭಾಗದಲ್ಲಿರುವ ದೊಡ್ಡ ಗಾಜನೂರಿನಲ್ಲಿ 1929ರ ಏಪ್ರಿಲ್ 24ರಂದು ರಾಜ್‌ಕುಮಾರ್ ಹುಟ್ಟಿದರು. ನಾಮಕರಣಗೊಂಡ ಹೆಸರು ಮುತ್ತುರಾಜು(ಮುತ್ತಣ್ಣ). ಡಾ. ರಾಜ್ ಅವರಿಗೆ ವರದರಾಜ್ ಎಂಬ ಸಹೋದರರೂ, ಶಾರದಮ್ಮ ಎಂಬ ತಂಗಿಯೂ ಇದ್ದರು. 1953 ಜೂನ್ 25ರಂದು ಪಾರ್ವತಿಯವರೊಡನೆ ಲಗ್ನವಾಯಿತು. ಪಾರ್ವತಿಯವರು ಮುಂದೆ ಪಾರ್ವತಮ್ಮ ರಾಜ್‌ಕುಮಾರ್ ಎಂದೇ ಕನ್ನಡದ ಜನತೆಗೆ ಚಿರ ಪರಿಚಿತರಾಗಿ ಕನ್ನಡ ಚಿತ್ರರಂಗದ ಪ್ರಮುಖ ಚಿತ್ರ ನಿರ್ಮಾಪಕರಲ್ಲೊಬ್ಬರಾದರು. ವಜ್ರೇಶ್ವರಿ ಸಂಸ್ಥೆಯ ಅಡಿಯಲ್ಲಿ ಹಲವಾರು ಕನ್ನಡ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಡಾ. ರಾಜ್ ದಂಪತಿಗಳಿಗೆ 5 ಜನ ಮಕ್ಕಳು. ಮೂರು ಜನ ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣು ಮಕ್ಕಳು. ಗಂಡು ಮಕ್ಕಳಾದ ಶಿವರಾಜ್‌ಕುಮಾರ್, ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಕನ್ನಡ ಚಿತ್ರರಂಗದ ನಾಯಕ ನಟರು. ಹೆಣ್ಣು ಮಕ್ಕಳು ಪೂರ್ಣಿಮಾ ಹಾಗು ಲಕ್ಷ್ಮಿ. ಹಿರಿಯ ಅಳಿಯ ಪಾರ್ವತಮ್ಮನವರ ತಮ್ಮನಾದ ಗೋವಿಂದರಾಜು ಹಾಗು ಕಿರಿಯ ಅಳಿಯ ಚಿತ್ರನಟ ರಾಮ್‌ಕುಮಾರ್‌.  

ಬಣ್ಣದ ಬದುಕಿನ ಪಕ್ಷಿನೋಟ: ಬೇಡರ ಕಣ್ಣಪ್ಪ ಚಿತ್ರದಿಂದ ನಾಯಕ ನಟನಾಗಿ ಅಭಿನಯಿಸಲು ಪ್ರಾರಂಭಿಸಿದ ರಾಜಕುಮಾರ್, ಭಕ್ತ ವಿಜಯ, ಹರಿಭಕ್ತ, ಓಹಿಲೇಶ್ವರ, ಭೂಕೈಲಾಸ, ಭಕ್ತ ಕನಕದಾಸ, ನವಕೋಟಿ ನಾರಾಯಣ(ಭಕ್ತ ಪುರಂದರದಾಸ) ಮುಂತಾದ ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸಿದರು. 1960ರ ದಶಕದಲ್ಲಿ, ಕಣ್ತೆರೆದು ನೋಡು, ಗಾಳಿಗೋಪುರ, ನಂದಾದೀಪ, ಸಾಕು ಮಗಳು, ನಾಂದಿ ಮುಂತಾದ ಸಾಮಾಜಿಕ ಚಿತ್ರಗಳಲ್ಲಿಯೂ, ರಣಧೀರ ಕಂಠೀರವ, ಕಿತ್ತೂರು ಚೆನ್ನಮ್ಮ, ಇಮ್ಮಡಿ ಪುಲಿಕೇಶಿ, ಶ್ರೀ ಕೃಷ್ಣದೇವ ರಾಯ ಮುಂತಾದ ಐತಿಹಾಸಿಕ ಚಿತ್ರಗಳು ರಾಜ್ ಅಭಿನಯದಲ್ಲಿ ತೆರೆ ಕಂಡವು. 1968ರಲ್ಲಿ ಬಿಡುಗಡೆಯಾದ ಜೇಡರ ಬಲೆ ಎಂಬ ಚಿತ್ರದ ಮೂಲಕ ಜೇಮ್ಸ್‌ ಬಾಂಡ್ ಮಾದರಿಯ ಗೂಢಚಾರಿ ಪಾತ್ರವನ್ನಾಧರಿಸಿದ ಚಿತ್ರಸರಣಿಗೆ ನಾಂದಿ ಹಾಡಿದರು. ಈ ಸರಣಿ ಯಲ್ಲಿ 'ಪ್ರಕಾಶ್' ಎಂಬ ಏಜೆಂಟ್ ಹೆಸರಿನಲ್ಲಿ (ಏಜೆಂಟ್ 999) ಅಭಿನಯಿಸಿದರು. ಈ ಸರಣಿಯಲ್ಲಿನ ಇತರ ಚಿತ್ರಗಳು ಆಪರೇಷನ್ ಜಾಕ್‌ಪಾಟ್‌ನಲ್ಲಿ ಸಿ.ಐ.ಡಿ. 999, ಗೋವಾದಲ್ಲಿ ಸಿ.ಐ.ಡಿ.999 ಹಾಗು ಆಪರೇಷನ್ ಡೈಮಂಡ್ ರಾಕೆಟ್‌. ಇವಲ್ಲದೇ ಸಿ.ಐ.ಡಿ. ರಾಜಣ್ಣ ಚಿತ್ರದಲ್ಲಿ ಸಿ.ಐ.ಡಿ ಆಗಿ ರಾಜ್ ಅಭಿನಯಿಸಿದ್ದಾರೆ.  

ರಾಜ್‌ಕುಮಾರ್ ಅವರ ನೂರನೇ ಚಿತ್ರವಾದ ಭಾಗ್ಯದ ಬಾಗಿಲು 1968ರಲ್ಲಿ ತೆರೆ ಕಂಡಿತು. ಇದೇ ಸಂದರ್ಭದಲ್ಲಿ ಇವರಿಗೆ ನಟಸಾರ್ವಭೌಮ ಎಂಬ ಬಿರುದನ್ನು ನೀಡಿ ಗೌರವಿಸಲಾಯಿತಲ್ಲದೆ, ಅದೇ ಹೆಸರಿನ ಚಲನಚಿತ್ರವೂ (ನಟಸಾರ್ವಭೌಮ) ಕೂಡ ತಯಾರಾಯಿತು 1971ರಲ್ಲಿ ಬಿಡುಗಡೆಯಾದ ಕಸ್ತೂರಿ ನಿವಾಸ ಮತ್ತು ಸಾಕ್ಷಾತ್ಕಾರ ಚಿತ್ರಗಳು ರಾಜ್ ಅವರ ಜನಪ್ರಿಯ ಚಿತ್ರಗಳಲ್ಲಿ ಮುಖ್ಯವಾದವು. ಈ ಚಿತ್ರಗಳಲ್ಲಿನ ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು ಹಾಗು ಒಲವೆ ಜೀವನ ಸಾಕ್ಷಾತ್ಕಾರ ಹಾಡುಗಳು ಜನಮನಗಳಲ್ಲಿ ವಿಶೇಷ ಸ್ಥಾನ ಪಡೆದ ಗೀತೆಗಳಾಗಿವೆ.  

ರಾಜ್‌ಕುಮಾರ್ ಅವರನ್ನು ಖ್ಯಾತಿಯ ಉತ್ತುಂಗಕ್ಕೇರಿಸಿದ ಚಿತ್ರ 1971ರಲ್ಲಿ ತೆರೆಕಂಡ ಬಂಗಾರದ ಮನುಷ್ಯ. ಚಿತ್ರಮಂದಿರದಲ್ಲಿ ಸತತವಾಗಿ ಎರಡು ವರ್ಷಕ್ಕೂ ಹೆಚ್ಚಿನ ಅವಧಿಯ ಪ್ರದರ್ಶನಗೊಂಡು ಹೊಸ ದಾಖಲೆಯನ್ನು ನಿರ್ಮಿಸಿತು. ಈ ದಾಖಲೆ ಕನ್ನಡ ಚಿತ್ರರಂಗದಲ್ಲಿ ಇಂದಿಗೂ ಅಚ್ಚಳಿಯದೇ ನಿಂತಿದೆ. ಈ ಚಿತ್ರದಲ್ಲಿನ ರಾಜ್ ಅಭಿನಯದ ರಾಜೀವಪ್ಪ ಎಂಬ ಪಾತ್ರವು ಕನ್ನಡ ಚಿತ್ರರಂಗದಲ್ಲಿನ ಅತ್ಯಂತ ಖ್ಯಾತ ಪಾತ್ರಗಳಲ್ಲಿ ಒಂದಾಗಿ ಹೆಸರು ಪಡೆಯಿತು. ಗಂಧದ ಗುಡಿ, ಸಂಪತ್ತಿಗೆ ಸವಾಲ್, ಮಯೂರ, ಸನಾದಿ ಅಪ್ಪಣ್ಣ, ಹಾಲುಜೇನು, ಚಲಿಸುವ ಮೋಡಗಳು, ಹೊಸ ಬೆಳಕು, ಶ್ರಾವಣ ಬಂತು, ಅನುರಾಗ ಅರಳಿತು, ಶ್ರುತಿ ಸೇರಿದಾಗ, ಒಂದು ಮುತ್ತಿನ ಕಥೆ, ಕವಿರತ್ನ ಕಾಳಿದಾಸ ಮುಂತಾದ ಯಶಸ್ವಿ ಚಿತ್ರಗಳು ತೆರೆ ಕಂಡವು. 

ಕನ್ನಡ ಪರ ಚಳುವಳಿಯಲ್ಲಿ ಡಾ. ರಾಜಕುಮಾರ 

ಗೋಕಾಕ್ ವರದಿಯು ಕನ್ನಡವನ್ನು ಪ್ರಾಥಮಿಕ ಶಿಕ್ಷಣದಲ್ಲಿ ಕಡ್ಡಾಯವಾಗಿ ಅಳವಡಿಸಿಕೊಳ್ಳುವುದು ಹಾಗು ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಕನ್ನಡ ಭಾಷೆಗೆ ಕೊಡುವುದರ ಬಗ್ಗೆ ಸಿದ್ಧವಾಗಿತ್ತು. ಆದರೆ, ಈ ವರದಿಯು ಜಾರಿಗೆ ಬಂದಿರಲಿಲ್ಲ. 1981ರಲ್ಲಿ, ಪಾಟೀಲ ಪುಟ್ಟಪ್ಪ, ಚಂದ್ರಶೇಖರ ಪಾಟೀಲ್ ಮುಂತಾದ ಸಾಹಿತಿಗಳು, ಕನ್ನಡ ವಿದ್ಯಾರ್ಥಿಗಳು, ಹಲವು ಸಂಘಸಂಸ್ಥೆಗಳು ಗೋಕಾಕ್ ವರದಿಯನ್ನು ಜಾರಿಗೊಳಿಸುವಂತೆ ಚಳುವಳಿಯನ್ನು ಪ್ರಾರಂಭ ಮಾಡಿದರು. ಇದೇ ಚಳುವಳಿಯು ಗೋಕಾಕ್ ಚಳುವಳಿ ಎಂದೇ ಹೆಸರಾಯಿತು. ಚಳುವಳಿಯು ಪ್ರಾರಂಭಗೊಂಡು ಹಲವಾರು ದಿನಗಳು ಕಳೆದರೂ, ಜನಸಾಮಾನ್ಯರಿಂದ ಉತ್ಸಾಹದ ಪ್ರತಿಕ್ರಿಯೆ ಕಂಡುಬರಲಿಲ್ಲ. ಈ ಸಮಯದಲ್ಲಿ, ಡಾ. ರಾಜ್ ಅವರನ್ನು ಚಳುವಳಿಗೆ ಆಹ್ವಾನಿಸಿ, ಚಳುವಳಿಯ ಬಲವರ್ಧನೆ ಮಾಡಬೇಕೆಂದು ಕೋರಲಾಯಿತು. ಡಾ. ರಾಜ್ ನೇತೃತ್ವದಲ್ಲಿ ಕನ್ನಡ ಚಿತ್ರರಂಗ, ಗೋಕಾಕ್ ಚಳುವಳಿಗೆ ಸಂಪೂರ್ಣ ಸಹಕಾರ ನೀಡಲು ಪ್ರಕಟಿಸಿ, ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಾಯಿತು. ಹಲವಾರು ಸಭೆಗಳು, ಭಾಷಣಗಳು ಕರ್ನಾಟಕದ ಪ್ರಮುಖ ನಗರಗಳಲ್ಲಿ ಜರುಗಿದವು. ಕರ್ನಾಟಕದ ಜನತೆ ಚಳುವಳಿಗೆ ಹಿಂದೆಂದಿಗಿಂತಲೂ ಹೆಚ್ಚಿನ ಉತ್ಸಾಹದಿಂದ ಪ್ರತಿಕ್ರಿಯಿಸಿದರು, ಭಾಗವಹಿಸಿದರು. ಕನ್ನಡದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು, ಅಭಿಮಾನ ಬೆಳೆಸಲು, ಕನ್ನಡ ಭಾಷೆಗೆ ಸಿಗಬೇಕಾದ ಹಕ್ಕುಗಳು, ಸೌಲಭ್ಯಗಳನ್ನು ಆಗಿನ ಕರ್ನಾಟಕ ಸರ್ಕಾರಕ್ಕೆ ಮನದಟ್ಟು ಮಾಡಿಕೊಡಲು, ಡಾ. ರಾಜ್ ಅವರ ಭಾಷಣಗಳು ಹಾಗು ಚಳುವಳಿಯ ನೇತೃತ್ವ ಸಹಾಯಕಾರಿಯಾದವು.  

ಗೂಗಲ್ ಡೂಡಲ್ ಗೌರವಸಂಪಾದಿಸಿ : ಗೂಗಲ್ ಸರ್ಚ್‌ನ ಡೂಡಲ್ ವಿಭಾಗದವರು ಡಾ. ರಾಜ್‌ಕುಮಾರ್ ಅವರ 88ನೇ ಹುಟ್ಟು ಹಬ್ಬದ ದಿನ (24 ಏಪ್ರಿಲ್ 2017) ರಾಜ್ ಕುಮಾರ  ಅವರ ಡೂಡಲ್ ಪ್ರದರ್ಶಿಸುವ ಮೂಲಕ ಗೌರವ ಸಲ್ಲಿಸಿದರು. ಈ ಡೂಡಲ್ ದೇಶಾದ್ಯಂತ (ರಠರರಟಜ.ಛಿಠಟಿ) ಎಲ್ಲಾ ರಾಜ್ಯಗಳಲ್ಲೂ ಪ್ರದರ್ಶಿತಗೊಂಡು ಪರ ರಾಜ್ಯದವರಿಗೂ ರಾಜ್ ಅವರ ಬಗ್ಗೆ ಕುತೂಹಲ ಮೂಡುವಂತೆ ಮಾಡಿತು. ತೆಂಕಣ ಭಾರತದ ನಟರಿಗೆ ಗೂಗಲ್ ಈ ರೀತಿಯ ಗೌರವ ಸಲ್ಲಿಸಿರುವುದು ಇದೇ ಮೊದಲು. ಇದಕ್ಕಾಗಿ ಕನ್ನಡಿಗರು ಗೂಗಲ್‌ನವರಿಗೂ ಅಭಿನಂದನೆ ಸಲ್ಲಿಸಿದರು. 

ಅಂತಿಮ ದಿನಗಳಲ್ಲಿ ಮಂಡಿನೋವು ಹಾಗು ಎದೆನೋವಿನಿಂದ ಬಳಲಿದ ಡಾ. ರಾಜ್, 12 ಏಪ್ರಿಲ್, 2006 ಬುಧವಾರದಂದು ಮಧ್ಯಾಹ್ನ 1:45ರ ಸುಮಾರಿಗೆ, ಬೆಂಗಳೂರಿನಲ್ಲಿ  ಕೊನೆಯುಸಿರೆಳೆದರು. ಕನ್ನಡ ಚಿತ್ರರಂಗದ ದಂತಕಥೆಯಾಗಿದ್ದ ಡಾ. ರಾಜ್ ಅವರ ಅಗಲಿಕೆಯಿಂದ, ಒಂದು ಸುವರ್ಣ ಯುಗದ ಅಂತ್ಯವಾದಂತಾಯಿತು. ಡಾ. ರಾಜ್ ಅವರ ಸ್ವ-ಇಚ್ಛೆಯಂತೆ, ಮರಣೋತ್ತರವಾಗಿ ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಲಾಯಿತು. ಮೃತರ ಪಾರ್ಥಿವ ಶರೀರವನ್ನು ಅಭಿಮಾನಿಗಳ, ಬಂಧುಮಿತ್ರರ ದರ್ಶನಕ್ಕಾಗಿ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಇಡಲಾಗಿತ್ತು. ಅಪಾರ ಸಂಖ್ಯೆಯ ಜನಸ್ತೋಮ ಅಂತಿಮ ದರ್ಶನದಲ್ಲಿ ಪಾಲ್ಗೊಂಡಿತ್ತು. 

ಕನ್ನಡ ಚಿತ್ರರಂಗಕ್ಕೆ ಮಹತ್ವಪೂರ್ಣ ಕೂಡುಗೆಯನ್ನು ನೀಡಿ, ಕನ್ನಡ ಚಿತ್ರರಂಗದ ಯಶಸ್ಸಿಗೆ ಕಾರಣಿಕರ್ತರಾದ ಮಹಾನ್ ಕಲಾವಿದ, ಸಂಗೀತಕಾರ ಡಾ. ರಾಜಕುಮಾರ ನಟಸಾರ್ವಭೌಮ ಎಂದೇ ಪ್ರಖ್ಯಾತಿ ಪಡೆದು ಕರ್ನಾಟಕದ ಜನತೆಗೆ ಬಂಗಾರ ಮನುಷ್ಯನಾಗಿ ಕನ್ನಡಿಗರ ಹೃದಯದಲ್ಲಿ ಮನೆಮಾತಾಗಿದ್ದಾರೆ.  

ಸುನೀಲ್ ಜ.ಲಮಾಣಿ 

ಧಾರವಾಡ