ಕರ್ನಾಟಕ ಎಸ್ಐಆರ್ ಕರಡು ಮತದಾರರ ಪಟ್ಟಿ ಬಿಡುಗಡೆ; 43.81 ಲಕ್ಷ ಮತದಾರರಿಗೆ ನೋಟಿಸ್
ಬೆಂಗಳೂರು, ಆಗಸ್ಟ್ 25: ಕರ್ನಾಟಕದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಮಹತ್ವದ ಹಂತ ತಲುಪಿದ್ದು, 4,46,80,151 ಮತದಾರರನ್ನು ಒಳಗೊಂಡ ಕರಡು ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಇದೇ ವೇಳೆ, ವಿವರಗಳನ್ನು ಮ್ಯಾಪ್ ಮಾಡಲು ಅಥವಾ ಪರಿಶೀಲಿಸಲು ಸಾಧ್ಯವಾಗದ 43.81 ಲಕ್ಷ ಮತದಾರರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡುವ ಪ್ರಕ್ರಿಯೆ ಆರಂಭಿಸಿದೆ.
ಮುಖ್ಯ ಚುನಾವಣಾಧಿಕಾರಿ ವಿ. ಅನ್ಬು ಕುಮಾರ್ ಅವರ ಪ್ರಕಾರ, ಎಸ್ಐಆರ್ ಪ್ರಕ್ರಿಯೆಯಲ್ಲಿ 1,07,07,339 ಹೆಸರುಗಳನ್ನು ಕರಡು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಲಾಗಿಲ್ಲ. ಇದರಲ್ಲಿ 65,45,679 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡ ಮತದಾರರು, 16,39,864 ಮಂದಿ ಮೃತಪಟ್ಟ ಮತದಾರರು, 7,91,870 ನಕಲಿ ಅಥವಾ ದ್ವಿಪ್ರತಿಗಳ ನೋಂದಣಿಗಳು, 15,742 ಮಂದಿ ಪತ್ತೆಯಾಗದ ಮತದಾರರು ಹಾಗೂ 3,83,884 ಪ್ರಕರಣಗಳು ಇತರೆ ವರ್ಗಗಳಿಗೆ ಸೇರಿವೆ.
ನೋಟಿಸ್ ಜಾರಿ ಪ್ರಕ್ರಿಯೆಯ ಮೂಲಕ ಸಂಬಂಧಪಟ್ಟ ಮತದಾರರಿಗೆ ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಅವಕಾಶ ನೀಡಲಾಗುವುದು. ಅಂತಿಮ ನಿರ್ಧಾರ ಕೈಗೊಳ್ಳುವ ಮುನ್ನ ಮತದಾರರು ಅಗತ್ಯ ದಾಖಲೆಗಳನ್ನು ಸಲ್ಲಿಸಬಹುದು ಎಂದು ಅನ್ಬು ಕುಮಾರ್ ಸ್ಪಷ್ಟಪಡಿಸಿದ್ದಾರೆ.
ನೋಟಿಸ್ ಪಡೆಯಲಿರುವ 43.81 ಲಕ್ಷ ಮತದಾರರಲ್ಲಿ 23.45 ಲಕ್ಷ ಮತದಾರರ ವಿವರಗಳನ್ನು ಎಸ್ಐಆರ್ ಸಂದರ್ಭದಲ್ಲಿ ಮ್ಯಾಪ್ ಮಾಡಲು ಸಾಧ್ಯವಾಗಿಲ್ಲ. ಬೆಂಗಳೂರಿನಲ್ಲಿ ಪರಿಶೀಲನಾ ಪ್ರಕ್ರಿಯೆಗಾಗಿ 120ಕ್ಕೂ ಹೆಚ್ಚು ಸಹಾಯಕ ಮತದಾರರ ನೋಂದಣಿ ಅಧಿಕಾರಿಗಳನ್ನು (AERO) ನಿಯೋಜಿಸಲಾಗಿದೆ.
ಎರಡು ತಿಂಗಳ ಅವಧಿಯಲ್ಲಿ ಸುಮಾರು 40ರಿಂದ 42 ಕಾರ್ಯನಿರ್ವಹಣಾ ದಿನಗಳು ಲಭ್ಯವಿರುವ ಹಿನ್ನೆಲೆಯಲ್ಲಿ, ಪ್ರತಿ ಅಧಿಕಾರಿಯು ಪ್ರತಿದಿನ ಸುಮಾರು 100 ಮತದಾರರಿಗೆ ನೋಟಿಸ್ ಜಾರಿ ಮಾಡುವ ಗುರಿ ಹೊಂದಿದ್ದಾರೆ.
ನೋಟಿಸ್ ಜಾರಿ ಮಾಡಿದ ಬಳಿಕ, ಚುನಾವಣಾ ನೋಂದಣಿ ಅಧಿಕಾರಿಗಳು ಅಥವಾ ಸಹಾಯಕ ಚುನಾವಣಾ ನೋಂದಣಿ ಅಧಿಕಾರಿಗಳು ವಿಚಾರಣೆ ನಡೆಸಿ, ಮತದಾರರು ಸಲ್ಲಿಸುವ ದಾಖಲೆಗಳು, ಹಕ್ಕುಗಳು ಮತ್ತು ಆಕ್ಷೇಪಣೆಗಳನ್ನು ಪರಿಶೀಲಿಸಿದ ನಂತರ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ.
ಮತದಾರರು ಕರಡು ಪಟ್ಟಿಯಲ್ಲಿ ತಮ್ಮ ಹೆಸರು ಮತ್ತು ವಿವರಗಳನ್ನು ಪರಿಶೀಲಿಸುವಂತೆ ಚುನಾವಣಾ ಆಯೋಗ ಮನವಿ ಮಾಡಿದೆ. ಕರಡು ಪಟ್ಟಿಯಲ್ಲಿ ಹೆಸರು ಕಾಣಿಸದವರು ಸೇರ್ಪಡೆಗಾಗಿ ಫಾರಂ 6 ಸಲ್ಲಿಸಬಹುದು. ಈಗಿರುವ ಮತದಾರರ ವಿವರಗಳಲ್ಲಿ ತಿದ್ದುಪಡಿ ಅಗತ್ಯವಿದ್ದರೆ ಫಾರಂ 8 ಬಳಸಬಹುದು.
ಮತದಾರರು ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದು. ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 27ರಂದು ಪ್ರಕಟಿಸಲು ನಿಗದಿಪಡಿಸಲಾಗಿದೆ.
ಕರಡು ಮತದಾರರ ಪಟ್ಟಿಯಲ್ಲಿ 2,21,59,240 ಪುರುಷ ಮತದಾರರು, 2,24,73,040 ಮಹಿಳಾ ಮತದಾರರು ಹಾಗೂ 2,871 ತೃತೀಯ ಲಿಂಗದ ಮತದಾರರು ಇದ್ದಾರೆ.
ನೋಟಿಸ್ ಪ್ರಕ್ರಿಯೆಯನ್ನು ನಿರ್ಲಕ್ಷಿಸದೆ, ತಮ್ಮ ಅರ್ಹತೆಯನ್ನು ಸಾಬೀತುಪಡಿಸಲು ಚುನಾವಣಾ ಆಯೋಗ ನೀಡಿರುವ ಅವಕಾಶವನ್ನು ಬಳಸಿಕೊಂಡು ತಮ್ಮ ಮತದಾನದ ಹಕ್ಕನ್ನು ರಕ್ಷಿಸಿಕೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬು ಕುಮಾರ್ ಮತದಾರರಿಗೆ ಮನವಿ ಮಾಡಿದ್ದಾರೆ.