ಅಕ್ರಮ ಲಾಟರಿಗಳಿಂದ ಕರ್ನಾಟಕಕ್ಕೆ Rs.5,000–6,000 ಕೋಟಿ ಆದಾಯ ನಷ್ಟ: ನಿಯಂತ್ರಿತ ರಾಜ್ಯ ಲಾಟರಿ ಯೋಜನೆಗೆ ಒತ್ತಾಯ
ಬೆಂಗಳೂರು, ಜುಲೈ 16: ಕರ್ನಾಟಕದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಕೇರಳ ಲಾಟರಿ ಟಿಕೆಟ್ಗಳ ಮಾರಾಟದಿಂದ ರಾಜ್ಯವು ಪ್ರತಿ ವರ್ಷ ಅಂದಾಜು ₹5,000–6,000 ಕೋಟಿ ಆದಾಯ ಕಳೆದುಕೊಳ್ಳುತ್ತಿದೆ ಎಂದು ಕರ್ನಾಟಕ ರಾಜ್ಯ ಚಿಲ್ಲರೆ ಲಾಟರಿ ಮಾರಾಟಗಾರರ ಸಂಘ ಆರೋಪಿಸಿದ್ದು, ಪಾರದರ್ಶಕ ಹಾಗೂ ನಿಯಂತ್ರಿತ ರಾಜ್ಯ ಲಾಟರಿ ವ್ಯವಸ್ಥೆಯನ್ನು ಮರುಜಾರಿಗೊಳಿಸುವಂತೆ ಗುರುವಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಸಿ. ರಾಮಕೃಷ್ಣ ಅವರು, ಅಕ್ರಮ ಲಾಟರಿ ಜಾಲಗಳಿಗೆ ಕಡಿವಾಣ ಹಾಕಲು ಕಾನೂನುಬದ್ಧ ನಿಯಂತ್ರಣದಡಿ ಕರ್ನಾಟಕ ರಾಜ್ಯ ಲಾಟರಿ ಯೋಜನೆಯನ್ನು ಮರುಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.
"ರಾಜ್ಯದಲ್ಲಿ ಅಕ್ರಮ ಲಾಟರಿ ಚಟುವಟಿಕೆಗಳು ಮುಂದುವರಿಯುತ್ತಿರುವುದರಿಂದ ಆದಾಯ ಹೊರರಾಜ್ಯಗಳಿಗೆ ಹರಿದು ಹೋಗುತ್ತಿದೆ. ಸರ್ಕಾರದ ನಿಯಂತ್ರಣದಲ್ಲಿರುವ ಲಾಟರಿ ವ್ಯವಸ್ಥೆಯಿಂದ ಹೆಚ್ಚಿನ ಆದಾಯ ಸಂಗ್ರಹವಾಗುವುದರ ಜೊತೆಗೆ ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಖಚಿತಪಡಿಸಬಹುದು," ಎಂದು ಅವರು ಹೇಳಿದರು.
2007ರಿಂದ ಲಾಟರಿ (ನಿಯಂತ್ರಣ) ಕಾಯ್ದೆಯಡಿ ರಾಜ್ಯ ಸರ್ಕಾರವು ಮೂರು ಅಧಿಸೂಚನೆಗಳನ್ನು ಹೊರಡಿಸಿದ್ದರೂ ಕರ್ನಾಟಕದಾದ್ಯಂತ ಅಕ್ರಮ ಲಾಟರಿ ಟಿಕೆಟ್ಗಳ ಮಾರಾಟ ನಡೆಯುತ್ತಿದೆ ಎಂದು ರಾಮಕೃಷ್ಣ ಆರೋಪಿಸಿದರು.
ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಪ್ರತ್ಯೇಕ ಲಾಟರಿ ಇಲಾಖೆಯನ್ನು ಮರುಸ್ಥಾಪಿಸಿ, ಲಾಟರಿ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸೂಕ್ತ ವ್ಯವಸ್ಥೆ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.
ನಿಯಂತ್ರಿತ ಲಾಟರಿ ವ್ಯವಸ್ಥೆಯ ಕೊರತೆಯಿಂದ ಅನಧಿಕೃತ ಲಾಟರಿ ನಿರ್ವಾಹಕರು ಬೆಳೆಯಲು ಅವಕಾಶ ದೊರೆತಿದ್ದು, ಇದರಿಂದ ರಾಜ್ಯದ ಬೊಕ್ಕಸಕ್ಕೆ ಆದಾಯ ನಷ್ಟವಾಗುತ್ತಿದೆ ಹಾಗೂ ಗ್ರಾಹಕರು ಅಕ್ರಮ ಚಟುವಟಿಕೆಗಳಿಗೆ ಬಲಿಯಾಗುವ ಅಪಾಯ ಎದುರಿಸುತ್ತಿದ್ದಾರೆ ಎಂದು ಸಂಘ ತಿಳಿಸಿದೆ.
ಸಾಮಾಜಿಕ ದುಷ್ಪರಿಣಾಮಗಳು ಮತ್ತು ಏಕ ಅಂಕಿ ಲಾಟರಿಗಳ ದುರುಪಯೋಗದ ಹಿನ್ನೆಲೆಯಲ್ಲಿ ಕರ್ನಾಟಕವು 2007ರಲ್ಲಿ ಲಾಟರಿ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಆದರೆ ಆಧುನಿಕ ಡಿಜಿಟಲ್ ಮೇಲ್ವಿಚಾರಣೆ ಮತ್ತು ಕಟ್ಟುನಿಟ್ಟಿನ ನಿಯಂತ್ರಣ ಹೊಂದಿರುವ ಲಾಟರಿ ಮಾದರಿಯನ್ನು ಜಾರಿಗೆ ತಂದರೆ ಸಾಮಾಜಿಕ ಸಮಸ್ಯೆಗಳನ್ನು ತಗ್ಗಿಸುವುದರ ಜೊತೆಗೆ ರಾಜ್ಯಕ್ಕೆ ಹೊಸ ಆದಾಯ ಮೂಲವನ್ನು ಸೃಷ್ಟಿಸಬಹುದು ಎಂದು ಸಂಘ ಅಭಿಪ್ರಾಯಪಟ್ಟಿದೆ.