ವಾಲ್ಮಿ ಸಭಾಂಗಣದಲ್ಲಿ ಜರುಗಿದ ನೀರಾವರಿ ಯೋಜನೆಗಳ ಕಾರ್ಯಕ್ಷಮತೆ ಅಧ್ಯಯನ ಸಮಿತಿ ಸಭೆ

ವಾಲ್ಮಿ ಸಭಾಂಗಣದಲ್ಲಿ ಜರುಗಿದ ನೀರಾವರಿ ಯೋಜನೆಗಳ ಕಾರ್ಯಕ್ಷಮತೆ ಅಧ್ಯಯನ ಸಮಿತಿ ಸಭೆ Irrigation Project Performance Study Committee Meeting held at Valmi Hall

ಧಾರವಾಡ 29: ಜಲಸಂಪನ್ಮೂಲ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿನ ಏತ ನೀರಾವರಿ ಯೋಜನೆಗಳು (ಅಚ್ಚುಕಟ್ಟು ಪ್ರದೇಶಕ್ಕೆ ನೀರು ಒದಗಿಸುವ), ಕೆರೆ ತುಂಬಿಸುವ ಯೋಜನೆಗಳ ಮತ್ತು ಸೂಕ್ಷ್ಮ ನೀರಾವರಿ ಯೋಜನೆಗಳ ಕಾರ್ಯಕ್ಷಮತೆ ಅಧ್ಯಯನಕ್ಕಾಗಿ ಸರ್ಕಾರವು ಕರ್ನಾಟಕ ವಿಧಾನ ಪರಿಷತ್ ಶಾಸಕರಾದ ಎಸ್‌. ರವಿ ಅವರ ಅಧ್ಯಕ್ಷತೆಯಲ್ಲಿ 18 ಜನ ಶಾಸಕರು, ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿ ಆದೇಶಿಸಿದೆ.  

ಈ ಸಮಿತಿಯ 11ನೇ ಸಭೆಯನ್ನು ಧಾರವಾಡದ ವಾಲ್ಮಿ ಸಂಸ್ಥೆಯ ಸಭಾಂಗಣದಲ್ಲಿ ಮೇ 27, 2026 ರಂದು ಏರಿ​‍್ಡಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಶಾಸಕ ಯು.ಬಿ. ಬಣಕಾರ್ ಅವರು ವಹಿಸಿದ್ದರು ಮತ್ತು ಶಾಸಕರು, ಸದಸ್ಯರುಗಳಾದ ಸಿಮೆಂಟ್ ಮಂಜು, ಗಣೇಶ್ ಪ್ರಕಾಶ್ ಹುಕ್ಕೇರಿ ಹಾಗೂ ನಿರಾಣಿ ಹನುಮಂತ್ ರುದ್ರ​‍್ಪ ಅವರ ಉಪಸ್ಥಿತಿಯಲ್ಲಿ ಸಭೆ ಜರುಗಿತು.  

ಸಭೆಯಲ್ಲಿ ಧಾರವಾಡ ವಲಯಕ್ಕೆ ಸಂಬಂಧಿಸಿದ ಬಾಗಲಕೋಟೆ, ಗದಗ, ಧಾರವಾಡ, ಬೆಳಗಾವಿ, ಹಾವೇರಿ ಮತ್ತು ಬೆಳಗಾವಿ ವಲಯಕ್ಕೆ ಸಂಬಂಧಿಸಿದ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಯ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ, ಪ್ರಗತಿಯಲ್ಲಿರುವ ಮತ್ತು ದುರಸ್ತಿಯಲ್ಲಿರುವ ಏತ ನೀರಾವರಿ ಯೋಜನೆಗಳು ಮತ್ತು ಕೆರೆ ತುಂಬಿಸುವ ಯೋಜನೆಗಳ ಕಾರ್ಯಕ್ಷಮತೆಯ ಕುರಿತಂತೆ ಸಂಬಂಧಿಸಿದ ಎಲ್ಲ ಅಧಿಕಾರಿಗಳ  ಜೊತೆ  ವಿವರವಾಗಿ ಚರ್ಚಿಸಲಾಯಿತು. 

 ಏತ ನೀರಾವರಿ ಯೋಜನೆಯ ವಿನ್ಯಾಸಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಮತ್ತು ಎಲ್ಲ ಕೆರೆ ತುಂಬುವ ಯೋಜನೆಗಳ ವಿನ್ಯಾಸಿತ ಕೆರೆಗಳನ್ನು ನಿಗದಿತ ಅವಧಿಯಲ್ಲಿ ತುಂಬಿಸುವದಕ್ಕಾಗಿ ಕ್ರಮವಹಿಸಲು ಸಮಿತಿ ಸದಸ್ಯರು ಸೂಚಿಸಿದರು. 

 ಯೋಜನೆಗಳ ವಾರ್ಷಿಕ ವಿದ್ಯುತ್ ಶುಲ್ಕ ಮತ್ತು ನಿರ್ವಹಣೆ ವೆಚ್ಚದ ಕೊರತೆಯನ್ನು ಸರಿದೂಗಿಸಲು ಇಲಾಖೆ ವತಿಯಿಂದ ಕೈಗೊಳ್ಳಬಹುದಾದ ಕ್ರಮದ ಕುರಿತು ಮತ್ತು ಏತ ನೀರಾವರಿ ಯೋಜನೆಗಳ ನೀರು ಬಳಕೆದಾರ ಸಂಘಗಳ ರಚನೆ ಮಾಡಿ ನೀರಾವರಿ ಕರ ವಸೂಲಾತಿ ಮತ್ತು ಕೆರೆ ತುಂಬು ಯೋಜನೆಗಳಿಂದ ಕೆರೆಗಳಲ್ಲಿ ಮೀನುಗಾರಿಕೆ ವಹಿಸಿ, ಆದಾಯವನ್ನು ಕ್ರೂಢೀಕರಿಸುವ ಕುರಿತು ಚರ್ಚಿಸಲಾಯಿತು. 

ಅಧಿಕಾರಿಗಳ ಕೋರಿಕೆಯಂತೆ ಈ ಯೋಜನೆಗಳ ನಿರಂತರ ಕಾರ್ಯಕ್ಷಮತೆಗಾಗಿ ನಿರ್ವಹಣೆ ಅನುದಾನದ ಕೊರತೆ ಮತ್ತು ವಿದ್ಯುತ್ ಶುಲ್ಕ ನಿಗದಿತ ಅವಧಿಯಲ್ಲಿ ಪಾವತಿಸಲು ಕ್ರಮ ವಹಿಸುವ ಕುರಿತಂತೆ ಸರ್ಕಾರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಮತ್ತು ತಾತ್ಕಾಲಿಕವಾಗಿ ನಿಷ್ಕ್ರಿಯವಾಗಿರುವ ಯೋಜನೆಗಳಿಗೆ ಅನುದಾನ ಒದಗಿಸಲು ಕೂಡ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು. ಪ್ರಗತಿಯಲ್ಲಿರುವ ಎಲ್ಲ ಏತ ನೀರಾವರಿ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ ವಿನ್ಯಾಸಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲು ಸಭೆಯಲ್ಲಿ ಸೂಚಿಸಿದರು.  

ಮಲಪ್ರಭಾ, ಘಟಪ್ರಭಾ, ಭದ್ರಾ, ವಿಜಯನಗರ ಕಾಲುವೆ ಹಾಗೂ ಗೊಂದಿ ಯೋಜನೆಯ ನೀರು ಬಳಕೆದಾರರ ಸಹಕಾರಿ ಸಂಘದ ಮಹಾಮಂಡಳಗಳ ಕಾರ್ಯವೈಖರಿ, ನಿರ್ವಹಣೆ ಕುರಿತಾಗಿ ಮಹಾಮಂಡಳಗಳ ಅಧ್ಯಕ್ಷರು ತಮ್ಮ  ಪ್ರಾತ್ಯಕ್ಷತೆಯನ್ನು ಪ್ರಸ್ತುತಪಡಿಸಿದರು.   

ಗೊಂದಿ ಯೋಜನೆಯ ನೀರು ಬಳಕೆದಾರರ ಸಹಕಾರಿ ಸಂಘದ ಮಹಾಮಂಡಳದ ಕಾರ್ಯವೈಖರಿ ಕುರಿತು ಸಭೆಯಲ್ಲಿ ಶ್ಲಾಘನೆ ವ್ಯಕ್ತಪಡಿಸಿದರು ಮತ್ತು ಇದರಂತೆ ಕಾರ್ಯನಿರ್ವಹಿಸಲು ಎಲ್ಲ ಮಹಾಮಂಡಳಗಳ ಅಧ್ಯಕ್ಷರುಗಳಿಗೆ ಸಮಿತಿ ಸೂಚಿಸಿತು.  

ನೆಲ ಮತ್ತು ಜಲ ನಿರ್ವಹಣೆ ಸಂಸ್ಥೆ ಮತ್ತು ಅಚುಕಟ್ಟು ನೀರಾವರಿ ಪ್ರಾಧಿಕಾರದವರು ರೈತರು ನೀರನ್ನು ಮಿತವಾಗಿ ಬಳಸಿಕೊಂಡು ಬೆಳೆ ಇಳುವರಿ ಹೆಚ್ಚಿಸುವ ವಿಧಾನಗಳ ಬಗ್ಗೆ ಹಾಗೂ ಆಧುನಿಕ ಕೃಷಿ ಪದ್ಧತಿ ಬಗ್ಗೆ ಮತ್ತು ನೀರು ಬಳಕೆ ಸಹಕಾರ ಸಂಘಗಳ ರಚನೆ ಹಾಗೂ ಬಲವರ್ಧನೆ ಮಾಡಿ ನೀರಿನ ಕರವಸೂಲಾತಿ ಮಾಡುವ ಬಗ್ಗೆ ಹಾಗೂ ರೈತರ ಸಹಭಾಗಿತ್ವದಲ್ಲಿ ನೀರು ನಿರ್ವಹಣೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.  

ಸಭೆಯಲ್ಲಿ ಸಮಿತಿಯ ಅಧ್ಯಕ್ಷರ ತಾಂತ್ರಿಕ ಸಲಹೆಗಾರ ಹಾಗೂ ಕಾವೇರಿ ನೀರಾವರಿ ನಿಗಮದ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಶಂಕರೇಗೌಡ, ನಿವೃತ್ತ ಮುಖ್ಯ ಇಂಜಿನಿಯರ ಚೆಲುವರಾಜ್, ನಿವೃತ್ತ ಅಧೀಕ್ಷಕ ಇಂಜಿನಿಯರ ರಾಜಶೇಖರ್, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಅಮ್ಮಿನಭಾವಿ ಮತ್ತು ಯೋಜನೆಗಳಿಗೆ ಸಂಬಂಧಿಸಿದ ಮುಖ್ಯ ಇಂಜಿನಿಯರರು ಮತ್ತು ಎಲ್ಲ ತಾಂತ್ರಿಕ ಅಧಿಕಾರಿ ವರ್ಗದವರು ಭಾಗವಹಿಸಿದ್ದರು.