ರಾಜ್ಯ

ಪತ್ನಿಯ ಮೇಲಿನ ‘ಆಸಕ್ತಿ ಕಳೆದುಕೊಂಡಿದ್ದೇನೆ’ ಎಂಬ ಕಾರಣಕ್ಕೆ ಪತಿ ವಿವಾಹ ಸಂಬಂಧದಿಂದ ಹೊರಬರಲು ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್

ಪತ್ನಿಯ ಮೇಲಿನ ‘ಆಸಕ್ತಿ ಕಳೆದುಕೊಂಡಿದ್ದೇನೆ’ ಎಂಬ ಕಾರಣಕ್ಕೆ ಪತಿ ವಿವಾಹ ಸಂಬಂಧದಿಂದ ಹೊರಬರಲು ಸಾಧ್ಯವಿಲ್ಲ: ಕರ್ನಾಟಕ ಹೈಕೋರ್ಟ್

ಬೆಂಗಳೂರು, ಜುಲೈ 20 : ಹಿಂದೂ ವಿವಾಹದ ಪಾವಿತ್ರ್ಯವನ್ನು ಪುನರುಚ್ಚರಿಸಿರುವ ಮಹತ್ವದ ತೀರ್ಪಿನಲ್ಲಿ, ಪತ್ನಿಯ ಮೇಲಿನ ಆಸಕ್ತಿ ಕಳೆದುಕೊಂಡಿದ್ದೇನೆ ಎಂಬ ಕಾರಣ ಮಾತ್ರಕ್ಕೆ ಪತಿ ವಿಚ್ಛೇದನವನ್ನು ಪಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಹಿಂದೂ ವಿವಾಹವು ಒಂದು ಸಂಸ್ಕಾರವಾಗಿದ್ದು, ಒಪ್ಪಂದವಲ್ಲ. ಆದ್ದರಿಂದ ಯಾವುದೇ ಒಬ್ಬ ಸಂಗಾತಿಯ ಇಚ್ಛೆಯಂತೆ ಅದನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ನ್ಯಾಯಮೂರ್ತಿಗಳಾದ ಡಿ.ಕೆ. ಸಿಂಗ್ ಮತ್ತು ಟಿ.ಎಂ. ನದಾಫ್ ಅವರ ವಿಭಾಗೀಯ ಪೀಠವು, ಹಿಂದೂ ವಿವಾಹ ಕಾಯ್ದೆ-1955ರ ಸೆಕ್ಷನ್ 13(1A) ಅಡಿಯಲ್ಲಿ ವಿಚ್ಛೇದನ ಕೋರಿ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿತು.

“ಹಿಂದೂ ಕಾನೂನಿನ ಅಡಿಯಲ್ಲಿ ವಿವಾಹವು ಒಂದು ಸಂಸ್ಕಾರವಾಗಿದೆ, ಅದು ಒಪ್ಪಂದವಲ್ಲ. ಒಮ್ಮೆ ಇಬ್ಬರು ವಿವಾಹವಾದರೆ, ಆ ಸಂಬಂಧವು ಜೀವನಪರ್ಯಂತ ಇರುತ್ತದೆ. ಇನ್ನೊಬ್ಬ ಸಂಗಾತಿಯೊಂದಿಗೆ ವಿವಾಹ ಸಂಬಂಧದಲ್ಲಿ ಆಸಕ್ತಿ ಇಲ್ಲ ಎಂಬ ಕಾರಣಕ್ಕೆ ಯಾವುದೇ ವ್ಯಕ್ತಿಯು ವಿವಾಹದಿಂದ ಹೊರಬರಲು ಸಾಧ್ಯವಿಲ್ಲ,” ಎಂದು ಪೀಠ ಹೇಳಿತು.

ಮೈಸೂರು ಕುಟುಂಬ ನ್ಯಾಯಾಲಯದ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರು ನೀಡಿದ್ದ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿದಿದ್ದು, ಕುಟುಂಬ ನ್ಯಾಯಾಲಯವು ಪತಿಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿ, ಪತ್ನಿಯ ದಾಂಪತ್ಯ ಹಕ್ಕುಗಳ ಪುನಃಸ್ಥಾಪನೆ ಅರ್ಜಿಯನ್ನು ಅಂಗೀಕರಿಸಿತ್ತು.

2003ರ ಡಿಸೆಂಬರ್‌ನಲ್ಲಿ ಪ್ರೇಮ ಹಾಗೂ ಅಂತರ್ಜಾತಿ ವಿವಾಹವಾಗಿದ್ದ ಈ ದಂಪತಿಗೆ ಈಗ ಬಹುತೇಕ ಪ್ರಾಪ್ತ ವಯಸ್ಸಿಗೆ ಬಂದಿರುವ ಪುತ್ರಿಯಿದ್ದಾಳೆ. 2019ರಲ್ಲಿ ನಡೆದ ಹಿಂದಿನ ನ್ಯಾಯಾಂಗ ಹೋರಾಟದ ಬಳಿಕ, ದಾಂಪತ್ಯ ಹಕ್ಕುಗಳ ಪುನಃಸ್ಥಾಪನೆಗೆ ಆದೇಶವಿದ್ದರೂ ಮತ್ತೆ ಒಟ್ಟಿಗೆ ಜೀವನ ನಡೆಸಿಲ್ಲ ಹಾಗೂ ವಿವಾಹ ಸಂಬಂಧ ಸಂಪೂರ್ಣವಾಗಿ ಮುರಿದುಬಿದ್ದಿದೆ ಎಂದು ಹೇಳಿ ಪತಿ ಹೊಸ ಅರ್ಜಿ ಸಲ್ಲಿಸಿದ್ದರು.

ಆದರೆ ಪತ್ನಿ, ಪತಿ ಮಾಡಿರುವ ಕ್ರೌರ್ಯ ಅಥವಾ ಹೊಂದಾಣಿಕೆ ಕೊರತೆಯ ಆರೋಪಗಳನ್ನು ನಿರಾಕರಿಸಿದ್ದರು. ತಾನು ಪತಿ ಹಾಗೂ ಅವರ ಪೋಷಕರನ್ನು ನೋಡಿಕೊಂಡಿದ್ದೇನೆ, ಪ್ರತ್ಯೇಕವಾಗಿ ವಾಸಿಸುವಂತೆ ಎಂದಿಗೂ ಒತ್ತಾಯಿಸಿಲ್ಲ ಮತ್ತು ದಾಂಪತ್ಯ ಮುಂದುವರಿಸಲು ಸಿದ್ಧಳಿದ್ದೇನೆ ಎಂದು ಅವರು ತಿಳಿಸಿದ್ದರು.

ಕುಟುಂಬ ನ್ಯಾಯಾಲಯವು ಪತ್ನಿಯ ವಿರುದ್ಧ ಕ್ರೌರ್ಯ ನಡೆದಿರುವ ಯಾವುದೇ ಸಾಕ್ಷ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತ್ತು. ವಿಚಾರಣೆಯ ವೇಳೆ ಪತಿ ನೀಡಿದ ಹೇಳಿಕೆಯಲ್ಲಿ, ತಾನು ಇನ್ನು ಮುಂದೆ ಆಸಕ್ತಿ ಹೊಂದಿಲ್ಲ ಎಂಬ ಕಾರಣಕ್ಕಾಗಿಯೇ ದಾಂಪತ್ಯ ಜೀವನವನ್ನು ಪುನರಾರಂಭಿಸಿಲ್ಲ ಎಂಬುದು ಸ್ಪಷ್ಟವಾಗಿತ್ತು ಎಂದು ನ್ಯಾಯಾಲಯ ಗಮನಿಸಿತ್ತು.

ಮೇಲ್ಮನವಿಯನ್ನು ತಿರಸ್ಕರಿಸಿದ ಹೈಕೋರ್ಟ್, ಪ್ರೀತಿಯಿಂದ ಮಾಡಿಕೊಂಡ ವಿವಾಹ, ಸುಮಾರು ಎರಡು ದಶಕಗಳ ಕಾಲ ಒಟ್ಟಿಗೆ ಜೀವನ ನಡೆಸಿರುವುದು ಹಾಗೂ ಮಗುವಿನ ಪೋಷಕರಾಗಿರುವುದನ್ನು ಪರಿಗಣಿಸಿ, ಪತಿ ತನ್ನದೇ ನಡೆ-ನುಡಿಗಳ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿತು.

ಪತಿಯ ಮೇಲಿನ ಆಸಕ್ತಿ ಕಳೆದುಕೊಂಡಿರುವುದು ಮಾತ್ರ ಹಿಂದೂ ವಿವಾಹ ಕಾಯ್ದೆಯಡಿ ವಿಚ್ಛೇದನಕ್ಕೆ ಮಾನ್ಯವಾದ ಕಾರಣವಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಪೀಠ, ಕುಟುಂಬ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ಮಾಡುವ ಅಗತ್ಯವಿಲ್ಲ ಎಂದು ಹೇಳಿ ಮೇಲ್ಮನವಿಯನ್ನು ವಜಾಗೊಳಿಸಿತು.


ಸುದ್ದಿ ಓದಿ