ಹರಪನಹಳ್ಳಿ : ಜೆಸಿಐ ಅಲ್ಯುಮ್ನಿ ಕ್ಲಬ್ ವತಿಯಿಂದ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ

ಹರಪನಹಳ್ಳಿ : ಜೆಸಿಐ ಅಲ್ಯುಮ್ನಿ ಕ್ಲಬ್ ವತಿಯಿಂದ ಅರ್ಥಪೂರ್ಣ ವಿಶ್ವ ಪರಿಸರ ದಿನಾಚರಣೆ Harapanahalli: JCI Alumni Club celebrates meaningful World Environment Day

ಲೋಕದರ್ಶನ ವರದಿ

ಎಸ್‌.ಯು.ಜೆ.ಎಂ. ಕಾಲೇಜು ಆವರಣದಲ್ಲಿ 40 ಸಸಿಗಳ ನೆಡುವಿಕೆ ಹಿ ಪರಿಸರ ಸಂರಕ್ಷಣೆಗೆ ಕರೆ 

ಹರಪನಹಳ್ಳಿ 5: ಜೆಸಿಐ ಅಲ್ಯುಮ್ನಿ ಕ್ಲಬ್ ಹರಪನಹಳ್ಳಿ, ಸ್ಫೂರ್ತಿ ಜೆಸಿಸ್, ವಸುದೈವ ಕುಟುಂಬಕಂ ಹಾಗೂ ಎಸ್‌.ಯು.ಜೆ.ಎಂ. ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗುರುವಾರ ಎಸ್‌.ಯು.ಜೆ.ಎಂ. ಕಾಲೇಜಿನ ಆವರಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಕಾಲೇಜು ಆವರಣದಲ್ಲಿ 40 ಸಸಿಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು. 

ಕಾರ್ಯಕ್ರಮವನ್ನು ಶಿವಕೃಪ ಆಸ್ಪತ್ರೆಯ ವೈದ್ಯರಾದ ಡಾ. ಹರ್ಷ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಪರಿಸರ ಎಂದರೆ ಕೇವಲ ಗಿಡ-ಮರಗಳಷ್ಟೇ ಅಲ್ಲ; ನಮ್ಮ ಸುತ್ತಲಿನ ವಾತಾವರಣ, ಸ್ವಚ್ಛತೆ ಮತ್ತು ಜೀವನಶೈಲಿಯೂ ಅದರ ಭಾಗಗಳಾಗಿವೆ. ಸಮಾಜದಲ್ಲಿ ಉತ್ತಮ ಬದಲಾವಣೆ ತರಬೇಕಾದರೆ ಪ್ರತಿಯೊಬ್ಬರೂ ತಮ್ಮಿಂದಲೇ ಬದಲಾವಣೆ ಆರಂಭಿಸಬೇಕು” ಎಂದು ಹೇಳಿದರು. 

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೀಲು-ಮೂಳೆ ತಜ್ಞ ಡಾ. ಪ್ರಶಾಂತ ಮಾತನಾಡಿ, “ಗಾಳಿ, ನೀರು, ಮಣ್ಣು ಹಾಗೂ ಗಿಡಮರಗಳ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಆರೋಗ್ಯಕರ ಬದುಕಿಗೆ ಉತ್ತಮ ಪರಿಸರ ಅತ್ಯಗತ್ಯ. ಪರಿಸರ ಸಂರಕ್ಷಣೆ ಕೇವಲ ಸರ್ಕಾರದ ಜವಾಬ್ದಾರಿಯಲ್ಲ; ಅದು ಪ್ರತಿಯೊಬ್ಬ ನಾಗರಿಕನ ಹೊಣೆಗಾರಿಕೆಯಾಗಿದೆ” ಎಂದು ತಿಳಿಸಿದರು. 

ಬಿ.ಎಡ್‌. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಟಿ.ಎಂ. ರಾಜಶೇಖರ್ ಮಾತನಾಡಿ, “ಪರಿಸರ ಪ್ರೇಮಿ ಸಾಲುಮರದ ತಿಮ್ಮಕ್ಕ ಅವರು ಯಾವುದೇ ಪ್ರಶಸ್ತಿ ಅಥವಾ ಗೌರವಕ್ಕಾಗಿ ಮರಗಳನ್ನು ಬೆಳೆಸಲಿಲ್ಲ. ಪರಿಸರದ ಬಗ್ಗೆ ಕಾಳಜಿ ಮತ್ತು ಜವಾಬ್ದಾರಿಯ ಮನೋಭಾವ ಪ್ರತಿಯೊಬ್ಬರಲ್ಲೂ ಬೆಳೆಯಬೇಕು” ಎಂದು ಅಭಿಪ್ರಾಯಪಟ್ಟರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆಎಸಿ ಪ್ರಾಂತ್ಯ ಅಧ್ಯಕ್ಷ ಹೆಚ್‌.ಮಲ್ಲಿಕಾರ್ಜುನ ಮಾತನಾಡಿ, “ಮರಗಳ ರಕ್ಷಣೆಗೆ ಆರಂಭವಾದ ಅಪ್ಪಿಕೋ ಚಳುವಳಿ ಪರಿಸರ ಸಂರಕ್ಷಣೆಯ ಮಹತ್ವವನ್ನು ಜಗತ್ತಿಗೆ ಸಾರಿದೆ. ಮರಗಳನ್ನು ಮಕ್ಕಳಂತೆ ಪೋಷಿಸಿ ಬೆಳೆಸಬೇಕು. ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಪರಿಸರದ ಜೊತೆಗೆ ದೇಹ ಹಾಗೂ ಮನಸ್ಸಿನ ಆರೋಗ್ಯವೂ ಉತ್ತಮವಾಗಿರಬೇಕು. ನಮ್ಮ ಕಣ್ಣಿಗೆ ಕಾಣದ ಪರಿಸರವೂ ಶುದ್ಧ ಮತ್ತು ಸಮತೋಲನಯುತವಾಗಿರಬೇಕು” ಎಂದು ಹೇಳಿದರು. 

ಕಾಲೇಜಿನ ಪ್ರಾಚಾರ್ಯ ಎಂ.ಜಿ. ಗುರುಸ್ವಾಮಿ, ವಸುದೈವ ಕುಟುಂಬಕಂ ಸಂಸ್ಥೆಯ ರಂಜಿತ್, ಜೆಸಿ ರವಿ, ಅಧಿಕಾರ್ ಹಾಗೂ ಅರ್ಜುನ್ ನಾಯಕ್ ಪರಿಸರ ಸಂರಕ್ಷಣೆಯ ಅಗತ್ಯತೆ ಮತ್ತು ಅದರ ಮಹತ್ವದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. 

ಕಾರ್ಯಕ್ರಮದಲ್ಲಿ ಹರಪನಹಳ್ಳಿ ಸ್ಫೂರ್ತಿ ಜೆಸಿಸ್ ಅಧ್ಯಕ್ಷೆ ಅಮೃತ ಪ್ರಶಾಂತ್, ಮಾಜಿ ಅಧ್ಯಕ್ಷೆ ಪ್ರಿಯಾಂಕಾ ಅಧಿಕಾರ್, ಜೆಸಿಐ ಮಾಜಿ ಅಧ್ಯಕ್ಷ ಕೆ. ಪ್ರಭಾಕರ್, ಸ್ಥಾಪಕ ಅಧ್ಯಕ್ಷ ಬಿ.ಎಸ್‌. ರವಿಶಂಕರ್, ಪ್ರಸನ್ನಕುಮಾರ್, ಜೈನ್, ಎಂ. ಅಂಬಣ್ಣ, ಪೂರ್ವ ವಲಯ ಅಧ್ಯಕ್ಷ ಶಿವಕುಮಾರ್ ನಾಯ್ಕ, ಇರ್ಷಾದ್ ಭಾಷಾ, ಸಪ್ನ ಮಲ್ಲಿಕಾರ್ಜುನ, ಉಪನ್ಯಾಸಕರಾದ ಬಿ. ಕೃಷ್ಣಮೂರ್ತಿ, ಎಸ್‌. ಕೊಟ್ರೇಶ್, ಎಂ. ಚಿಕ್ಕಪ್ರಸಾದ್ ಉಪಸ್ಥಿತರಿದ್ದರು.  

ಈ ಸಂದರ್ಭದಲ್ಲಿ ವಸುದೈವ ಕುಟುಂಬಕಂ ಸಂಸ್ಥೆಯ ರಂಜಿತ್ ಹಾಗೂ ಅರ್ಜುನ್ ನಾಯ್ಕ ಅವರನ್ನು ಸನ್ಮಾನಿಸಲಾಯಿತು. “ಒಂದು ಗಿಡ ನೆಡುವುದು ಭೂಮಿಗೆ ನೀಡುವ ಅತ್ಯುತ್ತಮ ಉಡುಗೊರೆ” ಎಂಬ ಸಂದೇಶದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.