ಬಾಳೇಕುಂದ್ರಿ ಬಿ.ಕೆ. ಗ್ರಾಮಕ್ಕೆ ಸುಸಜ್ಜಿತ ಸಮುದಾಯ ಭವನ: ಮೊದಲ ಕಂತಿನ 15 ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಚನ್ನರಾಜ ಹಟ್ಟಿಹೊಳಿ

ಬಾಳೇಕುಂದ್ರಿ ಬಿ.ಕೆ. ಗ್ರಾಮಕ್ಕೆ ಸುಸಜ್ಜಿತ ಸಮುದಾಯ ಭವನ: ಮೊದಲ ಕಂತಿನ 15 ಲಕ್ಷ ರೂ. ಚೆಕ್ ಹಸ್ತಾಂತರಿಸಿದ ಚನ್ನರಾಜ ಹಟ್ಟಿಹೊಳಿ Well-equipped community hall for Balekundri B.K. village: Channaraja Hattiholi hands over the first

ಬೆಳಗಾವಿ 06 : ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಾಳೇಕುಂದ್ರಿ ಬಿ.ಕೆ. ಗ್ರಾಮದಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸುಸಜ್ಜಿತ ಸಮುದಾಯ ಭವನ (ಕಮ್ಯುನಿಟಿ ಹಾಲ್) ನಿರ್ಮಾಣಕ್ಕೆ ಚಾಲನೆ ದೊರೆತಿದ್ದು, ಯೋಜನೆಯ ಮೊದಲ ಹಂತವಾಗಿ 15 ಲಕ್ಷ ರೂ.ಗಳ ಅನುದಾನದ ಚೆಕ್ ಅನ್ನು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಶನಿವಾರ ಹಸ್ತಾಂತರಿಸಿದರು. ಗ್ರಾಮದ ಸಾರ್ವಜನಿಕ ಕಾರ್ಯಕ್ರಮಗಳು, ಮದುವೆ ಸಮಾರಂಭಗಳು, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ವಿವಿಧ ಸಭೆ-ಸಮಾರಂಭಗಳಿಗೆ ಅನುಕೂಲವಾಗುವಂತೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸಮುದಾಯ ಭವನವನ್ನು ನಿರ್ಮಿಸಲು ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅನುದಾನ ಒದಗಿಸಿದ್ದಾರೆ.

ಈ ಭವನ ನಿರ್ಮಾಣದಿಂದ ಬಾಳೇಕುಂದ್ರಿ ಬಿ.ಕೆ. ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನತೆಗೆ ಶಾಶ್ವತ ಸೌಲಭ್ಯ ದೊರೆಯಲಿದ್ದು, ಗ್ರಾಮೀಣ ಪ್ರದೇಶದ ಸಾಮಾಜಿಕ ಜೀವನಕ್ಕೆ ಹೊಸ ಚೈತನ್ಯ ಸಿಗಲಿದೆ.ಈ ಸಂದರ್ಭದಲ್ಲಿ ಮಾತನಾಡಿದ ಚನ್ನರಾಜ ಹಟ್ಟಿಹೊಳಿ ಅವರು, ಗ್ರಾಮೀಣ ಭಾಗಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಜನರ ಅಗತ್ಯಕ್ಕೆ ತಕ್ಕಂತೆ ಅಭಿವೃದ್ಧಿ ಕಾಮಗಾರಿಗಳನ್ನು ಹಂತ ಹಂತವಾಗಿ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.  ಸಮುದಾಯ ಭವನ ನಿರ್ಮಾಣವು ಗ್ರಾಮಸ್ಥರ ಬಹುಕಾಲದ ಬೇಡಿಕೆಯಾಗಿದ್ದು, ಅದನ್ನು ಸಾಕಾರಗೊಳಿಸಲು ಅಗತ್ಯ ಅನುದಾನವನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು.

ಭವಿಷ್ಯದಲ್ಲಿ ಈ ಭವನವು ಸಾಮಾಜಿಕ ಸಾಮರಸ್ಯ ಮತ್ತು ಸಾರ್ವಜನಿಕ ಚಟುವಟಿಕೆಗಳ ಕೇಂದ್ರವಾಗಿ ರೂಪುಗೊಳ್ಳಲಿದ್ದು, ಗ್ರಾಮಾಭಿವೃದ್ಧಿಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಉದ್ಯಮಿಗಳಾದ ಗಂಗಣ್ಣ ಕಲ್ಲೂರ್, ಗ್ರಾಮದ ಹಿರಿಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.