ಸಮಾನತೆ, ಮಾನವೀಯತೆಯ ಸಂದೇಶ ಸಾರಿದ ಮಹಾನ್ ಶಿವಶರಣ ಹಡಪದ ಅಪ್ಪಣ್ಣ : ಕೆ.ಇ. ಚಿದಾನಂದಪ್ಪ

ಸಮಾನತೆ, ಮಾನವೀಯತೆಯ ಸಂದೇಶ ಸಾರಿದ ಮಹಾನ್ ಶಿವಶರಣ ಹಡಪದ ಅಪ್ಪಣ್ಣ : ಕೆ.ಇ. ಚಿದಾನಂದಪ್ಪ Hadapada Appanna: The Great Shivasharana Who Propagated the Message of Equality and Humanity – K.E.

ಲೋಕದರ್ಶನ ವರದಿ 

         ಬಳ್ಳಾರಿ 29: ಶಿವಶರಣ ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಜಾತಿ, ಲಿಂಗ ಹಾಗೂ ಅಸ್ಪೃಶ್ಯತೆ ವಿರುದ್ಧ ಸಾಮಾಜಿಕ ಜಾಗೃತಿ ಮೂಡಿಸಿ ಸಮಾನತೆ ಮತ್ತು ಮಾನವೀಯತೆಯ ಸಂದೇಶ ಸಾರಿದ ಮಹಾನ್ ಶರಣರಾಗಿದ್ದಾರೆ ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ. ಚಿದಾನಂದಪ್ಪ ಹೇಳಿದರು. 

ನಗರದ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಬಸವಣ್ಣನವರ ಆಪ್ತ ಸಹಚರರಾಗಿದ್ದ ಹಡಪದ ಅಪ್ಪಣ್ಣ ಅವರು ಸಮಾಜದಲ್ಲಿದ್ದ ಜಾತಿ ಮತ್ತು ಲಿಂಗ ತಾರತಮ್ಯದ ವಿರುದ್ಧ ಧ್ವನಿ ಎತ್ತಿದ ಶ್ರೇಷ್ಠ ಶರಣರಾಗಿದ್ದರು. "ಅಪ್ಪಣ್ಣ ಪ್ರಿಯ ಚನ್ನಬಸವಣ್ಣ" ಅಂಕಿತನಾಮದಲ್ಲಿ 300ಕ್ಕೂ ಅಧಿಕ ವಚನಗಳನ್ನು ರಚಿಸಿ ಸಮಾನತೆ, ಕಾಯಕ, ದಾಸೋಹ ಹಾಗೂ ಮಾನವೀಯ ಮೌಲ್ಯಗಳನ್ನು ಜನರಿಗೆ ತಲುಪಿಸಿದರು ಎಂದು ಹೇಳಿದರು. 

ಮೂಢನಂಬಿಕೆಗಳನ್ನು ತೊಡೆದುಹಾಕುವ ನಿಟ್ಟಿನಲ್ಲಿ ಬಸವಣ್ಣನವರು ಅನುಭವ ಮಂಟಪಕ್ಕೆ ಬರುವವರಿಗೆ ಹಡಪದ ಅಪ್ಪಣ್ಣರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆಯುವಂತೆ ಸೂಚಿಸುತ್ತಿದ್ದರು. ಅವರ ಪತ್ನಿ ಲಿಂಗಮ್ಮ ಕೂಡ ವಚನಗಾರ್ತಿಯಾಗಿದ್ದು, ಸಮಾಜ ಸುಧಾರಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. 

ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಬಳ್ಳಾರಿಯ ಶ್ರೀ ಸತ್ಯಂ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಆಲಂಭಾಷ ಮಾತನಾಡಿ, ಹಡಪದ ಅಪ್ಪಣ್ಣ ಅವರು ಬಸವಣ್ಣನವರ ಬಾಲ್ಯದ ಗೆಳೆಯರಾಗಿದ್ದು, ವಿಶ್ವದ ಮೊದಲ ಪ್ರಜಾಪ್ರಭುತ್ವ ಸಂಸತ್ತೆಂದು ಖ್ಯಾತಿ ಪಡೆದ ಅನುಭವ ಮಂಟಪದ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು ಎಂದು ಹೇಳಿದರು. 

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಜನಿಸಿದ ಹಡಪದ ಅಪ್ಪಣ್ಣ ಅವರ ವಚನಗಳಲ್ಲಿ ಕಾಯಕ, ದಾಸೋಹ, ಭಕ್ತಿ, ವೈರಾಗ್ಯ, ಷಟಸ್ಥಲ ಹಾಗೂ ಸಾಮಾಜಿಕ ಸಮಾನತೆಯ ಮೌಲ್ಯಗಳು ಪ್ರತಿಫಲಿಸುತ್ತವೆ ಎಂದು ವಿವರಿಸಿದರು. 

ಹಡಪದ ಅಪ್ಪಣ್ಣ ಸೇವಾ ಸಮಿತಿಯ ಜಿಲ್ಲಾಧ್ಯಕ್ಷ ಹೆಚ್‌. ರುದ್ರ​‍್ಪ ಮಾತನಾಡಿ, ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರ ಜಾಗ ಹಾಗೂ ವಿಶೇಷ ಅನುದಾನ ಒದಗಿಸಬೇಕು. ಸಮುದಾಯದವರಿಗೆ ಜಾತಿ ಪ್ರಮಾಣಪತ್ರ ವಿತರಣೆಯಲ್ಲಿ ಎದುರಾಗುತ್ತಿರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕೆಂದು ಸರ್ಕಾರವನ್ನು ಆಗ್ರಹಿಸಿದರು. 

ಕಾರ್ಯಕ್ರಮಕ್ಕೆ ಶ್ರೀ ಮಳೆ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇದೇ ಸಂದರ್ಭದಲ್ಲಿ ಸಿರುಗುಪ್ಪ ತಾಲೂಕಿನ ಎಸ್‌.ಆರ್‌.ಎಂ. ಶರಣ ಬಸವ ಅವರ ತಂಡದಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು. 

ಸಂಭ್ರಮದ ಮೆರವಣಿಗೆ 

ಜಯಂತಿ ಅಂಗವಾಗಿ ನಗರದ ಮುನ್ಸಿಪಲ್ ಕಾಲೇಜು ಆವರಣದಿಂದ ಆರಂಭವಾದ ಮೆರವಣಿಗೆ ಇಂದಿರಾ ವೃತ್ತ, ಗಡಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೇ ಬ್ರೂಸ್‌ಪೇಟೆ, ತೇರುಬೀದಿ, ಜೈನ್ ಮಾರ್ಕೆಟ್ ಹಾಗೂ ಹೆಚ್‌.ಆರ್‌. ಗವಿಯಪ್ಪ ವೃತ್ತ ಮಾರ್ಗವಾಗಿ ಡಾ. ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ಸಂಭ್ರಮದಿಂದ ಸಾಗಿತು. ವಿವಿಧ ಜಾನಪದ ಹಾಗೂ ಸಾಂಸ್ಕೃತಿಕ ಕಲಾತಂಡಗಳ ಪ್ರದರ್ಶನ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. 

ಈ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ರಾಜ್ಯ ಸಂಘಟನಾ ಕಾರ್ಯದರ್ಶಿ ಶಶಿಕುಮಾರ, ಕರ್ನಾಟಕ ಬೈಲಾಟ ಅಕಾಡೆಮಿಯ ಮಾಜಿ ಸದಸ್ಯ ತಿಪೇಸ್ವಾಮಿ, ಹಡಪದ ಅಪ್ಪಣ್ಣ ಸೇವಾ ಸಮಿತಿಯ ಪದಾಧಿಕಾರಿಗಳು, ಸಮಾಜದ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.