ಸರ್ಕಾರಿ ಶಾಲೆ ಶಿಕ್ಷಕನ ಉಚಿತ ಕೊಡುಗೆ ಶ್ಲಾಘನೀಯ: ರವಿ ಮಳಗಿ
ಕುಕನೂರು 08: ತಾಲೂಕಿನ ಮಂಗಳೂರು ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಸಿದ್ದಲಿಂಗನಗರ ಒಂದರಿಂದ ಐದನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳಿಗೆ ಅದೆ ಶಾಲೆಯ ಶಿಕ್ಷಕರಾದ ಹನುಮಂತಪ್ಪ ಎನ್ ಉಪ್ಪಾರ್ ರವರು ಉಚಿತವಾಗಿ ಸಿದ್ದ ಉಡುಪು, ನೋಟ್ ಬುಕ್ ಹಾಗೂ ಪೆನ್ನು ವಿತರಿಸಿದರು.
ಈ ಒಂದು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಂಗಳೂರು ವಲಯದ ಸಂಪನ್ಮೂಲ ವ್ಯಕ್ತಿಗಳಾದ ರವಿ ಡಿ ಮಳಗಿಯವರು ಮಾತನಾಡುತ್ತಾ ಸರ್ಕಾರಿ ಶಾಲೆಯ ಶಿಕ್ಷಕರು ಈ ರೀತಿಯ ಉಚಿತ ಸಿದ್ಧ ಉಡುಪು ಹಾಗೂ ಕಲಿಕಾ ಸಾಮಗ್ರಿಗಳನ್ನು ವಿತರಣೆ ಮಾಡುತ್ತಿರುವುದು ಅತ್ಯಂತ ಶ್ಲಾಘನೀಯವಾದದು. ಮಕ್ಕಳು ಶೈಕ್ಷಣಿಕವಾಗಿ ಮುಂದುವರೆಯಲು, ಶಾಲೆಯ ಕಡೆಗೆ ಆಕರ್ಷಣೆಗೊಳ್ಳುತ್ತಾರೆ, ಬಡ ವಿದ್ಯಾರ್ಥಿಗಳು ಖಾಸಗಿ ಶಾಲೆಯ ಮಕ್ಕಳಂತೆ ತಾವು ಕೂಡ ಒಳ್ಳೆಯ ಬಟ್ಟೆಯನ್ನು ಧರಿಸಿಕೊಂಡು ಶಾಲೆಗೆ ಬರಲು ಹೆಚ್ಚು ಖುಷಿ ಪಡುತ್ತಾರೆ. ಮಕ್ಕಳು ಹರ್ಷಗೊಂಡು ಪ್ರತಿನಿತ್ಯ ತಪ್ಪದೇ ಶಾಲೆಗೆ ಬರಲು ಇಂತಹ ಉತ್ತೇಜಕಗಳು ಅವಶ್ಯಕ ಎಂದರು. ಉಚಿತವಾಗಿ ಸಿದ್ಧ ಉಡುಪು ಹಾಗೂ ನೋಟ್ ಬುಕ್,ಪೆನ್ ವಿತರಣೆ ಮಾಡಿ ಹನುಮಂತಪ್ಪ ಉಪ್ಪಾರ್ ಮಾತನಾಡುತ್ತಾ ಶಾಲೆಗೆ ದಾಖಲಾದ ಎಲ್ಲಾ ಮಕ್ಕಳು ಪ್ರತಿದಿನ ತಪ್ಪದೇ ಶಾಲೆಗೆ ಬರುವುದರಲ್ಲಿ ಸಂದೇಹವಿಲ್ಲ. ವಿದ್ಯಾರ್ಥಿಗಳು ಪ್ರತಿನಿತ್ಯ ಶಿಸ್ತಿನಿಂದ ಕಂಗೊಳಿಸುತ್ತಾರೆ. ಕನಿಷ್ಠ ಕಲಿಕಾ ಮಟ್ಟಕ್ಕಿಂತ ಹೆಚ್ಚು ಓದಿನ ಕಡೆಗೆ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಗುಣಮಟ್ಟದ ಕಲಿಕೆ ನೂರಕ್ಕೆ ನೂರರಷ್ಟು ಆಗುವುದರಲ್ಲಿ ಸಂದೇಹವಿಲ್ಲ. ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸರಕಾರ ಎಲ್ಲವುಗಳನ್ನು ಉಚಿತವಾಗಿ ನೀಡುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿ. ದಯವಿಟ್ಟು ಪಾಲಕರು ತಮ್ಮ ಮಕ್ಕಳನ್ನು ಹತ್ತಿರದ ಸರ್ಕಾರಿ ಶಾಲೆಗೆ ಸೇರಿಸಬೇಕು, ಎಲ್ಲಾ ಸರ್ಕಾರಿ ಶಾಲೆಯಲ್ಲಿ ಹೆಚ್ಚು ಅನುಭವಿ ನುರಿತ ಶಿಕ್ಷಕರು ಇರುವುದರಿಂದ ಉಚಿತ ಹಾಗೂ ಖಚಿತವಾದ ಗುಣಮಟ್ಟದ ಶಿಕ್ಷಣ ಸಿಗುವುದರಲ್ಲಿ ಸಂದೇಹವಿಲ್ಲವೆಂದರು. ಸ್ಥಳೀಯ ಕೆ ಪಿ ಎಸ್ ಶಾಲೆಯ ಭೌತಿಕ ಸಮಿತಿಯ ಅಧ್ಯಕ್ಷರಾದ ಬಾಬುಸಾಬ್ ಗೋಡೆಕಾರ ಮಾತನಾಡುತ್ತಾ ಹನುಮಂತಪ್ಪ ಶಿಕ್ಷಕರ ಉಚಿತ ಸೇವೆಯ ಕೊಡುಗೆ ಅನನ್ಯವಾದುದ್ದು. ಸರ್ಕಾರಿ ಶಾಲೆಯ ಪ್ರಗತಿಗೆ ಮಕ್ಕಳ ಕಲಿಕೆಗೆ ಇಂತಹ ಪ್ರೋತ್ಸಾಹಗಳು ಅವಶ್ಯ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯತಿ ಸದಸ್ಯರಾದ ಮಂಜುನಾಥ ಆರೇರ, ಎಸ್ ಡಿ ಎಂ ಸಿ ಸದಸ್ಯರು ಹಾಗೂ ಪಾಲಕರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರಾದ ಮಂಗಳೇಶ್ ಯತ್ನಟ್ಟಿ ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಅನಿಲಕುಮಾರ್ ನಿಂಗಾಪೂರ ಮಾಡಿ ಕೊನೆಗೆ ಸರ್ವರಿಗೂ ವಂದಿಸಿದರು.