ಶ್ರೀ ಬಸವರಾಜ ರಾಯರೆಡ್ಡಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ: ಪೂಜ್ಯ ಮಹಾದೇವ ಸ್ವಾಮೀಜಿ

ಶ್ರೀ ಬಸವರಾಜ ರಾಯರೆಡ್ಡಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ನೀಡಿ: ಪೂಜ್ಯ ಮಹಾದೇವ ಸ್ವಾಮೀಜಿ Give the post of Deputy Chief Minister to Shri Basavaraja Rayareddy: Pujya Mahadeva Swamiji

ಕುಕನೂರ  01 : ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿ ಹಾಗೂ ಪ್ರಾದೇಶಿಕ ನ್ಯಾಯದ ದೃಷ್ಟಿಯಿಂದ ಯಲಬುರ್ಗಾ ಕ್ಷೇತ್ರದ ಹಿರಿಯ ಶಾಸಕ, ನಮ್ಮ ಭಾಗದ ಜನನಾಯಕ ಶ್ರೀ ಬಸವರಾಜ ರಾಯರೆಡ್ಡಿ ಅವರಿಗೆ ಕರ್ನಾಟಕ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಪೂಜ್ಯ ಮಹಾದೇವ ಸ್ವಾಮೀಜಿ ಅವರು ಸರ್ಕಾರವನ್ನು ಆಗ್ರಹಿಸಿದ್ದಾರೆ.ಶ್ರೀ ರಾಯರೆಡ್ಡಿ ಅವರು ಏಳು ಬಾರಿ ಶಾಸಕರಾಗಿ, ಸಚಿವರಾಗಿ, ಸರ್ಕಾರದ ಮುಖ್ಯ ಸಚೇತಕರಾಗಿ ರಾಜ್ಯಕ್ಕೆ ಅನುಪಮ ಸೇವೆ ಸಲ್ಲಿಸಿದ್ದಾರೆ.

ಕಲ್ಯಾಣ ಕರ್ನಾಟಕದ ನೀರಾವರಿ ಯೋಜನೆಗಳು, ಶಿಕ್ಷಣ, ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಅವರ ಕೊಡುಗೆ ಅಪಾರ. ಉತ್ತರ ಕರ್ನಾಟಕದ ಧ್ವನಿಯಾಗಿ ವಿಧಾನಸಭೆಯಲ್ಲಿ ನಿರಂತರವಾಗಿ ಕೆಲಸ ಮಾಡಿದ್ದಾರೆ.ಉತ್ತರ ಕರ್ನಾಟಕ, ವಿಶೇಷವಾಗಿ ಗದಗ-ಕೊಪ್ಪಳ ಭಾಗಕ್ಕೆ ಇದುವರೆಗೂ ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿಲ್ಲ. ಪ್ರಾದೇಶಿಕ ಅಸಮಾನತೆ ಹೋಗಲಾಡಿಸಲು, ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಆದ್ಯತೆ ನೀಡಲು ಈ ಭಾಗದ ಹಿರಿಯ ನಾಯಕರಿಗೆ ಅವಕಾಶ ಕಲ್ಪಿಸುವುದು ಅತ್ಯಗತ್ಯ. ಶ್ರೀ ರಾಯರೆಡ್ಡಿ ಅವರ ಅನುಭವ, ಜನಪರ ಕಾಳಜಿ ಮತ್ತು ಆಡಳಿತಾತ್ಮಕ ಚಾಕಚಕ್ಯತೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಲಿದೆ.ಲಿಂಗಾಯತ ಸಮಾಜದ ಪ್ರಮುಖ ನಾಯಕರಾಗಿ, ಎಲ್ಲಾ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಗುಣ ಅವರಲ್ಲಿದೆ.

ತುಂಗಭದ್ರಾ, ಮಹದಾಯಿ ಯೋಜನೆ ಸೇರಿದಂತೆ ನಮ್ಮ ಭಾಗದ ಬಹುದಿನಗಳ ಬೇಡಿಕೆಗಳಿಗೆ ನ್ಯಾಯ ದೊರಕಿಸಲು ಅವರಿಗೆ ಅಧಿಕಾರದ ಉನ್ನತ ಸ್ಥಾನ ನೀಡುವುದು ಸೂಕ್ತ.ಆದುದರಿಂದ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಕಾಂಗ್ರೆಸ್ ಹೈಕಮಾಂಡ್ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಕಲ್ಯಾಣ ಕರ್ನಾಟಕದ ಜನತೆಯ ಭಾವನೆಗೆ ಸ್ಪಂದಿಸಿ ಶ್ರೀ ಬಸವರಾಜ ರಾಯರೆಡ್ಡಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನವನ್ನು ಘೋಷಿಸಬೇಕು ಎಂದು ಅನ್ನದಾನೀಶ್ವರ ಮಠದ ಭಕ್ತರ ಪರವಾಗಿ ಒತ್ತಾಯಿಸುತ್ತೇವೆ ಎಂದು ಶ್ರೀಮಠದಲ್ಲಿ ಪತ್ರಕರ್ತರ ರೊಂದಿಗೆ ಮಾತನಾಡುತ್ತಾ ಹೇಳಿದರು.