ರಾಜ್ಯ

ಪಶ್ಚಿಮ ಚಂಪಾರಣ್‌ನಲ್ಲಿ ಕುಟುಂಬ ಸಮಾರಂಭದ ವೇಳೆ ಜನರ ಗುಂಪಿಗೆ ಬಸ್ ಡಿಕ್ಕಿ: ಐವರು ಸಾವು, ಹಲವರಿಗೆ ಗಾಯ

ಪಶ್ಚಿಮ ಚಂಪಾರಣ್‌ನಲ್ಲಿ ಕುಟುಂಬ ಸಮಾರಂಭದ ವೇಳೆ ಜನರ ಗುಂಪಿಗೆ ಬಸ್ ಡಿಕ್ಕಿ: ಐವರು ಸಾವು, ಹಲವರಿಗೆ ಗಾಯ

ಬೆಟ್ಟಿಯಾ, ಆ. 22 : ಪಶ್ಚಿಮ ಚಂಪಾರಣ್ ಜಿಲ್ಲೆಯ ಲೌರಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಬಂಕಟ್ವಾ ಮಧ್ಯಮ ಶಾಲೆಯ ಸಮೀಪ ಶುಕ್ರವಾರ ತಡರಾತ್ರಿ ಕುಟುಂಬ ಸಮಾರಂಭದ ವೇಳೆ ರಸ್ತೆ ಬದಿಯಲ್ಲಿ ಸೇರಿದ್ದ ಜನರ ಗುಂಪಿಗೆ ನಿಯಂತ್ರಣ ತಪ್ಪಿದ ಬಸ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ ಐವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ.

ಪೊಲೀಸರ ಪ್ರಕಾರ, ಕುಟುಂಬ ಸಮಾರಂಭದ ಅಂಗವಾಗಿ ರಸ್ತೆ ಬದಿಯಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದನ್ನು ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ಸೇರಿದ್ದರು. ಈ ವೇಳೆ ಬಸ್‌ವೊಂದು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ಜನರಿಗೆ ಡಿಕ್ಕಿ ಹೊಡೆದು ಬಳಿಕ ಸ್ಥಳದಿಂದ ಪರಾರಿಯಾಗಿದೆ ಎಂದು ತಿಳಿದುಬಂದಿದೆ.

ಮೃತರನ್ನು ಛಂಗೂರ್ ರಾಮ್ (70), ಬಹಾದುರ್ ಮಹತೋ (45), ಸಂಜಯ್ ಕುಮಾರ್ (28), ರಾಕೇಶ್ ಕುಮಾರ್ ದುಬೆ (35) ಮತ್ತು ದೇವೇಂದ್ರ ದುಬೆ (35) ಎಂದು ಗುರುತಿಸಲಾಗಿದೆ.

ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಅವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪೊಲೀಸರು ಪ್ರಕರಣದ ಕುರಿತು ತನಿಖೆ ಆರಂಭಿಸಿದ್ದಾರೆ.

ಸುದ್ದಿ ಓದಿ