ಹೊಸ ಭತ್ತದ ತಳಿಯ ಕ್ಷೇತ್ರೋತ್ಸವಕ್ಕೆ ಚಾಲನೆ
ಹೊಸ ಭತ್ತದ ತಳಿಯ ಕ್ಷೇತ್ರೋತ್ಸವಕ್ಕೆ ಚಾಲನೆ
ಹೊಸ ಭತ್ತದ ತಳಿಯ ಕ್ಷೇತ್ರೋತ್ಸವಕ್ಕೆ ಚಾಲನೆ
ರಾಣಿಬೆನ್ನೂರ 27: ಆರ್.ಎನ್.ಆರ್-15048 (ತೆಲಂಗಾಣ ಸೋನಾ) ಭತ್ತದ ತಳಿಯು ಕಡಿಮೆ ಸಕ್ಕರೆ ಅಂಶವನ್ನು ಹೊಂದಿದ್ದು, ಈ ತಳಿಯು ಸಕ್ಕರೆ ರಹಿತ ಭತ್ತದ ತಳಿಯಾಗಿದ್ದು, ಉತ್ತಮವಾದ ಧಾನ್ಯ ಮತ್ತು ಉತ್ತಮ ಅಡುಗೆ ಗುಣಮಟ್ಟದಿಂದಾಗಿ ಹೆಚ್ಚಿನ ಮಾರುಕಟ್ಟೆ ಬೆಲೆಯನ್ನು ಪಡೆಯುತ್ತದೆ ಎಂದು ತಾಲ್ಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಹಾಗೂ ಹಿರಿಯ ವಿಜ್ಞಾನಿ ಡಾ. ಗುರುಪ್ರಸಾದ ಜಿ.ಎಸ್ ಹೇಳಿದರು. ತಾಲ್ಲೂಕಿನ ಫತ್ತೇಪುರ ಗ್ರಾಮದ ರೈತ ನಾಗರಾಜ್ ಅವರ ಕ್ಷೇತ್ರದಲ್ಲಿ ಸೋಮವಾರ ಹೊಸ ಭತ್ತದ ತಳಿ ಆರ್.ಎನ್.ಆರ್-15048 (ತೆಲಂಗಾಣ ಸೋನಾ) ತಳಿಯ ಕ್ಷೇತ್ರೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತೆಲಂಗಾಣ ಸೋನಾ ಎಂದೂ ಕರೆಯಲ್ಪಡುವ ಆರ್.ಎನ್‌ಆರ್15048 ಬೆಂಕಿ ಮತ್ತು ಕೊಳೆ ರೋಗಕ್ಕೆ ಹೆಚ್ಚು ನಿರೋಧಕವಾಗಿದೆ. ಇದು ಸಣ್ಣ ತೆಳ್ಳಗಿನ ಧಾನ್ಯವಾಗಿದೆ ಮತ್ತು ಇದು ಛಿದ್ರವಾಗದ ವಿಧವಾಗಿದೆ. ಉತ್ತಮ ಇಳುವರಿ ಪಡೆಯಲು ಬೀಜೋಪಚಾರದಿಂದ ಹಿಡಿದು ಕೊಯ್ಲಿನ ವೆರೆಗೆ ರೋಗ ಮತ್ತು ಕೀಟ ನಿರ್ವಹಣೆ ಬಹಳ ಮುಖ್ಯ ಎಂದರು. ಸಸಿ ಮಡಿ ತಯಾರಿಯ ಮುಂಚಿಂತವಾಗಿ ಬಿತ್ತನೆ ಬೀಜವನ್ನು 2 ಗ್ರಾಂ ಕಾರ್ಬನ್‌ಡೈಜಿಮ್ 50 ಡಬ್ಲೂ.ಪಿ. ಮತ್ತು 0.1 ಗ್ರಾಂ ಸ್ಟ್ರೆಪ್ಟೋಸೈಕ್ಲಿನ್ ಮತ್ತು 0.1 ಗ್ರಾಂ ಮೈಲುತುತ್ತೆ ಮತ್ತು 0.12 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ 50 ಡಬ್ಲೂ.ಪಿ. ಒಂದು ಲೀಟರ್ ನೀರಿನಲ್ಲಿ ಕರಗಿಸಿದ ದ್ರಾವಣದಲ್ಲಿ 20 ನಿಮಿಷಗಳ ಕಾಲ ನೆನೆಸಿ ನಂತರ ಸಸಿ ಮಡಿಗೆ ಚೆಲ್ಲಬೇಕು. ಸಸಿಗಳ ವಯಸ್ಸು 21 ರಿಂದ 25 ದಿನ ಆದಾಗ ನಾಟಿ ಮಾಡಬೇಕು. ಕಳೆಗಳ ನಿಯಂತ್ರಣಕ್ಕಾಗಿ ಭತ್ತದ ಗದ್ದೆಗಳಲ್ಲಿ ಹುಲ್ಲು ಜಾತಿ ಕಳೆಗಳು ಕಡಿಮೆ ಇದು, ಹೆಚ್ಚು ಅಗಲ ಎಲೆ ಕಸಗಳಿಂದ ಕೂಡಿದ್ದರೆ 2-4 ಡಿ ಸೋಡಿಯಂ ಉಪ್ಪು 80 ಡಬ್ಲೂ.ಪಿ. (ಪ್ರತಿ ಎಕರೆಗೆ 1.0 ಕಿಗ್ರಾಂ) 200 ಲೀ. ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಿ ನಿಯಂತ್ರಿಸಬಹುದು. ಭತ್ತದ ಗದ್ದೆಗಳ ಸಮೀಪ ಹತ್ತಿ ಬೆಳೆ ಇರುವಲ್ಲಿ ಈ ಕಳೆನಾಶಕವನ್ನು ಉಪಯೋಗಿಸಬಾರದು ಎಂದು ತಿಳಿಸಿದರು. ಕೇಂದ್ರದ ಮಣ್ಣು ತಜ್ಞೆ ಡಾ. ರಶ್ಮಿ ಸಿ. ಎಂ ಮಾತನಾಡಿ, ಸಸಿ ಮಡಿಯಲ್ಲಿ ಪೋಷಕಾಂಶಗಳ ನಿರ್ವಹಣೆಗೆ ಸಂಯುಕ್ತ ಗೊಬ್ಬರ 15: 15: 15: ಮೂರು ಗುಂಟಗೆ 3 ಕೆಜಿ ಯಂತೆ ಬಳಸಬೇಕು. ಪ್ರತಿ 100 ಚದರ ಮೀಟರ್ ಕ್ಷೇತ್ರಕ್ಕೆ 1 ಕಿ. ಗ್ರಾಂ ಸಾರಜನಕ, 0.4 ಕಿಗ್ರಾಂ ರಂಜಕ ಮತ್ತು 0.5 ಕಿ. ಗ್ರಾಂ ಪೋಟ್ಯಾಷ್ ಒದಗಿಸುವ ರಾಸಾಯನಿಕ ಗೊಬ್ಬರಗಳನ್ನು 250 ಕಿಗ್ರಾಂ ಕೊಟ್ಟಿಗೆ ಗೊಬ್ಬರದೊಡನೆ ಬೆರೆಸಬೇಕು. ಮಣ್ಣಿನಲ್ಲಿ ತಂಪು ಹವೆ ಇರುವ ಪ್ರದೇಶದಲ್ಲಿ ಶಿಫಾರಸ್ಸಾದ ಎರಡರಷ್ಟು ರಂಜಕ ಒದಗಿಸುವುದರಿಂದ ಉತ್ತಮ ಸಸಿಗಳನ್ನು ಪಡೆಯಲು ಸಾಧ್ಯ ಎಂದರು. ಸಸಿ ನಾಟಿ ಮಾಡುವ 6 ದಿನಗಳ ಮುಂಚೆ ಪ್ರತಿ 100 ಚದರ ಮೀಟರ್ ಕ್ಷೇತ್ರಕ್ಕೆ 0.3 -0.6 ಕಿಗ್ರಾಂ ಸಾರಜನಕವನ್ನೊದಗಿಸುವ ರಾಸಾಯನಿಕ ಗೊಬ್ಬರಗಳನ್ನು ಮೇಲ್ಗೊಬ್ಬರವಾಗಿ ಕೊಡಬೇಕು. ಬಿತ್ತನೆಯಾದ 20-25 ದಿನಗಳಿಗೆ ಸಸಿಗಳು ನಾಟಿಗೆ ಸಿದ್ಧವಾಗುತ್ತವೆ. ಸಸಿಗಳನ್ನು ನಾಟಿ ಮಾಡಿವಾಗ ಲಘುಪೋಷಕಾಂಶಗಳ ಶೇ.1 ರ ದ್ರಾವಣದಲ್ಲಿ ಅದ್ದಿ ನಾಟಿ ಮಾಡಬೇಕು. ಮುಖ್ಯ ಭೂಮಿಗೆ ನಾಟಿ ಮಾಡಿದ 20 ದಿನಗಳ ಅವಧಿಯಲ್ಲಿ 20:20:20 ಗೊಬ್ಬರವನ್ನು ನೀಡಲು ಸಲಹೆ ನೀಡಿದರು.
ಹಸಿರೆಲೆ ಗೊಬ್ಬರವನ್ನು ಒದಗಿಸಲು ಎಕರೆಗೆ 4 ಟನ್ ಎಲೆ ಮತ್ತು ಎಳೆ ಕಾಂಡಗಳನ್ನು ಮಾತ್ರ ನಾಟಿಗೆ 3 ವಾರಗಳ ಮುಂಚೆ ಮಣ್ಣಿನಲ್ಲಿ ಬೆರೆಸಬೇಕು. ಭತ್ತದಲ್ಲಿ ಎಕರೆಗೆ 10 ಕಿಗ್ರಾಂ ಸತುವಿನ ಸಲ್ಫೇಟ್ ಮತ್ತು 10 ಕಿ ಗ್ರಾಂ ಕಬ್ಬಿಣದ ಸಲ್ಫೇಟ್ ಬಳಸುವುದರಿಂದ ಲಘು ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು ಎಂದು ತಿಳಿಸಿದರು.
ಈ ಕ್ಷೇತ್ರೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮದ ರೈತರು ಭಾಗವಹಿಸಿದ್ದರು. ಫೋಟೊ:27ಆರ್‌ಎನ್‌ಆರ್03ರಾಣಿಬೆನ್ನೂರ: ತಾಲ್ಲೂಕಿನ ಫತ್ತೇಪುರ ಗ್ರಾಮದ ರೈತ ನಾಗರಾಜ್ ಅವರ ಕ್ಷೇತ್ರದಲ್ಲಿ ಹೊಸ ಭತ್ತದ ತಳಿ ಆರ್.ಎನ್.ಆರ್ -15048 (ತೆಲಂಗಾಣ ಸೋನಾ) ತಳಿಯ ಕ್ಷೇತ್ರೋತ್ಸವಕ್ಕೆ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ.ಗುರುಪ್ರಸಾದ ಜಿ.ಎಸ್ ಚಾಲನೆ ನೀಡಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 