ಸಧೃಡ ಮಹಿಳೆ ಸಧೃಡ ಸಮಾಜ: ಡಾ. ಅಜಿತ ಪ್ರಸಾದ

ಸಧೃಡ ಮಹಿಳೆ ಸಧೃಡ ಸಮಾಜ: ಡಾ. ಅಜಿತ ಪ್ರಸಾದ A strong woman is a strong society: Dr. Ajit Prasad

ಲೋಕದರ್ಶನ ವರದಿ 

ಧಾರವಾಡ 04: ಮಹಿಳೆಯರಲ್ಲಿ ಆತ್ಮವಿಶ್ವಾಸ, ಆರ್ಥಿಕ ಸ್ವಾವಲಂಬನೆ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ಕೌಶಲ್ಯ ತರಬೇತಿಗಳು ಪ್ರಮುಖ ಪಾತ್ರವಹಿಸುತ್ತವೆ. ಒಂದು ಮನೆಯಲ್ಲಿ ನೆಮ್ಮದಿ ನೆಲಸಬೇಕಂದರೇ ಮನೆಯ ಮಹಿಳೆ ಸದೃಢ ಹಾಗೂ ಸಕ್ಷಮಳಾಗಿರಬೇಕು ಅಂದಾಗ ಮಾತ್ರ ಮನೆಯಲ್ಲಿ ಶಾಂತಿ ವಾತಾವರಣ ನೆಲೆಸಲು ಸಾಧ್ಯ ಎಂದು ಜೆ.ಎಸ್‌.ಎಸ್ ನ ಕಾರ್ಯದರ್ಶಿಗಳಾದ ಡಾ. ಅಜಿತ ಪ್ರಸಾದರವರು ಹೇಳಿದರು. 

ಅವರು ಧಾರವಾಡದ ವಿದ್ಯಾಗಿರಿಯ ಜೆ.ಎಸ್‌.ಎಸ್ ಉತ್ಸವ ಸಭಾಭವನದಲ್ಲಿ ಜೆ.ಎಸ್‌.ಎಸ್ ಕೌಶಲ್ಯ ಐ.ಟಿ.ಐ ವತಿಯಿಂದ ಮಹಿಳೆಯರಿಗಾಗಿ 15 ದಿನಗಳ ಕಾಲ ಆಯೋಜಿಲಾಗಿದ್ದ ಉಚಿತ ಹೊಲಿಗೆ ತರಬೇತಿ ಶಿಬಿರದ ಸಮಾರೋಪ ಹಾಗೂ ಪ್ರಮಾಣಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿ ಮಹಿಳೆಯರು ಶಿಕ್ಷಣ, ಉದ್ಯೋಗ, ಹಾಗೂ ಸಮಾಜ ಸೇವೆಯ ಕ್ಷೇತ್ರಗಳಲ್ಲಿ ಮುನ್ನಡೆಯುವಾಗ ಸಮಾಜವು ಸಮಗ್ರ ಅಭಿವೃದ್ಧಿಯನ್ನು ಸಾಧಿಸುತ್ತದೆ. ಮಹಿಳೆಯನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಪ್ರಯತ್ನ ಮಾಡಬೇಕು ಎಂದರು. 

ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಹಿಳಾ ಸಬಲೀಕರಣದ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿದ್ದು, ಸವದತ್ತಿ ರಸ್ತೆಯ ಕೌಶಲ್ಯ ಐ.ಟಿ.ಐ ನಲ್ಲಿ ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗಾಗಿ ಫ್ಯಾಶನ್ ಡಿಸೈನಿಂಗ್ ಕೋರ್ಸ ಪ್ರಾರಂಭಿಸಿದ್ದಾರೆ. ಈ ಕೋರ್ಸನ ಸದುಪಯೋಗ ಪಡೆದುಕೊಂಡು ಮಹಿಳೆಯರು ಮನೆಯಲ್ಲಿ ಸ್ವ-ಉದ್ಯೋಗ ಪ್ರಾರಂಭಿಸಬಹುದು ಅಥವಾ ಕೈಗಾರಿಕೆಗಳಲ್ಲಿ ಕೆಲಸವನ್ನು ಗಿಟ್ಟಿಸಿಕೊಳ್ಳಬಹುದು. ಅಲ್ಲದೇ ಮಹಿಳೆಯರಿಗಾಗಿ ಬೇಕರಿ ಪದಾರ್ಥ ತಯಾರಿಕೆ, ಹೊಲಿಗೆ ಕಸೂತಿ ತರಬೇತಿ, ಫಿನಾಯಿಲ್, ಸೋಪ್ ತಯಾರಿಕೆ ತರಬೇತಿ ನೀಡಿ ಮಹಿಳೆಯರ ಬಾಳಿಗೆ ದಾರೀದೀಪವಾಗುವಂತಹ ಕಾರ್ಯವನ್ನು ಜೆ.ಎಸ್‌.ಎಸ್ ಮಾಡುತ್ತಿದೆ ಎಂದು ಹೇಳಿದರು. 

ಜೆ.ಎಸ್‌.ಎಸ್ ನ ಆಡಳಿತಾಧಿಕಾರಿಗಳಾದ ಶ್ರೀ ಅರಿಹಂತ ಪ್ರಸಾದರವರು ಮಾತನಾಡಿ ಆಧುನಿಕಯುಗದಲ್ಲಿ ಕೌಶಲ್ಯಯುತ ತರಬೇತಿಗಳು ಮಹಿಳೆಯರು ಮನೆಯಲ್ಲೆ ಕುಳಿತು ಹೆಚ್ಚಿನ ಹಣ ಸಂಪಾದನೆ ಮಾಡುವಂತಹ ಅವಕಾಶಗಳನ್ನು ನೀಡುತ್ತಿವೆ. ಸರಕಾರ ಮತ್ತು ಬ್ಯಾಂಕುಗಳು ಸಹ ಮಹಿಳೆಯರಿಗೆ ಕಡಿಮೆ ದರದ ಸಾಲ ಸೌಲಭ್ಯ ನೀಡುವ ಮೂಲಕ ಸ್ವ-ಉದ್ಯೋಗಕ್ಕೆ ಅವಕಾಶ ಕಲ್ಪಿಸಿವೆ. ತರಬೇತಿ ಪೂರ್ಣಗೊಳಿಸಿದ ಮಹಿಳೆಯರು ಮನೆಯಲ್ಲಿ ಲಘು ಉದ್ಯಮ ಸ್ಥಾಪಿಸಿಕೊಂಡು ಸ್ವಾವಲಂಬನೆಯ ಜೀವನ ಸಾಗಿಸಿ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.  

ಜೆ.ಎಸ್‌.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಮಹಾವೀರ ಉಪಾದ್ಯೆಯವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಜೆ.ಎಸ್‌.ಎಸ್ ಐ.ಟಿ.ಐ ಕಾಲೇಜಿನ ಪ್ರಾಚಾರ್ಯರಾದ ಶ್ರೀ ರಾಹುಲ ಉಪಾದ್ಯೆ ವಂದಿಸಿದರು. ತರಬೇತುದಾರರಾದ ಅಶ್ವಿನಿ ದೇಸಾಯಿ, ಜಿನ್ನಪ್ಪ ಕುಂದಗೋಳ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಮಂಜುನಾಥ ಚಟ್ಟೇರ ಕಾರ್ಯಕ್ರಮ ನಿರೂಪಿಸಿದರು.