ಖ್ಯಾತ ನಿರೂಪಕ ಕಲಾದೇಗುಲ ಶ್ರೀನಿವಾಸ
Famous presenter Kaladegula Srinivas
ಲೋಕದರ್ಶನ ವರದಿ
‘ಕನ್ನಡ ಎನೆ ಕುಣಿದಾಡುವುದೆನ್ನದೆ ಕನ್ನಡ ಎನ್ನ ಕಿವಿ ನಿಮಿರುವುದು’ ಎಂಬ ರಾಷ್ಟ್ರಕವಿ ಕುವೆಂಪು ಅವರ ಕವಿವಾಣಿಯನ್ನು ಕಲಾದೇಗುಲ ಶ್ರೀನಿವಾಸ ಅವರು ತಮ್ಮದೇ ಆದ ವಿಶಿಷ್ಟ ಧ್ವನಿಯಲ್ಲಿ ಹೇಳುತ್ತಿದ್ದರೆ ಪ್ರೇಕ್ಷಕರ ಎದೆಯಲ್ಲಿ ಕನ್ನಡ ಬಾವುಟ ನೆಟ್ಟಂತೆ ಅನುಭವವಾಗುವದು. ಅಷ್ಟರಮಟ್ಟಿಗೆ ಅವರು ಕನ್ನಡದ ಹಿಡಿತ ಹೊಂದಿದ್ದಾರೆ. ಕನ್ನಡ ಪದಗಳ ಉಚ್ಛಾರ, ಸ್ಪುಟತೆ, ಪದಗಳ ಬಳಕೆ, ಹಾವ-ಭಾವದ ಮೂಲಕವೇ ಅವರು ಎಂತಹವರನ್ನೂ ಕನ್ನಡವನ್ನು ಪ್ರೀತಿಸುವಂತೆ ಮಾಡುತ್ತಾರೆ. ಎಲ್ಲ ಶೈಲಿಯ ಕಾರ್ಯಕ್ರಮಗಳನ್ನು ನಿರೂಪಿಸುವ ಕರ್ನಾಟಕದ ಕನ್ನಡದ ಖ್ಯಾತ ನಿರೂಪಕರು ಕಲಾದೇಗುಲ ಶ್ರೀನಿವಾಸ.
ಮೂಲತಃ ಬೆಂಗಳೂರಿನ ಮಾಗಡಿ ಹತ್ತಿರದ ಪುರಾಣಿಪಾಳ್ಯ ಗ್ರಾಮದವರಾದ ಶ್ರೀನಿವಾಸ ಅವರು ಸೆಪ್ಟೆಂಬರ 3ರಂದು ಜನಿಸಿದರು. ಅವರ ತಂದೆ ಪಿ.ಎನ್.ವೆಂಕಟಯ್ಯನವರು ಬೆಂಗಳೂರ ಜಲಮಂಡಳಿಯಲ್ಲಿ ಇಂಜನಿಯರ್‌ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಅವರ ತಾಯಿ ಗೃಹಿಣಿ, ಸುಂಸ್ಕೃತ ಕುಟುಂಬದಲ್ಲಿ ಬೆಳೆದ ಶ್ರೀನಿವಾಸ ಅವರಿಗೆ ತರಗತಿಯಲ್ಲಿ ಪ್ರಶ್ನೆಗೆ ಉತ್ತರ ಕೊಡುವದಾಗಲಿ, ಮನೆಯಲ್ಲಿ ಎಲ್ಲರೊಂದಿಗೆ ಬೆರೆತು ಮಾತಾಡುವದಾಗಲಿ ಆಗಿ ಬರುತ್ತಿರಲಿಲ್ಲ. ಅವರ ಮನೆಯಲ್ಲಿ ರೇಡಿಯೋ ಇತ್ತು. ಹೀಗಾಗಿ ರೇಡಿಯೋ ಸಂಸರ್ಗದಲ್ಲೇ ಬೆಳೆದರು. ಅವರು ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದಾಗಲೇ ರೇಡಿಯೋದಲ್ಲಿಯ ನಿರೂಪಕರ ಅಸ್ಖಲಿತ ಮಾತುಗಳಿಗೆ ಮೋಡಿಗೊಳಗಾಗಿದ್ದರು. ಆವಾಗಲೇ ರೇಡಿಯೋದಲ್ಲಿ ಮಾತನಾಡಬೇಕೆಂಬ ಆಸೆಯನ್ನು ಹೊಂದಿದ್ದರು. ಕೆಲವು ವರ್ಷಗಳ ನಂತರ ಮನೆಗೆ ಟಿ.ವಿ.ಬಂದಿತು. ಶ್ರೀನಿವಾಸರಿಗೆ ನಿರೂಪಕರ, ಜಾಹೀರಾತು ಲೋಕದ ಸಾಕ್ಷತ್ ದರ್ಶನವಾಯಿತು. ಆಗಾಲೇ ಟಿ.ವಿ.ಯಲ್ಲಿ ಕಾಣುವ ಕನಸನ್ನು ಹೊಂದಿದರು.
ಖ್ಯಾತ ಗಾಯಕ ಜಿ.ವಿ.ಅತ್ರಿ ಅವರಲ್ಲಿ ಸುಗಮ ಸಂಗೀತ ಅಭ್ಯಾಸ ಮಾಡಿದರು. ಸಂಗೀತದಲ್ಲೇ ಹೆಸರು ಮಾಡಬೇಕೆಂಬ ಹಂಬಲದೊಂದಿಗೆ ಬಿ.ಎ. ಪದವಿಯನ್ನು ಪೂರ್ಣಗೊಳಿಸಿದರು. 2001ರಲ್ಲಿ ‘ಇನ್ ಬೆಂಗಳೂರು’ ಎಂಬ ಕೇಬಲ್ ಟಿ.ವಿ.ಯಲ್ಲಿ ವಾರ್ತಾವಾಚಕರಾಗಿ ಮಾಧ್ಯಮ ಕ್ಷೇತ್ರಕ್ಕೆ ಪಾದಾರೆ್ಣ ಮಾಡಿದರು. ಅಲ್ಲಿ ಅವರಿಗೆ ನ್ಯೂಸ್ ರೀಡರ್ ಆಗಿ ಉಳಿಯದೇ ಎಲ್ಲ ವಿಭಾಗಗಳಲ್ಲೂ ಕೆಲಸ ಮಾಡುವ ಅವಕಾಶ ದೊರಕಿತು. ಕೇಬಲ್ ಟಿ.ವಿ. ಯಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಅವರು ಉದಯ ಟಿ.ವಿ.ಯಲ್ಲಿ ರೀಡರ್ ಆಗಿ ಕೆಲಸ ಪ್ರಾರಂಭಿಸಿದರು. ಕೆಲವೇ ದಿನಗಳಲ್ಲಿ ಶ್ರೀನಿವಾಸ ಅವರು ರಾತ್ರಿ 8.30 ಅಗ್ರ ರಾಷ್ಟ್ರೀಯ ವಾರ್ತೆ ಓದಲು ನಿಯೋಜಿತಗೊಂಡರು. ನಂತರ ಸುವರ್ಣವಾಹಿನಿಯಲ್ಲಿಯೂ ಕೆಲಸ ಮಾಡಿ ಸೈ ಎನಿಸಿಕೊಂಡರು. ಶಂಕರ ಟಿ.ವಿ., ಆಯುಷ್ ಟಿ.ವಿ., ಕಸ್ತೂರಿ ಟಿ.ವಿ., ಐಸಿರಿ ಟಿ.ವಿ., ಮುಂತಾದ ಖಾಸಗಿ ವಾಹಿನಿಗಳಲ್ಲಿ ಸೇವೆ ಸಲ್ಲಿಸಿದರು. ಶ್ರೀನಿವಾಸ ಅವರಿಗೆ ದೂರದರ್ಶದಿಂದ ಕರೆ ಬಂದಿದ್ದು ಅವರ ಜೀವನದ ಮತ್ತೊಂದು ತಿರುವು. ಆ ಒಂದು ತಿರುವು ಅವರ ಜೀವನವನ್ನೇ ಬದಲಾಯಿಸಿತು.
ಬೆಂಗಳೂರು ದೂರದರ್ಶನ ಅವರ ಅಂದದ ಮಾತುಗಳಿಗೆ ಚೆಂದದ ವೇದಿಕೆಯಾಯಿತು. ಬೆಂಗಳೂರು ದೂರದರ್ಶನದ ಸುದ್ದಿಯೊಂದನ್ನು ಹೊರತುಪಡಿಸಿ ಜನಪ್ರಿಯ ಕಾರ್ಯಕ್ರಮಗಳನ್ನು ನಡೆಸಿಕೊಟ್ಟ ಕೀರ್ತಿ ಶ್ರೀನಿವಾಸ ಅವರಿಗೆ ಸಲ್ಲುತ್ತದೆ. ಸಂದರ್ಶನ, ನೇರ ಪ್ರಸಾರ, ಸೇರಿದಂತೆ ಎಲ್ಲಾ ಕಾರ್ಯಕ್ರಮಗಳಲ್ಲಿ ಅವರು ತೊಡಗಿಕೊಂಡರು. ‘ಮಾತು ಒಂದು ಕಲೆ, ನಿರೂಪಕ ಇಡೀ ಕಾರ್ಯಕ್ರಮದ ಕೀಲಿಕೈ. ಅವರಾಡುವ ಪ್ರತಿ ಮಾತಿಗೂ ಮೌಲ್ಯವಿರುತ್ತದೆ. ಜಾಣ್ಣುಡಿ, ನಾಣ್ಣುಡಿ, ಗಾದೆ, ದೊಡ್ಡವರ ಮಾತುಗಳ ಉದ್ಧರಣೆ, ಇತಿಹಾಸ, ಪುರಾಣದ ಸನ್ನಿವೇಶಗಳ ಪ್ರಸ್ತಾವನೆ ಮೂಲಕ ಸಾಮಾನ್ಯ ಜ್ಞಾನದ ಅರಿವನ್ನೂ ನೀಡಬೇಕು. ಆದರೆ ಈ ಯಾವದೂ ಅಪ್ರಸ್ತುತವಾಗಬಾರದು ! ಇದಕ್ಕೆ ಓದುವ ಅಭ್ಯಾಸ ರೂಢಿಸಿಕೊಳ್ಳಬೇಕು. ಅಂದರೆ ಪ್ರತಿ ಕಾರ್ಯಕ್ರಮಗಳಿಗೂ ಮೊದಲು ಒಂದಷ್ಟು ಹೋಮ್‌ವರ್ಕ್ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತಾಗುವ ಅಪಾಯ ತಪ್ಪಿದಲ್ಲ’ಎಂದು ಕಲಾದೇಗುಲ ಶ್ರೀನಿವಾಸ ಹೇಳುತ್ತಾರೆ. ಪ್ರಸ್ತುತ ದೂರದರ್ಶನದ ಚಂದನ ವಾಹಿನಿ ಮತ್ತು ಎಸ್.ವಿ.ಬಿ.ಸಿ. 3 ಕನ್ನಡ ವಾಹಿನಿಯಲ್ಲಿ ನಿರೂಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ದೂರದರ್ಶನದ ನಿರೂಪಕರನ್ನು ಸರ್ಕಾರಿ ಕಾರ್ಯಕ್ರಮಗಳಿಗೆ ಬಳಸಿಕೊಳ್ಳುವ ಪರಂಪರೆ ದೆಹಲಿಯಲ್ಲಿ ಪ್ರಾರಂಭಾಗಿತ್ತು. ಹಿಗಾಗಿ ಅವರಿಗೆ ಸರ್ಕಾರಿ ಮತ್ತು ಖಾಸಗಿ ವಲಯದಿಂದ ನಿರೂಪಣೆಯ ಆವ್ಹಾನಗಳು ಸಾಕಷ್ಟು ಬಂದವು. ಅಚ್ಚರಿ ಸಂಗತಿ ಎಂದರೆ ಸಾವಿರಕ್ಕೂ ಅಧಿಕ ವೇದಿಕೆ ಕಾರ್ಯಕ್ರಮಗಳನ್ನು ನಿರೂಪಿಸಿದ ಖ್ಯಾತಿ ಅವರಿಗಿದೆ. ಯಾವದಾದರೂ ಕಾರ್ಯಕ್ರಮಗಳನ್ನು ಶ್ರೀನಿವಾಸ ಅವರು ನಿರೂಪಣೆ ಮಾಡುತ್ತಿದ್ದಾರೆ ಅಂದರೆ ಅಲ್ಲಿ ಕನ್ನಡ ಪದಗಳು ನಲಿದಾಡುತ್ತಿವೆ. ಮಾಜಿ ರಾಷ್ಟ್ರಪತಿಗಳಾದ ಡಾ.ಎ.ಪಿ.ಜೆ. ಅಬ್ದುಲ್‌ಕಲಾಂ, ರಾಮ್‌ನಾಥ್ ಕೋವಿಂದ, ಕರ್ನಾಟಕ ಶಾಸ್ತ್ರೀಯ ಸಂಗೀತದ ದಿಗ್ಗಜ ಡಾ.ಎಂ.ಬಾಲಮುರಳಿ ಕೃಷ್ಣ, ಬಾಲಿವುಡ್ ಗಾಯಕರಾದ ಅನುರಾಧ ಪೊಡ್ವಾಲ್, ಸೋನು ನಿಗಮ್, ದಲೇರ್ ಮೆಹಂದಿ, ಅಲ್ಕಾ ಯಾಗ್ನಿಕ್ ಮುಂತಾದ ಸಾಧಕರ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳ ಯಶಸ್ವಿ ನಿರೂಪಣೆ ಮಾಡಿದ್ದಾರೆ.
ನಿರೂಪಣೆ ಕ್ಷೇತ್ರದಲ್ಲಿನ ಜನಪ್ರಿಯತೆ ಶ್ರೀನಿವಾಸ ಅವರಿಗೆ ಧಾರಾವಾಹಿಗಳಲ್ಲಿ ಅವಕಾಶ ತಂದುಕೊಟ್ಟಿತು. ಶಿಖರ, ತನು ನಿನ್ನದು ಮನ ನಿನ್ನದು, ಬಣ್ಣ, ಮೌನ ರಾಗ, ಮನೆ ಬೆಳಕು, ಪಯಣ, ವಿಕ್ರಂ ಮತ್ತು ಬೇತಾಳ, ಶಿವ ಲೀಲಾಮೃತ, ಪಾಂಚಜನ್ಯ, ರಾಮಾಯಣ, ಜೈ ಆಂಜನೇಯ, ಶ್ರೀನಿವಾಸ ಕಲ್ಯಾಣ ಮುಂತಾದ ಧಾರಾವಾಹಿಗಳಲ್ಲಿ ನಟರಾಗಿ ಜನರ ಮನಗೆದ್ದರು. ನಾನು ನೀನು ಜೋಡಿ, ಮಳೆಗಾಲ, ಗರ್ಭದ ಗುಡಿ, ಕಾಳಿದಾಸ ಕನ್ನಡ ಮೇಷ್ಟ್ರು, ಸೆಪ್ಟೆಂಬರ್ 10 ಮುಂತಾದ ಚಲನಚಿತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ಅಲ್ಲದೇ ಚಲನಚಿತ್ರದಲ್ಲಿನ ಪ್ರಮುಖ ಪಾತ್ರಗಳಿಗೆ ಹಾಗೂ ಅನಿಮೇಟೆಡ್ ಚಲನಚಿತ್ರ ಮತ್ತು ಧಾರಾವಾಹಿಗಳಿಗೆ, ಸಾಕ್ಷ್ಯಚಿತ್ರಗಳಿಗೆ ಅವರು ಕಂಠದಾನ ಮತ್ತು ಹಿನ್ನೆಲೆ ಧ್ವನಿ ನೀಡಿದ್ದಾರೆ.
ಸುಗಮ ಸಂಗೀತ ಕ್ಷೇತ್ರದ ಖ್ಯಾತ ನಿರ್ದೇಶಕ ಜಿ.ವಿ.ಅತ್ರಿ ಅವರ ಬಳಿ ಕೆಲವರ್ಷಗಳವರೆಗೆ ಸುಗಮ ಸಂಗೀತ ಅಭ್ಯಾಸ ಮಾಡಿ, ಶ್ರೀನಿವಾಸ ಅವರು ಸಂಗೀತ ಕೆಲಸದಲ್ಲಿ ಕೆಲಸ ಮಾಡಲು ಆರಂಭಿಸಿದರು. ಅವರ ಸಂಗೀತ ನಿರ್ದೇಶನ ಮತ್ತು ಗೀತ ರಚನೆಯಲ್ಲಿ 15ಕ್ಕೂ ಹೆಚ್ಚು ಭಾವಗೀತೆ, ಭಕ್ತಿಗೀತೆ, ದೇಶ ಭಕ್ತಿಗೀತೆಗಳ ಸಿ.ಡಿ.ಗಳು ಹೊರಬಂದಿವೆ. ಅವರ ಸಂಗೀತ ನಿರ್ದೇಶನದ ಹಾಡುಗಳಿಗೆ ನಾಡಿನ ಖ್ಯಾತ ಗಾಯಕರಾದ ಎಸ್.ಜಾನಕಿ, ಎಸ್.ಪಿ.ಬಾಲಸುಬ್ರಮಣ್ಯಂ, ಕೆ.ಎಸ್.ಚೈತ್ರಾ, ಕೆ.ಎಸ್.ಸುರೇಖ, ವಿಜಯ ಪ್ರಕಾಶ, ರಾಜೇಶ ಕೃಷ್ಣನ್, ಹೇಮಂತ್, ಅನುರಾಧಾ ಭಟ್, ಸಂಗೀತಾ ಕಟ್ಟಿ, ಎಂ.ಡಿ.ಪಲ್ಲವಿ, ಶಂಕರ ಶಾನುಭಾಗ, ರಮೇಶಚಂದ್ರ ಶಮಿತಾ ಮಲೆನಾಡ್, ಜೋಗಿ ಸುನೀತಾ, ಮಂಗಳಾ ರವಿ, ಸುಪ್ರಿಯಾ ಆಚಾರ್ಯ, ದಿವ್ಯಾ ರಘುನಂದನ್, ಅಜಯ್ ವಾರಿಯರ್, ಬದರಿ ಪ್ರಸಾದ್, ಚೇತನ ಸೋಸ್ಕಾ ಉದಯ ಅಂಕೋಲಾ, ಸೀಮಾ ರಾಯ್ಕರ ಮುಂತಾದವರು ಧ್ವನಿಯಾಗಿದ್ದಾರೆ. ಇವನು ತುಂಬಾನೇ ಒರಟ, ಬಿಲಿಯನ್ ಡಾಲರ್ ಬೇಬಿ, ಶೇಷು, ಗರ್ಭದ ಗುಡಿ, ಅಕ್ಷಿ ಮುಂತಾದ ಚಲನಚಿತ್ರಗಳಿಗೆ ಸಂಗೀತ ನಿರ್ದೇಶನ ಹಾಗೂ ಗೀತರಚನೆ ಮಾಡಿದ್ದಾರೆ.
ಕಳೆದ 25 ವರ್ಷಗಳಿಂದ ಲಾಭ ರಹಿತ ಸಂಸ್ಥೆ ‘ಕಲಾದೇಗುಲ’ ದ ಕಾರ್ಯದರ್ಶಿಯಾಗಿ ಹಲವಾರು ಯಶಸ್ವಿ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದ್ದಾರೆ. ತಮ್ಮದೇ ಕಲಾದೇಗುಲ ಸ್ಟುಡಿಯೋ ನಿರ್ಮಾಣ ಸಂಸ್ಥೆಯ ಮೂಲಕ ನೇತ್ರದಾನದ ಮಹತ್ವ ಮತ್ತು ಮೂಢ ನಂಬಿಕೆಗಳ ಸಾಮಾಜಿಕ ಸಂದೇಶ ತಿಳಿಸುವ ‘ಅಕ್ಷಿ’ ಕನ್ನಡ ಚಲನಚಿತ್ರದ ನಿರ್ಮಾಣ, ಸಂಗೀತ ನಿರ್ದೇಶನ, ಗೀತ ರಚನೆ ಮತ್ತು ಪ್ರಮುಖ ಪಾತ್ರಧಾರಿಯಾಗಿ ಅಭಿನಯಿಸಿ, ಹೀಗೆ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ ದಿಟ್ಟತನ ಅವರದು. 2019ರಲ್ಲಿ ಪ್ರಾದೇಶಿಕ ಚಲನಚಿತ್ರ ಮತ್ತು 67ನೇ ರಾಷ್ಟ್ರ ಪ್ರಶಸ್ತಿಯನ್ನು ರಜತಕಮಲದಲ್ಲಿ ಪಡೆದ ಹೆಗ್ಗಳಿಕೆ ಅವರದು. ಓರ್ವ ಫ್ರೀಲ್ಯಾನ್ಸ್ ನಿರೂಪಕರು ನಿರ್ಮಿಸಿದ ಮೊದಲ ಚಲನಚಿತ್ರಕ್ಕೆ ರಾಷ್ಟ್ರ್ರಶಸ್ತಿ ಪಡೆದಿರುವದು, ಇಡೀ ಪ್ರಪಂಚದ ಸಿನಿಮಾ ಇತಿಹಾಸದಲ್ಲೇ ಮೊಟ್ಟಮೊದಲಯ ಎಂಬ ವಿಶೇಷ ಗೌರವ ಕಲಾ ದೇಗುಲ ಶ್ರೀನಿವಾಸ ಅವರದು.
2003ರಲ್ಲಿ ಕಲಾದೇಗುಲ ಸಂಘಟನೆಯಲ್ಲಿ ನಡೆಸಿದ ಕಾರ್ಯಕ್ರಮ ಅವರನ್ನು ನಿರೂಪಣಾ ಕ್ಷೇತ್ರಕ್ಕೆ ಪರಿಚಯಿಸಿತಲ್ಲದೇ ‘ಕಲಾದೇಗುಲ ಶ್ರೀನಿವಾಸ’ ಎಂಬ ಅನ್ವರ್ಥನಾಮದಿಂದ ಪ್ರಸಿದ್ಧಿ ಪಡೆದರು. ಕಲಾದೇಗುಲ ಶ್ರೀನಿವಾಸರು 2016ರಲ್ಲಿ ಗೊಂಬೆಗಳ ಖ್ಯಾತಿ ಚೆನ್ನಪಟ್ಟಣದ ಅನಿತಾ ಅವರನ್ನು ಮದುವೆಯಾದರು. ಅವರಿಗೆ ಓರ್ವ ಮಗಳು ಶ್ರೀನಿತ. ದೂರದರ್ಶನದಿಂದ ತಾವು ಬೆಳೆದಿರುವುದಕ್ಕಿಂತ ಹೆಚ್ಚಾಗಿ ಶ್ರೀನಿವಾಸ ಅವರು ಅದೆಷ್ಟೋ ಹೊಸ ಪ್ರತಿಭೆಗಳನ್ನು ಶೋಧಿಸಿ ಅವರಿಗೆ ಚಂದನ ವಾಹಿನಿಯಲ್ಲಿ ಅವಕಾಶ ನೀಡಿ, ಅವರೆಲ್ಲರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಬದುಕಿಗೆ ಬೆಲ್ಲವಾದದ್ದು ಮಾತ್ರ ಶತಃ ಸತ್ಯ. ಅದಕ್ಕೆ ಸದಾ ನಗು ಮೊಗದ ಈ ಭಾವಜೀವಿ ಎಂದರೆ ಎಲ್ಲರಿಗೂ ಎಲ್ಲಿಲ್ಲದ ಪ್ರೀತಿ ಮತ್ತು ವಿಶ್ವಾಸ, ಹೀಗಾಗಿ ಕಲಾದೇಗುಲ ಶ್ರೀನಿವಾಸ ಅವರು ಬಹಳಷ್ಟು ಜನರಿಗೆ ಪ್ರೀತಿ ಪಾತ್ರರಾಗಿದ್ದಾರೆ. ಅವರ ಸೇವೆ ಕನ್ನಡ ಸಾರಸ್ವತ ಲೋಕಕ್ಕೆ ನಿರಂತರವಾಗಿ ಮುಂದುವರೆಯಲಿ.
ಅವರ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಹಲವು ಸಂಘ-ಸಂಸ್ಥೆಗಳು ಪ್ರಶಸ್ತಿ-ಪುರಸ್ಕಾರಗಳನ್ನು ನೀಡಿ ಗೌರವಿಸಿವೆ. ‘ಶೇಷು’ ಚಲನಚಿತ್ರದ ಸಂಗೀತ ನಿರ್ದೇಶನ ಹಾಗೂ ಗೀತ ರಚನೆಗಾಗಿ ಉತ್ತಮ ಬಾಲ ನಟಿ ರಾಜ್ಯ ಪ್ರಶಸ್ತಿ ಪಡೆದ ಚಿತ್ರ, ‘ಅಕ್ಷಿ’ ಚಲನಚಿತ್ರವು ಕನ್ನಡದ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿ, ಶ್ರೇಷ್ಠ ನಿರೂಪಕ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿ-ಪುರಸ್ಕಾರಗಳು, ಅವರನ್ನರಿಸಿಕೊಂಡು ಬಂದಿವೆ. ಇಷ್ಟೇಲ್ಲಾ ಪ್ರಶಸ್ತಿ-ಪುರಸ್ಕಾರಗಳು ಅವರ ಮುಡಿಗೇರಿದರೂ ಅವರದು ಸರಳ ಸಜ್ಜನಿಕೆಯ ಜೀವನ. ಪರಿಶ್ರಮದ ಮೂಲಕ ನಿರೂಪಣಾ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದ ಕಲಾದೇಗುಲ ಶ್ರೀನಿವಾಸ ಅವರ ಸಾಧನೆ ಅನುಪಮವಾದುದು.
ಬೆಳಗಾವಿಯಲ್ಲಿ ಶಿವಾನಂದ ನೀಲಣ್ಣನವರಗೆ ಅಧಿಕಾರಿಗಳ ಶಾಕ್ : ಶಿವಂ ಅಸೋಸಿಯೇಟ್ ಕಚೇರಿಗಳ ಮೇಲೆ ದಾಳಿ
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ 