ಬರಗಾಲ ಇದೆಯೆಂಬ ಭಯಬೇಡ ಉದ್ಯೋಗ ಖಾತ್ರಿ ಕೆಲಸ ಇದೆ

ನರಗುಂದ 22 : ಬರಗಾಲವಿದೆಯೆಂದು ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಭಯಬೇಡ. ಎಪ್ರೀಲ್‌-1 ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭವಾಗುತ್ತಿದ್ದು, ಯೋಜನೆಯಡಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಅವಕಾಶವಿದೆ. ಗ್ರಾಮೀಣ ಪ್ರದೇಶಗಳ ಕಡುಬಡವರಿಗೂ ಯೋಜನೆಯ ಸದೂಪಯೋಗ ದೊರಕುವಂತಾಗಲಿ ಎಂದು ನರಗುಂದ ತಾಲೂಕು ಪಂಚಾಯತ ಸಹಾಯಕ ನಿರ್ದೇಶಕ (ಗ್ರಾಮೀಣ್ಘಉದ್ಯೋಗ) ಸಂತೋಷಕುಮಾರ್ ಪಾಟೀಲ ಅಭಿಪ್ರಾಯಪಟ್ಟರು.  

ನಗರದ ತಾಲೂಕು ಪಂಚಾಯತ ಸಭಾಭವನದಲ್ಲಿ ಶುಕ್ರವಾರ ನಡೆದ ಪಿಡಿಓ, ಕಾಯಕಬಂಧು ಹಾಗೂ ನರೇಗಾ ಸಿಬ್ಬಂದಿಯ ಒಂದು ದಿನದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.  

ಬರಗಾಲದ ತೀವೃತೆಯಿಂದ ಕೆಲಸ ಸಿಗದಿರುವ ಆತಂಕದಲ್ಲಿರುವ ಗ್ರಾಮೀಣ ಪ್ರದೇಶ ಕೂಲಿಕಾರರಿಗೆ ನೆರವಾಗಲೆಂದು ಎಪ್ರೀಲ್‌-1 ರಿಂದ ನರೇಗಾ ಯೋಜನೆಯಡಿ ಸಮುದಾಯ ಕಾಮಗಾರಿಗಳನ್ನು ಆರಂಭಿಸಲಾಗುತ್ತಿದೆ. ಇದ್ದೂರಲ್ಲೇ ನರೇಗಾ ಕೆಲಸ ಕೊಡುತ್ತಿರುವುದು ಗ್ರಾಮೀಣ ಪ್ರದೇಶದ ಜನರ ಗುಳೆ ತಪ್ಪಿಸುವ ಕೆಲಸವಾಗಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನರೇಗಾ ಯೋಜನೆ ಮಹತ್ವದ ಪಾತ್ರವಹಿಸಿದೆ. ಯೋಜನೆಯಡಿ ವಾರ್ಷಿಕವಾಗಿ 100 ದಿನಗಳವರೆಗೆ ಗ್ರಾಮೀಣ ಪ್ರದೇಶದ ಕೂಲಿಕಾರರಿಗೆ ಕೆಲಸ ಸಿಗುವಂತಾಗಬೇಕು. ಈ ಮೂಲಕ ಗ್ರಾಮೀಣ ಪ್ರದೇಶದ ಮೂಲಭೂತ ಸಮಸ್ಯೆಗಳನ್ನು ನಿವಾರಿಸಲು ನರೇಗಾ ವರದಾನವಾಗಲಿದೆ. ನರೇಗಾ ಕೆಲಸಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿಕಾರರನ್ನು ಸೇರಿಸುವ ಕೆಲಸವಾಗಬೇಕೆಂದು ತರಬೇತಿಯಲ್ಲಿ ಭಾಗವಹಿಸಿದ್ದ ಕಾಯಕಬಂಧುಗಳಿಗೆ ಕಿವಿಮಾತು ಹೇಳಿದರು.  

ಬೇಸಿಗೆ ಅವಧಿಯ 60 ದಿನಗಳ ಕಾಲ ನರೇಗಾ ಯೋಜನೆಯಡಿ ಕೆಲಸ ಮಾಡಿದ್ರೆ ಕೂಲಿಕಾರರಿಗೆ 18960 ರೂಪಾಯಿ ಸಿಗುತ್ತದೆ. ಕೂಲಿಕಾರರು ನರೇಗಾ ಯೋಜನೆಯಿಂದ ಬರುವ ಈ ಹಣವನ್ನು ಮುಂಗಾರಿನ ಕೃಷಿ ಭಿತ್ತನೆಯ ಕಾರ್ಯಕ್ಕೆ ಸದೂಪಯೋಗಪಡಿಸಿಕೊಳ್ಳಲು ನೆರವಾಗುವುದು ಎಂದು ಅಭಿಪ್ರಾಯಪಟ್ಟರು.  

ಪಂಚಾಯತ್ ರಾಜ್ ಇಲಾಖೆಯ ಸಹಾಯಕ ನಿರ್ದೇಶಕಿ ಶ್ರೀಮತಿ ಕೃಷ್ಣಮ್ಮ ಹಾದಿಮನಿ ಅವರು ಮಾತನಾಡಿ, ನರೇಗಾ ಕೆಲಸದಲ್ಲಿ ಮಹಿಳೆಯರು ಸ್ವಯಂ ಪ್ರೇರಣೆಯಿಂದ ಭಾಗವಹಿಸುವಂತ್ತಾಗಬೇಕು. ಮಹಿಳಾ ಸ್ವ-ಸಹಾಯ ಸಂಘದ ಸದಸ್ಯರು ನರೇಗಾ ಯೋಜನೆಯಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣ ಹೆಚ್ಚಿಸಲು ಶ್ರಮವಹಿಸಬೇಕೆಂದು ತಿಳಿಸಿದರು.   

ಕಾರ್ಯಾಗಾರದಲ್ಲಿ ಮಾಹಿತಿ ಮತ್ತು ಶಿಕ್ಷಣ ಸಂಯೋಜಕ ಸುರೇಶ ಬಾಳಿಕಾಯಿ ಮಾತನಾಡಿ, ಕಾಯಕಬಂಧುಗಳು ಎಂದರೇ ಯಾರು? ಕಾಯಕಬಂಧುಗಳ ಪಾತ್ರ ಮತ್ತು ಜವಾಬ್ದಾರಿ ಕುರಿತು ತರಬೇತಿ ನೀಡಿದರು.  

ಬೇಸಿಗೆ ಅವಧಿಯಲ್ಲಿ ರೈತರ ಹೊಲದಲ್ಲಿ ಯೋಜನೆಯಡಿ ನಿರ್ಮಿಸುವ ಕಂದಕಬಧುಗಳ ನಿರ್ಮಾಣ ಮತ್ತು ಅನುಷ್ಟಾನ ಕುರಿತು ತಾಂತ್ರಿಕ ಸಂಯೋಜಕ ಹನಮಂತ ಡಂಬಳ ವಿಷಯ ಮಂಡಿಸಿದರು.  

ತರಬೇತಿ ಕಾರ್ಯಾಗಾರವನ್ನು ಸಸಿಗೆ ನೀರೂಣಿಸುವ ಮೂಲಕ ಸಂತೋಷಕುಮಾರ್ ಪಾಟೀಲ್, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ, ಆನಂದ ಭೋವಿ ಸಹಾಯಕ ನಿರ್ದೇಶಕರು ಅಕ್ಷರ ದಾಸೋಹ ತಾಲೂಕು ಪಂಚಾಯತ ನರಗುಂದ ಅವರು ಜಂಟಿಯಾಗಿ ಉದ್ಘಾಟಿಸಿದರು.   

ತರಬೇತಿ ಕಾರ್ಯಾಗಾರದಲ್ಲಿ ನರಗುಂದ ತಾಲೂಕಿನ 13 ಗ್ರಾಮ ಪಂಚಾಯತಿಗಳ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಸಿಬ್ಬಂದಿ ವರ್ಗ, ಎಂಬಿಕೆ ಮತ್ತು ಎನ್‌.ಆರ್‌.ಎಲ್‌.ಎಂ ಸಿಬ್ಬಂದಿ ಹಾಜರಿದ್ದರು. ಎನ್‌.ಆರ್‌.ಎಲ್‌.ಎಂ ಸಂಯೋಜಕ ಲಕ್ಷ್ಮಣ ಪೂಜಾರ ನಿರೂಪಿಸಿದರು.