ಎಸ್‌ಐಆರ್ ಕಾರ್ಯದಲ್ಲಿ ಪಾಲಿಕೆ ಸಿಬ್ಬಂದಿಯ ಸಾಧನೆಗೆ ಜಿಲ್ಲಾಧಿಕಾರಿ ಶ್ಲಾಘನೆ

ಎಸ್‌ಐಆರ್ ಕಾರ್ಯದಲ್ಲಿ ಪಾಲಿಕೆ ಸಿಬ್ಬಂದಿಯ ಸಾಧನೆಗೆ ಜಿಲ್ಲಾಧಿಕಾರಿ ಶ್ಲಾಘನೆ  Deputy Commissioner praises the performance of Corporation staff in SIR-related work

ಬೆಳಗಾವಿ ಜು.30: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯವನ್ನು ಸಮರ​‍್ಕವಾಗಿ ನಿರ್ವಹಿಸುತ್ತಿರುವ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯವನ್ನು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಶ್ಲಾಘಿಸಿದರು.  

ಬುಧವಾರ ಸಂಜೆ ಪಾಲಿಕೆಯ ಚುನಾವಣಾ ಶಾಖೆಗೆ ಆಕಸ್ಮಿಕವಾಗಿ ಭೇಟಿ ನೀಡಿದ ಜಿಲ್ಲಾಧಿಕಾರಿಗಳು, ಪಾಲಿಕೆ ವ್ಯಾಪ್ತಿಯ ಉತ್ತರ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಎಸ್‌ಐಆರ್ ಕಾರ್ಯ ಮತ್ತು ಗಣಕೀಕರಣದ ಪ್ರಗತಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು.  

ಎಸ್‌ಐಆರ್ ಕಾರ್ಯವನ್ನು ಯಶಸ್ವಿಗೊಳಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿ ವಿಶ್ರಾಂತಿಯಿಲ್ಲದೆ ಶ್ರಮಿಸುತ್ತಿರುವುದನ್ನು ಮೆಚ್ಚಿದ ಅವರು, ಮಾತನಾಡುವ ತೊಂದರೆ ಇದ್ದರೂ ಅತ್ಯಂತ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ವಿಶಾಲ ಮಾವಿನಕಟ್ಟಿ ಅವರ ಸೇವೆಯನ್ನು ವಿಶೇಷವಾಗಿ ಪ್ರಶಂಸಿಸಿದರು.  

ಆಯುಕ್ತರು ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಮತ್ತು ಸಿಬ್ಬಂದಿಯ ಸಮನ್ವಯದಿಂದ ಕಾರ್ಯದಲ್ಲಿ ಉತ್ತಮ ಪ್ರಗತಿ ಸಾಧಿಸಲು ಸಾಧ್ಯವಾಗಿದ್ದು, ಇದು ಇತರ ಸಿಬ್ಬಂದಿಗೂ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.  

ಬಳಿಕ ಪಾಲಿಕೆ ಆವರಣದಲ್ಲಿರುವ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಪ್ರತಿಮೆಗೆ ಭೇಟಿ ನೀಡಿ, ಉದ್ಯಾನದ ಸ್ವಚ್ಛತೆ ಹಾಗೂ ನಿರ್ವಹಣೆಯನ್ನೂ ಮೆಚ್ಚಿದರು.  ಈ ಸಂದರ್ಭದಲ್ಲಿ ಪಾಲಿಕೆಯ ಕಂದಾಯ ವಿಭಾಗದ ಉಪ ಆಯುಕ್ತ ಹಾಗೂ ದಕ್ಷಿಣ ವಿಧಾನಸಭಾ ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿ ಡಾ. ಸಿದ್ದು ಹುಲ್ಲೋಳಿ ಅವರು, ಎಸ್‌ಐಆರ್ ಕಾರ್ಯದ ಪ್ರಗತಿ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.  ಭೇಟಿಯ ವೇಳೆ ಪಾಲಿಕೆಯ ಅಧಿಕಾರಿಗಳು, ಮೇಲ್ವಿಚಾರಕರು ಹಾಗೂ ಎಸ್‌ಐಆರ್ ಸಿಬ್ಬಂದಿ ಉಪಸ್ಥಿತರಿದ್ದರು.