ಬಳಿಗಾರ್ ಸ್ಮರಣಾರ್ಥ ಚದುರಂಗ ಸ್ಪರ್ಧೆ: ಮಕ್ಕಳಲ್ಲಿ ಚದುರಂಗದ ಆಸಕ್ತಿ ಬೆಳೆಸಲು ಕರೆ

ಬಳಿಗಾರ್ ಸ್ಮರಣಾರ್ಥ ಚದುರಂಗ ಸ್ಪರ್ಧೆ: ಮಕ್ಕಳಲ್ಲಿ ಚದುರಂಗದ ಆಸಕ್ತಿ ಬೆಳೆಸಲು ಕರೆ  Chess Tournament in Memory of Baligar: Call to Foster Interest in Chess Among Children

ಲೋಕದರ್ಶನ ವರದಿ

ಹುಬ್ಬಳ್ಳಿ, ಜು. 29: ವಚನ ಚದುರಂಗ ಸಂಸ್ಥೆ ಹಾಗೂ ನವನಗರ ನಿವಾಸಿಗಳ ಹಿತೋದ್ಧಾರಕ ಸಂಘದ ಆಶ್ರಯದಲ್ಲಿ ದಿವಂಗತ ಬಸವರಾಜ್ (ರಾಜು) ಶಿವಪ್ಪ ಬಳಿಗಾರ್ ಅವರ ಸ್ಮರಣಾರ್ಥ ನವನಗರದ ಈಶ್ವರ್ ದೇವಸ್ಥಾನದಲ್ಲಿ ಮುಕ್ತ ಚದುರಂಗ ಸ್ಪರ್ಧೆಯನ್ನು ಆಯೋಜಿಸಲಾಯಿತು.  

ಸ್ಪರ್ಧೆಯಲ್ಲಿ ಎಲ್ಲ ವಯೋಮಾನದ ಸ್ಪರ್ಧಿಗಳು ಮುಂಜಾನೆಯಿಂದ ಸಂಜೆಯವರೆಗೆ ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಬಳಿಕ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಶಿಕ್ಷಣ ತಜ್ಞ ಡಾ. ಕೆ.ಬಿ. ಗುಡಸಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದರು.  

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಕ್ಕಳು ರಜಾದಿನಗಳನ್ನು ಇಂತಹ ಜ್ಞಾನವರ್ಧಕ ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಚದುರಂಗ ಆಡುವುದರಿಂದ ಮೆದುಳಿನ ಚುರುಕುತನ, ನೆನಪಿನ ಶಕ್ತಿ ಹಾಗೂ ತಾರ್ಕಿಕ ಚಿಂತನೆ ವೃದ್ಧಿಯಾಗುತ್ತದೆ. ಇದು ಜ್ಞಾನಾರ್ಜನೆಗೆ ಅತ್ಯಂತ ಉಪಯುಕ್ತವಾದ ಕ್ರೀಡೆ ಎಂದು ಹೇಳಿದರು.  

ಭಾರತದ ಐದು ಬಾರಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಹಾಗೂ ಭಾರತದ ಮೊದಲ ಮಹಿಳಾ ಗ್ರ್ಯಾಂಡ್ಮಾಸ್ಟರ್ ಕೋನೇರು ಹಂಪಿ ಅವರ ಸಾಧನೆಯನ್ನು ಸ್ಮರಿಸಿದ ಅವರು, ಯುವ ಆಟಗಾರರು ಅವರಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿ ಗ್ರ್ಯಾಂಡ್ಮಾಸ್ಟರ್ ಪದವಿ ಗಳಿಸಬೇಕು ಎಂದು ಶುಭ ಹಾರೈಸಿದರು.  

ವಚನ ಚದುರಂಗ ಸಂಸ್ಥೆ ಹಾಗೂ ಧಾರವಾಡ ಜಿಲ್ಲಾ ಚದುರಂಗ ಸಂಸ್ಥೆಯ ಅಧ್ಯಕ್ಷ ಪ್ರಾಧ್ಯಾಪಕ ಡಾ. ವಿಶ್ವನಾಥ ಪಿ. ಬಳಿಗಾರ್ ಅವರು ಚದುರಂಗ ಕ್ರೀಡೆಯ ಬೆಳವಣಿಗೆಗಾಗಿ ಮಾಡುತ್ತಿರುವ ಸೇವೆಯನ್ನು ಮುಕ್ತಕಂಠದಿಂದ ಪ್ರಶಂಸಿಸಿದ ಡಾ. ಗುಡಸಿ, ಅವರ ಕಾರ್ಯಚಟುವಟಿಕೆಗಳು ನಿರಂತರವಾಗಿ ಮುಂದುವರಿಯಲಿ ಎಂದು ಆಶಿಸಿದರು.  

ಕಾರ್ಯಕ್ರಮದಲ್ಲಿ ಮುಕ್ತ ಚದುರಂಗ ಸ್ಪರ್ಧೆಯ ಸಂಯೋಜಕ ಹಾಗೂ ಧಾರವಾಡ ಜಿಲ್ಲಾ ಚದುರಂಗ ಸಂಸ್ಥೆಯ ಅಧ್ಯಕ್ಷ ಪ್ರಾಧ್ಯಾಪಕ ಡಾ. ವಿಶ್ವನಾಥ ಪಿ. ಬಳಿಗಾರ್, ಕೈಗಾರಿಕೋದ್ಯಮಿ ಸಿ.ವಿ. ಬಳಿಗಾರ್, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ಸುನೀತಾ ಮಾಳವದೆಕರ್, ಈಶ್ವರ್ ದೇವಸ್ಥಾನದ ಅಧ್ಯಕ್ಷ ಬಸವರಾಜ್ ಪಾಟೀಲ, ಅರವಿಂದ ಯೇರಿ, ವಿನಯ ಕುರ್ತಕೋಟಿ, ಎಸ್‌.ಎಂ. ಭಾಗವತ್, ಸೋಹನ ಸುರೇಶ ಹೊರಕೇರಿ, ಡಾ. ಸುರೇಶ ಡಿ. ಹೊರಕೇರಿ, ಪುಷ್ಪಲತಾ ಪಾಟೀಲ್, ಪ್ರಭು ರೋಣದ್, ಪವನಕುಮಾರ ಸರದೇಸಾಯಿ, ಮಲ್ಲಮ್ಮ ವಫಾ, ಸೈಯದಾ ಅಂಜುಮ್, ಪ್ರೊ. ಕಾಕೋಳ, ಪ್ರೊ. ತಬೀಬ, ಗೀರೀಶ್ ಕೊಪ್ಪಳ, ಸಿದ್ದಾರ್ಥ ಪಾಟೀಲ್, ಮೃತ್ಯುಂಜಯ್ ಮಟ್ಟಿ, ಕಿರಣ್ ಮಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.  

ಇದೇ ಸಂದರ್ಭದಲ್ಲಿ ವಿಶ್ವ ಚದುರಂಗ ದಿನಾಚರಣೆಯ ಅಂಗವಾಗಿ ಧಾರವಾಡ ಜಿಲ್ಲಾ ಚದುರಂಗ ಸಂಸ್ಥೆಯ ಅಧ್ಯಕ್ಷ ಡಾ. ವಿಶ್ವನಾಥ ಪಿ. ಬಳಿಗಾರ್ ಅವರನ್ನು ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿ ಹಾಗೂ ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಮಾಲಾರೆ​‍್ಣ ಮಾಡಿ ಸನ್ಮಾನಿಸಲಾಯಿತು.  

ಅಲ್ಲದೆ, ಇತ್ತೀಚೆಗೆ ಲಿಂಗೈಕ್ಯರಾದ ಬಸವರಾಜ್ (ರಾಜು) ಶಿವಪ್ಪ ಬಳಿಗಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಶ್ರದ್ಧಾಂಜಲಿ ಅರ​‍್ಿಸಲಾಯಿತು. ಈ ಸಂದರ್ಭದಲ್ಲಿ ಡಾ. ಸುರೇಶ ಡಿ. ಹೊರಕೇರಿ ಅವರು ದಿವಂಗತ ಬಳಿಗಾರ್ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಚದುರಂಗ ಆಟಗಾರರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.