ರಾಜ್ಯ

ಹೈಕೋರ್ಟ್‌ ಪೀಠ ಸೇರಿ ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

ಹೈಕೋರ್ಟ್‌ ಪೀಠ ಸೇರಿ ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

ಬೆಂಗಳೂರು 16: ಧಾರವಾಡದ ಹೈಕೋರ್ಟ್‌ ಪೀಠದ ಕಚೇರಿ ಹಾಗೂ ದಾವಣಗೆರೆ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲಾ ನ್ಯಾಯಾಲಯಗಳಿಗೆ ಸೋಮವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದೆ.  

ಧಾರವಾಡದಲ್ಲಿ ಕೋರ್ಟ್‌ ಆವರಣದಿಂದ ಎಲ್ಲರನ್ನು ಹೊರಗೆ ಕಳಿಸಿ ಪರೀಶೀಲನೆ ನಡೆಸಲಾಗುತ್ತಿದೆ. ವಾಹನಗಳನ್ನು ತಪಾಸಣೆ ಮಾಡವಾಗುತ್ತಿದೆ.ಕೆಲ ತಿಂಗಳ ಹಿಂದೆ ಹೈಕೋರ್ಟ್‌ ಪೀಠಕ್ಕೆ ಬಾಂಬ್ ಬೆದರಿಕೆ ಸಂದೇಶ ಇ-ಮೇಲ್ ನಲ್ಲಿ ಬಂದಿತ್ತು.  

ದಾವಣಗೆರೆ ಜಿಲ್ಲಾ ನ್ಯಾಯಾಲದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಜಿಲ್ಲಾ ನ್ಯಾಯಾಧೀಶರಿಗೆ ಮೇಲ್ ಬಂದಿದೆ. ಸ್ಫೋಟಕ ಇಡಲಾಗಿದೆ ಎಂದು ಬೆದರಿಕೆ ಹಾಕಲಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಕೋರ್ಟ್‌ ಒಳಗಿದ್ದ ಎಲ್ಲರನ್ನೂ ಹೊರಗೆ ಕಳುಹಿಸಿದ್ದಾರೆ.  

ವಕೀಲರು, ನ್ಯಾಯಾಧೀಶರು ಹಾಗೂ ಕಕ್ಷಿದಾರರು ನ್ಯಾಯಾಲಯದ ಹೊರಗೆ ಕಾಯುತ್ತಿದ್ದಾರೆ. ಬಾಂಬ್ ಪತ್ತೆದಳ, ಶ್ವಾನ ದಳ ಪರೀಶೀಲನೆ ನಡೆಸುತ್ತಿವೆ.  

ಕಾರವಾರ ಜಿಲ್ಲಾ ಸೆಷನ್ಸ್‌ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆಯ ಇಮೇಲ್ ಸಂದೇಶ ಬಂದಿದೆ. ಈ ಹಿನ್ನೆಲೆಯಲ್ಲಿ ಬಾಂಬ್ ಪತ್ತೆ ದಳ ಪರೀಶೀಲನೆ ಕೈಗೊಂಡಿದೆ.  

ನ್ಯಾಯಾಲಯ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಇಟ್ಟಿರುವ ಬೆದರಿಕೆಯ ಸಂದೇಶ ಬಂದಿತ್ತು. ನ್ಯಾಯಾಲಯದ ಕಲಾಪ ಆರಂಭಕ್ಕೆ ಮುನ್ನವೇ ಬಾಂಬ್ ಪತ್ತೆ ದಳದ ಸಿಬ್ಬಂದಿ ಪರೀಶೀಲನೆ ಕೈಗೊಂಡರು. ನ್ಯಾಯಾಲಯದ ಒಳಗೆ, ಹೊರ ಆವರಣ, ವಾಹನ ನಿಲುಗಡೆ ತಾಣಗಳಲ್ಲಿ ಪರೀಶೀಲನೆ ನಡೆಸಿದರು.  

ಅಪರಿಚಿತರಿಂದ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆಯಾಗಿ ತಪಾಸಣೆ ನಡೆಸಲಾಗಿದೆ. ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ. ಆದರೂ, ನಿಗಾ ಇರಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.  

ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ನ್ಯಾಯಾಲಯದ ಕಟ್ಟಡದಲ್ಲಿ ಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಇ- ಮೇಲ್ ಬಂದಿದ್ದು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳವು ಸೋಮವಾರ ತಪಾಸಣೆ ನಡೆಸಿದೆ.  

ರಾಮನಗರ ಜಿಲ್ಲಾ ಕೋರ್ಟ್‌ನಲ್ಲಿ ಬಾಂಬ್ ಇಟ್ಟಿರುವುದಾಗಿ ಇಮೇಲ್‌: ಆತಂಕದ ಸ್ಥಿತಿ ನಿರ್ಮಾಣ: ನಗರದ ಬಿ.ಎಂ. ರಸ್ತೆಯಲ್ಲಿರುವ ಬೆಂಗಳೂರು ದಕ್ಷಿಣ ಜಿಲ್ಲಾ ನ್ಯಾಯಾಲಯದ ಸಂಕೀರ್ಣದಲ್ಲಿ ನ್ಯಾಯಾಧೀಶರ ಕೊಠಡಿಯಲ್ಲಿ ಬಾಂಬ್ ಇಟ್ಟಿರುವುದಾಗಿ ಅಪರಿಚಿತರು ಸೋಮವಾರ ಇಲ್ಲಿನ ಕೋರ್ಟ್‌ನ ಇಮೇಲ್ ಐ.ಡಿ.ಗೆ ಬೆದರಿಕೆ ಸಂದೇಶ ಕಳಿಸಿದ್ದು, ಕೋರ್ಟ್‌ ಆವರಣದಲ್ಲಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ.  

ಮಧ್ಯಾಹ್ನ 12.35ರ ಸುಮಾರಿಗೆ ಕೋರ್ಟ್‌ನಲ್ಲಿ ಹನ್ನೆರಡು ಆರಿ​‍್ಡ.ಎಕ್ಸ್‌ ಬಾಂಬ್ ಇಟ್ಟಿರುವುದಾಗಿ ಇಮೇಲ್ ಬಂದಿರುವುದನ್ನು ಗಮನಿಸಿದ ನ್ಯಾಯಾಧೀಶರು, ಕೂಡಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದಿದ್ದಾರೆ. ತಕ್ಷಣ ಅಲರ್ಟ್‌ ಆದ ಪೊಲೀಸರು ನ್ಯಾಯಾಲಯದ ಆವರಣಕ್ಕೆ ಬಂದರು. ಕೋರ್ಟ್‌ ಒಳಗಡೆ ಇದ್ದ ನ್ಯಾಯಾಧೀಶರು, ಸಿಬ್ಬಂದಿ, ವಕೀಲರು ಹಾಗೂ ಹೊರಭಾಗದಲ್ಲಿದ್ದ ಸಾರ್ವಜನಿಕರನ್ನು ಹೊರಕ್ಕೆ ಕಳಿಸಿದರು.  

ಕೋರ್ಟ್‌ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಸಹ ತೆರವುಗೊಳಿಸಿದವರು. ಅಷ್ಟೊತ್ತಿಗೆ ಸ್ಥಳಕ್ಕೆ ಬಾಂಬ್ ಪತ್ತೆ ದಳ ಮತ್ತು ಶ್ವಾನದಳದ ಸಿಬ್ಬಂದಿ ಬಂದು, ಬಾಂಬ್ ಗಾಗಿ ಶೋಧ ಕಾರ್ಯಾಚರಣೆ ನಡೆಸಿದರು. ಪೊಲೀಸರು ಸಹ ಸಿಬ್ಬಂದಿಗೆ ಸಾಥ್ ನೀಡಿದರು.  

ಬಾಂಬ್ ಇಟ್ಟಿರುವ ಇಮೇಲ್ ವಿಷಯ ತಿಳಿಯುತ್ತಿದ್ದಂತೆ, ಸಾರ್ವಜನಿಕರು ಕೋರ್ಟ್‌ ಹೊರಭಾಗದಲ್ಲಿ ಜಮಾಯಿಸಿದರು. ಸ್ಥಳಕ್ಕೆ ಬಂದು ಹೋಗುತ್ತಿದ್ದ ಪೊಲೀಸ್ ಸಿಬ್ಬಂದಿಯನ್ನು ಕುತೂಹಲದಿಂದ ವೀಕ್ಷಿಸಿದರು.  

ಇಮೇಲ್ ಕುರಿತು ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಂ.ಎಚ್‌. ಅಣ್ಣಯ್ಯನವರ, ಎಲ್ಲಾ ನ್ಯಾಯಾಧೀಶರ ಕೊಠಡಿಗಳಲ್ಲಿ ಆರಿ​‍್ಡ.ಎಕ್ಸ್‌ ಬಾಂಬ್ ಇರಿಸಲಾಗಿದೆ ಎಂದು ಮಧ್ಯಾಹ್ನ 12.45ಕ್ಕೆ ಇಮೇಲ್ ಬಂದಿದ್ದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದೆವು. ತಮಿಳುನಾಡಿನಲ್ಲಿ ಇ.ಡಬ್ಲ್ಯೂ.ಎಸ್ ಮೀಸಲಾತಿ ಅನುಷ್ಠಾನ ತಡೆಯಿರಿ ಎಂದು ಸಹ ಇಮೇಲ್ ನಲ್ಲಿ ಒತ್ತಾಯಿಸಲಾಗಿದೆ ಎಂದರು.  

ಹಾವೇರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ  

ಇಲ್ಲಿಯ ಹಳೇ ಪಿ.ಬಿ. ರಸ್ತೆಯಲ್ಲಿರುವ ಜಿಲ್ಲಾ ನ್ಯಾಯಾಲಯದಲ್ಲಿ ಬಾಂಬ್ ಇರಿಸಿರುವುದಾಗಿ ಬೆದರಿಕೆ  ಬಂದಿದ್ದು, ಪೊಲೀಸರು ಸೋಮವಾರ ಬೆಳಿಗ್ಗೆಯಿಂದಲೇ ಪರೀಶೀಲನೆ ನಡೆಸುತ್ತಿದ್ದಾರೆ.  

ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರನ್ನು ನ್ಯಾಯಾಲಯ ಕಟ್ಟಡದಿಂದ ಹೊರಗೆ ಕಳುಹಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳದ ಪೊಲೀಸರು, ನ್ಯಾಯಾಲಯದ ಕಟ್ಟಡದ ಪ್ರತಿಯೊಂದು ಸ್ಥಳದಲ್ಲಿಯೂ ಶೋಧ ನಡೆಸುತ್ತಿದ್ದಾರೆ.  

‘ನ್ಯಾಯಾಲಯದ ಆವರಣಕ್ಕೆ ಬಂದಿರುವ ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ’ ಎಂದು ನ್ಯಾಯಾಲಯದ ಮುಖ್ಯ ಆಡಳಿತಾಧಿಕಾರಿ ಸುದರ್ಶನ ಕುಲಕರ್ಣಿ ಮಾಹಿತಿ ನೀಡಿದ್ದಾರೆ.  


ಸುದ್ದಿ ಓದಿ