ದಕ್ಷಿಣ ಆಫ್ಘನ್ ಪ್ರಾಂತ್ಯದಲ್ಲಿ ಘರ್ಷಣೆ: ಕನಿಷ್ಠ 21 ತಾಲಿಬಾನ್ ಉಗ್ರರು ಸಾವು
ಕಾಬೂಲ್, ಅಕ್ಟೋಬರ್ 1: ಆಫ್ಘಾನಿಸ್ತಾನದ ದಕ್ಷಿಣ ಭಾಗದ ಉರುಜ್ಗಾನ್ ಪ್ರಾಂತ್ಯದಲ್ಲಿ ನಡೆದ ಘರ್ಷಣೆ ಮತ್ತು ವೈಮಾನಿಕ ದಾಳಿಯಲ್ಲಿ ಕನಿಷ್ಠ 21 ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದು, ಇತರ 17 ಮಂದಿ ಗಾಯಗೊಂಡಿದ್ದಾರೆ ಎಂದು ಪ್ರಾಂತೀಯ ಸರ್ಕಾರದ ವಕ್ತಾರ ಗುರುವಾರ ತಿಳಿಸಿದ್ದಾರೆ.
ಶಸ್ತ್ರಸಜ್ಜಿತ ಉಗ್ರರು ಬಂದೂಕುಗಳು ಮತ್ತು ಗ್ರೆನೇಡ್ ಗಳಿಂದ ಮಂಗಳವಾರ ಭದ್ರತಾ ಪಡೆಗಳೊಂದಿಗೆ ಮತ್ತೆ ದಾಳಿ ಆರಂಭಿಸಿದ್ದರು. ಭದ್ರತಾ ಪಡೆಗಳು ಇದಕ್ಕೆ ಪ್ರತ್ಯುತ್ತರ ನೀಡಿದ್ದು, ಉಗ್ರರ ವಿರುದ್ಧದ ಹೋರಾಟದಲ್ಲಿ ಆಫ್ಘನ್ ವಾಯುಪಡೆ ಸಹ ಜೊತೆ ಸೇರಿತ್ತು ಎಂದು ವಕ್ತಾರ ಅಹ್ಮದ್ ಷಾ ಸಾಹಿಲ್ ಕ್ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮಂಗಳವಾರ ನಡೆದ ದಾಳಿಯಲ್ಲಿ ನಾಗರಿಕರು ಮತ್ತು ಭದ್ರತಾ ಪಡೆಗಳಿಗೆ ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಪ್ರಾಂತೀಯ ರಾಜಧಾನಿ ಟಿರಿನ್ ಕೋಟ್ ನಗರದ ಪಶ್ಚಿಮ ಭಾಗದಲ್ಲಿರುವ ದಿಹ್ರಾವುಡ್ ಪರ್ವತ ಜಿಲ್ಲೆಯು ಇತ್ತೀಚಿನ ವಾರಗಳಲ್ಲಿ ಭಾರೀ ಘರ್ಷಣೆಗೆ ನಾಂದಿ ಹಾಡಿದ್ದು, ತಾಲಿಬಾನ್ ಉಗ್ರರು ಈ ಪ್ರದೇಶದ ನಿಯಂತ್ರಣಕ್ಕೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ.
ಇತ್ತೀಚಿನ ವಾರಗಳಲ್ಲಿ ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನ ನೈರುತ್ಯ ದಿಕ್ಕಿಗೆ 370 ಕಿ.ಮೀ ದೂರದಲ್ಲಿರುವ ಪ್ರಾಂತ್ಯದಲ್ಲಿ ನಡೆದ ಘರ್ಷಣೆಗಳಲ್ಲಿ 100 ಕ್ಕೂ ಹೆಚ್ಚು ಭದ್ರತಾ ಪಡೆಗಳು ಮತ್ತು ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದು, ಇನ್ನೂ ಅನೇಕರು ಗಾಯಗೊಂಡಿದ್ದಾರೆ.