‘ಆಧ್ಯಾತ್ಮ ಸತ್ಯದ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡುವ ಸಾಧನ’

‘ಆಧ್ಯಾತ್ಮ ಸತ್ಯದ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡುವ ಸಾಧನ’ ‘A tool to provide a complete introduction to spiritual truth’

ಲೋಕದರ್ಶನ ವರದಿ 

ಬಳ್ಳಾರಿ 08: ಆಧ್ಯಾತ್ಮವು ಸತ್ಯದ ಬಗ್ಗೆ ಸಂಪೂರ್ಣ ಪರಿಚಯ ಮಾಡಿಕೊಡುವ ಸಾಧನವಾಗಿದ್ದು, ಇಡೀ ಜಗತ್ತಿಗೆ ಜ್ಞಾನದ ಬೆಳಕು ನೀಡುವ ಸಾಮರ್ಥ್ಯ ಭಾರತಕ್ಕೆ ಮಾತ್ರವಿದೆ ಎಂದು ಗದಗ-ವಿಜಯಪುರ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು ತಿಳಿಸಿದರು.  

ನಗರದ ಡಾ.ರಾಜ್ಕುಮಾರ್ ರಸ್ತೆಯಲ್ಲಿನ ಪಾಂಚಜನ್ಯ ಸಭಾಂಗಣದಲ್ಲಿ ವಿವೇಕಮಂಟಪ-ಉಪನ್ಯಾಸ ಮಾಲಿಕೆಯಲ್ಲಿ ವಿವೇಕ ಲೀಲಾಮೃತ ಕುರಿತು ಅವರು ಉಪನ್ಯಾಸ ನೀಡಿದರು. ಆಧ್ಯಾತ್ಮ ಎಂದರೆ ಅದೊಂದು ವಿಜ್ಞಾನ. ಸತ್ಯವನ್ನು ಪರಿಚಯಿಸುವುದೇ ವಿಜ್ಞಾನ. ಶಂಕರಾಚಾರ್ಯರು ಸಹ ಇದನ್ನೇ ಹೇಳಿದ್ದಾರೆ. ಭಾರತ ಆಧ್ಯಾತ್ಮಿಕ ಚಿಂತನೆಯ, ಸಾಧು-ಸಂತರ ದೇಶವಾಗಿದ್ದು ಆಧ್ಯಾತ್ಮಿಕವಾಗಿ ಸಾಧನೆ ಮಾಡಬಯಸುವ ಸಾವಿರಾರು ಜನರು ಭಾರತಕ್ಕೆ ಬರುತ್ತಿದ್ದಾರೆ. ವಿಪರ್ಯಾಸ ಸಂಗತಿ ಎಂದರೆ ಭಾರತೀಯರು ಪಾಶ್ಚಾತ್ಯ ಜೀವನಶೈಲಿಯಲ್ಲಿ ಒಗ್ಗಿಸಿಕೊಂಡು ತಮ್ಮ ದೇಶದ ನಿಜವಾದ ಸಾಮರ್ಥ್ಯವನ್ನೇ ಮರೆತು ಕುಳಿತಿದ್ದಾರೆ. ಭಾರತೀಯರ ಮನಸ್ಥಿತಿಯನ್ನು ಈ ಹಿಂದೆಯೇ ಅರಿತಿದ್ದ ಸ್ವಾಮಿ ವಿವೇಕಾನಂದರು ಯುವಕರನ್ನು ಕುರಿತು. ಏಳಿ ಎದ್ದೇಳಿ ಎಂದು ಕರೆ ನೀಡಿದ್ದರು. ಆದರೆ, ಯುವಕರು ಭಾರತೀಯನ್ನು ಮೈಗೂಡಿಸಿಕೊಳ್ಳದೆ, ಆಧ್ಯಾತ್ಮಿಕ ಶಕ್ತಿಯನ್ನು ಸದ್ಭಳಕೆ ಮಾಡಿಕೊಳ್ಳದೆ ಪಾಶ್ಚಾತ್ಯ ಜೀವನಶೈಲಿಯೇ ಶ್ರೇಷ್ಠ ಎಂಬ ಮೌಢ್ಯದಲ್ಲಿ ಬದುಕುತ್ತಿದ್ದಾರೆ ಎಂದು ತಿಳಿಸಿದರು.   

ತತ್ವಗಳು ಎಂದಿಗೂ ಸಾಯುವುದಿಲ್ಲ. ಅವು ಸಾರ್ವತ್ರಿಕವಾಗುತ್ತವೆ. ವಿಜ್ಞಾನವೂ ಒಂದು ಸಾರ್ವತ್ರಿಕ ತತ್ವದ ಆಧಾರದ ಮೇಲೆ ಬೆಳೆದಿರುವುದರಿಂದ ಅದು ಎಲ್ಲ ಕಾಲದಲ್ಲೂ ಅನ್ವಯಗೊಳ್ಳುತ್ತದೆ. ಪ್ರತಿಯೊಬ್ಬ ವ್ಯಕ್ತಿಯಲ್ಲೂ ಚಿಂತನಾ ಸಾಮರ್ಥ್ಯ ವೃದ್ಧಿಯಾಗಿ ವಿಕಾಸದ ಹಾದಿಯಲ್ಲಿ ಮುನ್ನಡೆಯಬೇಕು. ತತ್ವಗಳಿಲ್ಲದೆ ನಿಜವಾದ ವಿಕಾಸ ಸಾಧ್ಯವಿಲ್ಲ. ತತ್ವಗಳ ಮೇಲೆ ನಿಂತಿರುವ ಏಕೈಕ ಧರ್ಮವೇ ಸನಾತನ ಧರ್ಮವಾಗಿದೆ. ಅನಾದಿಕಾಲದಿಂದ ಅನಂತಕಾಲದವರೆಗೆ ಉಳಿಯುವ ಮೌಲ್ಯಗಳೇ ಸನಾತನವಾಗಿವೆ. ಇದೇ ಕಾರಣಕ್ಕೆ ಆದಿ ಶಂಕರಾಚಾರ್ಯರು ವಿಜ್ಞಾನವು ಧರ್ಮದ ಒಂದು ಭಾಗವೇ ಆಗಿದೆ ಎಂದು ಮತ್ತೆ ಮತ್ತೆ ಪ್ರತಿಪಾದಿಸಿದ್ದರು ಎಂದು ಸ್ವಾಮಿ ನಿರ್ಭಯಾನಂದ ಶ್ರೀಗಳು ವಿವರಿಸಿದರು.   

ಕರ್ನಾಟಕ ಗ್ರಾಮೀಣ ಬ್ಯಾಂಕ್ನ ನಿವೃತ್ತ ಹಿರಿಯ ವ್ಯವಸ್ಥಾಪಕ ಆರ್‌.ಎಸ್‌.ತಿಮ್ಮನಗೌಡ, ವಿಶ್ವಬ್ರಾಹ್ಮಣ ವೈದಿಕ ಪ್ರತಿಷ್ಠಾನದ ಕಾರ್ಯದರ್ಶಿ ವೆಂಕಟೇಶ ಬಡಿಗೇರ ಅವರು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.  

ತಸ್ಮಯಿ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ದೊಡ್ಡಬಸವ ಗವಾಯಿ ಡಿ.ಕಗ್ಗಲ್ ಹಾಗೂ ಮುದ್ದಟನೂರು ತಿಪ್ಪೇಸ್ವಾಮಿ ಹಾರ್ಮೋನಿಯಂ ಮತ್ತು ಯೋಗೀಶ್ ಸಂಗನಕಲ್ಲು ತಬಲಾ ಸಾಥ್ ನೀಡಿದರು. ವಿವೇಕ ಮಂಟಪದ ಪ್ರಭುದೇವ ಕಪ್ಪಗಲ್ಲು ಹಾಗೂ ಎರ್ರಿಸ್ವಾಮಿ ಚಿಲಕರಾಯಿ ಕಾರ್ಯಕ್ರಮ ನಿರ್ವಹಿಸಿದರು.