ನಾಗನೂರು ಡಾ. ಅಲ್ಲಮಪ್ರಭು ಮಹಾಸ್ವಾಮಿಗಳಿಂದ ಕನ್ನಡ ಸಂಘಟನೆಗಳ ಮುಖಂಡರೊಂದಿಗೆ ಸಭೆ

ನಾಗನೂರು ಡಾ. ಅಲ್ಲಮಪ್ರಭು ಮಹಾಸ್ವಾಮಿಗಳಿಂದ ಕನ್ನಡ ಸಂಘಟನೆಗಳ ಮುಖಂಡರೊಂದಿಗೆ ಸಭೆ Naganoor Dr. Allama Prabhu Mahaswamy holds meeting with leaders of Kannada organizations

ಲೋಕದರ್ಶನ ವರದಿ 

ಬೆಳಗಾವಿ 08 :  ಬೆಳಗಾವಿ ಮತ್ತು ಕನ್ನಡಕ್ಕಾಗಿ ಎಂತಹದೇ ಹೋರಾಟ ಅಷ್ಟೇ ಅಲ್ಲ ಪ್ರಾಣತ್ಯಾಗಕ್ಕೂ ತಾವು ಸಿದ್ಧವಿರುವುದಾಗಿ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ಘೋಷಿಸಿದರು. ಶ್ರೀಮಠದಲ್ಲಿಂದು ಕನ್ನಡ ಸಂಘಟನೆಗಳ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿ, ಗಡಿ, ನೆಲ ಮತ್ತು ಜಲದ ಕುರಿತು ತಮ್ಮ ನಿಲುವನ್ನು ಅತ್ಯಂತ ಪ್ರಬಲವಾಗಿ ಮಂಡಿಸಿದರು. ಬೆಳಗಾವಿಯೂ ಕರ್ನಾಟಕದಲ್ಲಿಯೇ ಉಳಿಯಲು ಲಿಂಗೈಕ್ಯ  ಶಿವಬಸವ ಮಹಾಸ್ವಾಮಿಗಳು ಮಾಡಿದ ಹೋರಾಟ ಮರೆಯಲಾಗದು.

ಶಿವಬಸವ ಶ್ರೀಗಳು ಬೆಳಗಾವಿಗೆ ಬಾರದೆ ಇದ್ದಿದ್ದರೆ ಬೆಳಗಾವಿ ಕನ್ನಡದ ನೆಲದಲ್ಲಿ ಉಳಿಯುತ್ತಿರಲಿಲ್ಲ, ಅವರು ಮರಾಠಿ ಗುಂಡಾಗಳಿಂದ ಅನುಭವಿಸಿದ ನೋವು ಮರೆಯಲಾಗದು, ಇಷ್ಟು ವರ್ಷಗಳ ನಂತರವೂ ಮತ್ತೆ ಹೋರಾಟ ಮಾಡುವ ಪರಿಸ್ಥಿತಿ ಬಂದಿರುವುದು ದುರ್ದೈವದ ವಿಚಾರ ಎಂದವರು ವಿಷಾದಿಸಿದರು. ಕನ್ನಡದ ಹಿತಾಸಕ್ತಿಗೆ ಧಕ್ಕೆ ಬಂದಾಗಲೆಲ್ಲ ಶ್ರೀಮಠವು ಹೋರಾಟದಲ್ಲಿ ಹಲವು ದಶಕಗಳ ಕಾಲ ಮುಂಚೂಣಿಯಲ್ಲಿ ನಿಲ್ಲುತ್ತ ಬಂದಿದೆ.  

ಪ್ರಸ್ತುತ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂಬುದನ್ನು ಸೂರ್ಯ ಚಂದ್ರರು ಇರುವವರೆಗೂ ಯಾರು ಅಲ್ಲಗಳೆಯರಾಗದು. ಆದರೆ, ಬೆಳಗಾವಿ ನಮ್ಮದು ಎಂದು ಸಾಬೀತುಪಡಿಸುವ ಪರಿಸ್ಥಿತಿ ಎದುರಾಗಿದ್ದು ದುರದೃಷ್ಟಕರ ಈ ವಿಚಾರದಲ್ಲಿ ಯಾರ ಸ್ವಾರ್ಥವೂ ಇಲ್ಲ ಗಡಿ ವಿಚಾರಕ್ಕೆ ಸಂಬಂಧಪಟ್ಟಂತೆ ಮುಂದೆ ಆಗಬಹುದಾದ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ನಡೆಯುತ್ತಿರುವ ಹೋರಾಟ ಇದಾಗಿದೆ,  ಮಹಾನಗರ ಪಾಲಿಕೆಯಲ್ಲಿ ಕನ್ನಡಿಗರೇ ಅಧಿಕಾರದಲ್ಲಿದ್ದಾರೆ ಆದರೂ ಕೂಡ ಈ ಕುರಿತು ತರಾವು ಪಾಸ್ ಮಾಡುವಲ್ಲಿ ಯಾಕೆ ಎಂದವರು ಪ್ರಶ್ನಿಸಿದರು. 

ಪ್ರಸ್ತುತ ಬೆಳಗಾವಿ ಮಹಾನಗರ ಪಾಲಿಕೆ ಬೆಳಗಾವಿ ಕರ್ನಾಟಕದ್ದೆಂದು ನಿರ್ಣಯ ಅಂಗೀಕರಿಸಲು ಹಿಂದೇಟು ಹಾಕುತ್ತಿರುವುದು ಇದಕ್ಕಾಗಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಾ ಇರುವ ಹೋರಾಟಕ್ಕೆ ಶ್ರೀಮಠದ ಸಂಪೂರ್ಣ ಬೆಂಬಲವಿದೆ ಎಂದವರು ತಿಳಿಸಿದರಲ್ಲದೆ, ಕನ್ನಡ ಹೋರಾಟಗಾರರು ಈ ಸಂಬಂಧ ಹಮ್ಮಿಕೊಂಡಿರುವ ಹೋರಾಟ ಮುಂದುವರಿಯುತ್ತದೆ. 

ಪ್ರಸ್ತುತ ವಿಚಾರದ ಕುರಿತು ಮಹಾನಗರ ಪಾಲಿಕೆಯ ಮಹಾಪೌರ ಹಾಗೂ ಉಪ ಮಹಾಪೌರರೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು. ಇದಕ್ಕೂ ಮುನ್ನ ಮಾತನಾಡಿದ ಕನ್ನಡ ಹೋರಾಟಗಾರ ಅಶೋಕ ಚಂದರಗಿ ಅವರು, ಕನ್ನಡದ ಪರವಾಗಿ ನಡೆದ ಹೋರಾಟಗಳು ಮತ್ತು ಮಹಾನಗರ ಪಾಲಿಕೆಯಲ್ಲಿ ಈ ಸಂಬಂಧ ಕೈಗೊಳ್ಳಲಾದ ನಡಾವಳಿಗಳ ಕುರಿತು ಮತ್ತು ಪ್ರಸ್ತುತ ಮಹಾನಗರ ಪಾಲಿಕೆ ನಡೆದುಕೊಳ್ಳುತ್ತಿರುವ ವಿರೋಧಿ ನಿಲುವನ್ನು ತೀವ್ರವಾಗಿ ಖಂಡಿಸಿದರು. 

ಕನ್ನಡದ ಪರವಾಗಿ ಗೊತ್ತುವಳಿ ಕೈಗೊಳ್ಳುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿದರು.ಕನ್ನಡ ಹೋರಾಟಗಾರರಾದ  ಮಹಾದೇವ ತಳವಾರ, ಶ್ರೀನಿವಾಸ ತಾಳೂಕರ, ಬಲರಾಮ್ ಮಾಸೇನಟ್ಟಿ, ವಾಜೀದ್ ಹಿರೇಕೋಡಿ, ಮಹಾನಗರ ಪಾಲಿಕೆ ಸದಸ್ಯರಾದ ರಮೇಶ ಸೊಂಟಕ್ಕಿ, ದಿನೇಶ ನಾಶಿಪುಡಿ, ಸಾಹಿತಿ ನೀಲಗಂಗಾ ಚರಂತಿಮಠ ಸೇರಿದಂತೆ 20 ಸಂಘಟನೆಗಳ ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು.