ಹೂವಿನ ಹಡಗಲಿ

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಕ್ಷಣಗಣನೆ ಮೈಲಾರಕ್ಕೆ ನೆರೆ ರಾಜ್ಯಗಳಿಂದ ಹರಿದು ಬರುತ್ತಿರುವ ಜನಸಾಗರ

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವಕ್ಕೆ ಕ್ಷಣಗಣನೆ  ಮೈಲಾರಕ್ಕೆ ನೆರೆ ರಾಜ್ಯಗಳಿಂದ ಹರಿದು ಬರುತ್ತಿರುವ ಜನಸಾಗರ

ಲೋಕದರ್ಶನ ವರದಿ

ಹೂವಿನಹಡಗಲಿ : ರಾಜ್ಯದಲ್ಲಿಯೇ 2ನೇ ಅತಿದೊಡ್ಡ ಮೈಲಾರ ಜಾತ್ರೆಗೆ ರಾಜ್ಯ, ಹೊರ ರಾಜ್ಯಗಳಿಂದ ಭಕ್ತರು ಆಗಮಿಸುತ್ತಿದ್ದು, ಜಾತ್ರೆಯ ಕೇಂದ್ರಬಿಂದು ಕಾರ್ಣಿಕ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.ನಾಡಿನ ಭವಿಷ್ಯವಾಣಿ ಎಂದೇ ಬಿಂಬಿತವಾಗಿರುವ ಕಾರಣಿಕ ನುಡಿಯನ್ನು ಆಲಿಸಲು  ತಾಲ್ಲೂಕಿನ ಮೈಲಾರ ಸುಕ್ಷೇತ್ರಕ್ಕೆ  ರಾಜ್ಯ ಹಾಗೂ ನೆರೆಯ ರಾಜ್ಯಗಳಿಂದ ಭಕ್ತ ಸಾಗರವೇ ಹರಿದು ಬರುತ್ತಿದೆ. 

ಕಳೆದ ಎರಡು ವರ್ಷಗಳಿಂದ ಕೋವಿಡ್ನಿಂದ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ನಿಷೇದ ಇತ್ತು .ಈ ಬಾರಿಯ ಮುಂಗಾರು-ಹಿಂಗಾರು ಬೆಳೆಗಳ ಫಸಲು ರೈತನ ಕೈ ಹಿಡಿದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕೊಲಾರಿ ಬಂಡಿ ಕಟ್ಟಿಕೊಂಡು ತಮ್ಮ ಪರಿವಾರದೊಂದಿಗೆ ಬಂದಿರುವುದರಿಂದ ಜಾತ್ರಾ ಪ್ರದೇಶದಲ್ಲಿ ವಾಸ್ತವ್ಯ ಹೂಡಲು ಸ್ಥಳಸಿಗದೇ ಪರದಾಡುವ ಸ್ಥಿತಿ ಕಂಡುಬಂತು.

ಜಾತ್ರಾ ವಿಶೇಷ ಬಸ್ಗಳು ಹಾಗೂ ಖಾಸಗಿ ವಾಹನ, ಟ್ರ್ಯಾಕ್ಟರ್ಗಳು, ತ್ರಿಚಕ್ರ ವಾಹನಗಳಲ್ಲಿ ಭಕ್ತರು ಸುಕ್ಷೇತ್ರಕ್ಕೆ ಆಗಮಿಸುತ್ತಿದ್ದು, ನಿರೀಕ್ಷೆಗಿಂತ ಹೆಚ್ಚು  ಜನಸಂದಣಿ ಸೇರುವ ಸಾಧ್ಯತೆಗಳಿವೆ.ನಾಲ್ಕು ದಿನಗಳ ಕಾಲ  ಸುಕ್ಷೇತ್ರದಲ್ಲಿಯೇ ಬಿಡಾರ ಹೂಡಿರುವ ಭಕ್ತರು, ಮನೋ ಇಷ್ಟಾರ್ಥ ಸಿದ್ಧಿಗಾಗಿ  ಮೈಲಾರಲಿಂಗ ಸ್ವಾಮಿಗೆ ವಿವಿಧ ಸೇವೆ, ಹರಕೆಗಳನ್ನು ತೀರಿಸಿ ವಾಪಾಸ್ಸಾಗುವರು. 

ರೈತರಿಗೆ ಅಗತ್ಯವಾದ ಕೃಷಿ ಸಲಕರಣಿಗಳು ಇಲ್ಲಿ ಮಾರಾಟಕ್ಕೆ ಲಭ್ಯವಿರುವುದರಿಂದ  ತಮ್ಮ ಕೃಷಿ ಚಟುವಟಿಕೆಗೆ ಅಗತ್ಯವಾದ ಪರಿಕರಗಳನ್ನು ಖರೀದಿಸುತ್ತಾರೆ. ಜಾತ್ರಾ ಸಮಯದಲ್ಲಿ  ಮನೋರಂಜನೆ ನೀಡಲು ಸರ್ಕಸ್, ನಾಟಕ ಕಂಪೆನಿಗಳು, ಇನ್ನಿತರೆ ಸಾಂಸ್ಕೃತಿಕ ತಂಡಗಳು ಬಿಡಾರ ಹೂಡಿವೆ. ನಿರಂತರ ಒಂದು ವಾರಗಳ ಕಾಲ ಮನೋರಂಜನೆಗಳು ಮುಂದುವರೆಯಲಿವೆ. ಈ ವರ್ಷದ ಕಾರ್ಣಿಕ ಉಕ್ತಿ ಗೊರವಯ್ಯನಿಂದ ಹೊರಬೀಳಲಿದೆ. 

ಮೈಲಾರಲಿಂಗಸ್ವಾಮಿ ಪೂಜೆಗೈಯ್ಯುವ ಮಂಗಳವಾರ ದಿವಸವೇ ಈ ವರ್ಷ ಕಾಣರ್ಿಕ ಜರುಗುವುದರಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಲಿದ್ದಾರೆ. ಬಿಡಾರ ಹೂಡಿರುವ ಭಕ್ತರು ಅಲ್ಲಿಯೇ ದೋಣಿ ಸೇವೆ ಸಲ್ಲಿಸುವ ಮೂಲಕ ಮೈಲಾರಲಿಂಗ ಸ್ವಾಮಿಯನ್ನು ಆರಾಧಿಸುತ್ತಾರೆ. ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಜಿಲ್ಲಾಡಳಿತ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು,ಜಿಲ್ಲಾ,ತಾಲ್ಲೂಕು ಮಟ್ಟದ ಅಧಿಕಾರಿಗಳು,ಗ್ರಾಮ ಪಂಚಾಯ್ತಿ ಅಧಿಕಾರಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. 

ಯಾವುದೇ ಅಹಿತಕರಘಟನೆಗಳು ನಡೆಯದಂತೆ ಪೊಲೀಸರು ಬಂದೋಬಸ್ತ್ ವ್ಯವಸ್ಥೆ  ಕಲ್ಪಿಸಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಿ ಕಣ್ಗಾವಲು ವಹಿಸಲಾಗಿದೆ. ವಾಹನ ದಟ್ಟಣೆ ತಪ್ಪಿಸಲು  ಹಾಗೂ ಸುಗಮ ಸಂಚಾರಕ್ಕಾಗಿ ಬಸ್ ನಿಲ್ದಾಣವನ್ನು  ತಾತ್ಕಾಲಿಕವಾಗಿ ಗ್ರಾಮದ ಹೊರ ವಲಯಕ್ಕೆ ಸ್ಥಳಾಂತರಿಸಿ ಗ್ರಾಮದಲ್ಲಿ ಏಕಮುಖ ರಸ್ತೆಯನ್ನು  ಕಲ್ಪಿಸಲಾಗಿದೆ. ಮುಖ್ಯರಸ್ತೆಯಲ್ಲಿ  ಅಂಗಡಿ ಮುಂಗಟ್ಟುಗಳನ್ನು ಹಿದಕ್ಕೆ ತಳ್ಳಲ್ಪಟ್ಟು, ಪಾದಾಚಾರಿಗಳು ಹಾಗೂ ವಾಹನ ಸವಾರರಿಗೆ ಅನುಕೂಲ ಮಾಡಿಕೊಡಲಾಗಿದೆ 

ಸುದ್ದಿ ಓದಿ