ನಗರದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ: ಜಾಗೃತಿ ಜಾಥಾ : ಯುವಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯಯುತ ಸಮಾಜ ನಿರ್ಮಿಸಿ: ಅರವಿಂದ ಹಾಗರಗಿ

ನಗರದಲ್ಲಿ ವಿಶ್ವ ತಂಬಾಕು ರಹಿತ ದಿನಾಚರಣೆ: ಜಾಗೃತಿ ಜಾಥಾ : ಯುವಕರು ದುಶ್ಚಟಗಳಿಂದ ದೂರವಿದ್ದು ಆರೋಗ್ಯಯುತ ಸಮಾಜ ನಿರ್ಮಿಸಿ: ಅರವಿಂದ ಹಾಗರಗಿ World No Tobacco Day celebrated in the city: Awareness rally: Youth should stay away from bad habits

ಲೋಕದರ್ಶನ ವರದಿ

ವಿಜಯಪುರ, ಜೂನ್ 3: ಯುವಜನತೆ ದುಶ್ಚಟಗಳಿಂದ ದೂರವಿರಬೇಕು, ತಂಬಾಕು ಸೇವನೆ ಸೇವನೆ ತ್ಯಜಿಸಿ, ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾಅರ್ಯದರ್ಶಿಗಳಾದಅರವಿಂದ್ ಎಸ್‌. ಹಾಗರಗಿ ಹೇಳಿದರು.  ಅವರು ಬುಧವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಕಲಬುರಗಿಯ ಇಂಡಿಯನ್ ಕ್ಯಾನ್ಸರ್ ಸೊಸೈಟಿ, ವಿಜಯಪುರದ ನಾಗೂರ್ ನಸಿಂರ್ಗ್ ಕಾಲೇಜು ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಂಬಾಕು ರಹಿತ ದಿನಾಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿಗಳು ದೇಶದ ಭವಿಷ್ಯ. ಯುವಜನತೆ ಯಾವುದೇ ಕಾರಣಕ್ಕೂ ಧೂಮಪಾನ, ತಂಬಾಕು ಸೇವನೇಯಂತಹ ಮಾರಕ ದುಶ್ಚಟಗಳಿಗೆ ಬಲಿಯಾಗದೆ, ತಮ್ಮ ಜೀವನವನ್ನು ಶಿಸ್ತುಬದ್ಧವಾಗಿ ಮತ್ತು ಅಚ್ಚುಕಟ್ಟಾಗಿ ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.ತಂಬಾಕು ಮುಕ್ತ ಸಮಾಜ ನಿರ್ಮಾಣದಲ್ಲಿ ವಿದ್ಯಾರ್ಥಿಗಳ ಪಾತ್ರ ದೊಡ್ಡದಿದೆ ಎಂದರು. 

ಕ್ಯಾನ್ಸರ್ ತಡೆಗಟ್ಟುವಿಕೆಗೆ ಮುನ್ನೆಚ್ಚರಿಕೆ ಅಗತ್ಯ: ತಜ್ಞರ ಕಿವಿಮಾತು ಜಿಲ್ಲಾ ಆಸ್ಪತ್ರೆಯ ಡಾ.ಎಂ.ಟಿ.ಆರ್‌. ಕೋತ್ವಾಲ್ ಅವರು ವಿಶೇಷ ಉಪನ್ಯಾಸ ನೀಡಿ,  ಕ್ಯಾನ್ಸರ್ ಮಹಾಮಾರಿಯಾಗಿ ಬೆಳೆಯುವ ಮುನ್ನವೇ ನಾವು ಜಾಗರೂಕರಾಗಿರಬೇಕು. ಆರಂಭಿಕ ಹಂತದಲ್ಲೇ ತಪಾಸಣೆ ಮತ್ತು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅತ್ಯಗತ್ಯ. ತಂಬಾಕು ಸೇವನೆಯ  ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳು ಕೇವಲ ತಾವಷ್ಟೇ ಜಾಗೃತರಾಗದೇ ತಮ್ಮ ಪೋಷಕರು, ಸ್ನೇಹಿತರು ಮತ್ತು ಸಂಬಂಧಿಕರಲ್ಲೂ ನೆರೆಹೊರೆಯವರಲ್ಲಿಯೂ ಜಾಗೃತಿ ಮೂಡಿಸಬೇಕು ಎಂದರು.  

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮನೋವೈದ್ಯರಾದ ಡಾ. ಮಂಜುನಾಥ್ ಮಸಳಿ ಅವರು ಮಾತನಾಡಿ, ವಿದ್ಯಾರ್ಥಿಗಳು ಸದಾ ಧನಾತ್ಮಕ ಕಲಿಕಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಗೆ ಪೂರಕವಾದ ವಿಚಾರಗಳನ್ನು ಅಳವಡಿಸಿಕೊಂಡು, ದುಶ್ಚಟಗಳಿಂದ ಮುಕ್ತವಾದ ಉತ್ತಮ ಜೀವನವನ್ನು ಸಾಗಿಸಬೇಕು ಎಂದು ಹೇಳಿದರು. ತಂಬಾಕು ಮುಕ್ತ ಸಮಾಜಕ್ಕೆ ಪ್ರತಿಜ್ಞಾವಿಧಿ ಸ್ವೀಕಾರ: ಕಲಬುರಗಿಯ ಇಂಡಿಯನ್ ಕ್ಯಾನ್ಸರ್ ಸೊಸೈಟಿಯ ಪ್ರಾದೇಶಿಕ ವಿಭಾಗದ ಪ್ರತಿನಿಧಿಯಾಗಿ ಆಗಮಿಸಿದ್ದ ಗುರುರಾಜ್ ಕುಲಕರ್ಣಿ ಅವರು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಂಬಾಕು ಉತ್ಪನ್ನಗಳಿಂದ ದೂರವಿರುವಂತೆ ಹಾಗೂ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಶ್ರಮಿಸುವಂತೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.  

ಜಾಗೃತಿ ಜಾಥಾಕ್ಕೆ ಚಾಲನೆ: ಕಾರ್ಯಕ್ರಮದ ಅಂಗವಾಗಿ ಸಾರ್ವಜನಿಕರಲ್ಲಿ ತಂಬಾಕು ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಬೃಹತ್ ಜಾಗೃತಿ ಜಾಥಾಕ್ಕೆ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಖಾದರ್ ಸಾಬ್ ಹುಸೇನ್ ಸಾಬ್ ಬೆನಕಟ್ಟಿ, ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಉಚಿತ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ್ ಹಾಗರಗಿ ಮತ್ತು ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಧಿಕಾರಿಗಳಾದ ಡಾ. ರಾಜೇಶ್ವರಿ ಗೋಲಗೇರಿ ಅವರು ಜಂಟಿಯಾಗಿ ಹಸಿರು ನಿಶಾನೆ ತೋರಿಸುವ ಮೂಲಕ ಜಾಥಾಗೆ ಚಾಲನೆ ನೀಡಿದರು. ಈ ಜಾಗೃತಿ ಜಾಥಾವು ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭವಾಗಿ, ಗಾಂಧಿ ಚೌಕ್ ವೃತ್ತದ ಮಾರ್ಗವಾಗಿ ಸಾಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಮುಕ್ತಾಯಗೊಂಡಿತು. ಜಾಥಾದುದ್ದಕ್ಕೂ ವಿದ್ಯಾರ್ಥಿಗಳು ತಂಬಾಕು ವಿರೋಧಿ ಘೋಷಣೆಗಳಿರುವ ಫಲಕಗಳನ್ನು ಪ್ರದರ್ಶಿಸಿ ಸಾರ್ವಜನಿಕರ ಗಮನ ಸೆಳೆದರು.  

ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿಗಳಾದ ಎನ್‌. ಆರ್‌. ಭಗವಾನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಿ. ಎಂ. ಕೋಳೂರು, ನಸಿಂರ್ಗ್ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರರು ಡಾ. ಪ್ರಕಾಶ ಚವ್ಹಾಣ ಹಾಗೂ ಶ್ರೀಕಾಂತ್ ಪೂಜಾರ್ ಅವರು ಉಪಸ್ಥಿತರಿದ್ದರು.