ಮಾನವ ಕಳ್ಳಸಾಗಾಣಿಕೆ ವಿರುದ್ಧ ವ್ಯಾಪಕ ಅರಿವು ಮುಖ್ಯ: ಅರವಿಂದ ಹಾಗರಗಿ

ಮಾನವ ಕಳ್ಳಸಾಗಾಣಿಕೆ ವಿರುದ್ಧ ವ್ಯಾಪಕ ಅರಿವು ಮುಖ್ಯ: ಅರವಿಂದ ಹಾಗರಗಿ Widespread awareness against human trafficking is crucial: Aravind Hagaragi

ಲೋಕದರ್ಶನ ವರದಿ 

            ವಿಜಯಪುರ 31 : ಕೇವಲ ಅಂತಾರಾಷ್ಟ್ರೀಯ ಮಾನವ ಕಳ್ಳಸಾಗಾಣಿಕೆ ದಿನಾಚರಣೆಯನ್ನು ಆಚರಿಸುವುದಕ್ಕಿಂತಲೂ ಹೆಚ್ಚಾಗಿ ಸಾರ್ವಜನಿಕರಲ್ಲಿ ಈ ಬಗ್ಗೆ ವ್ಯಾಪಕ ಅರಿವು ಮೂಡಿಸುವುದು ಮುಖ್ಯ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ  ಹಿರಿಯ ಸಿವಿಲ್ ನ್ಯಾಯಾಧೀಶರಾದ ಅರವಿಂದ ಎಸ್‌. ಹಾಗರಗಿ ಹೇಳಿದರು.  

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ನಗರದ ರಾಘವೇಂದ್ರ ಕಾಲೋನಿಯ ರುಡ್‌ಸೆಟ್  ಸಂಸ್ಥೆಯಲ್ಲಿ  ಜು.30ರ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ, ಜಾಗೃತಿ ಹಾಗೂ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

           ಸ್ಪಂದನಾ ಸ್ವಯಂಸೇವಾ ಸಂಸ್ಥೆಯ ಕಾರ್ಯದರ್ಶಿ ಪ್ರಶಾಂತ ದೇಶಪಾಂಡೆ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಳ್ಳಸಾಗಾಣಿಕೆಯು ಸಮಾಜಕ್ಕಂಟಿದ ಬಹುದೊಡ್ಡ ಪಿಡುಗು. ಸಾಂಪ್ರದಾಯಿಕವಾಗಿ ಬಂದಿರುವ ಬಾಲ್ಯವಿವಾಹವನ್ನು ಬುಡಸಮೇತ ನಿರ್ಮೂಲನೆ ಮಾಡುವುದರ ಜೊತೆಗೆ, ಪೋಕ್ಸೋ  ಕಾಯ್ದೆ ಹಾಗೂ ಜೆ.ಜೆ. ಕಾಯ್ದೆಗಳ ಸರಿಯಾದ ಜಾಗೃತಿಯಿಂದ ಇದನ್ನು ತಡೆಗಟ್ಟಬಹುದು ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಡಾ. ಸಂತೋಷಕುಮಾರ ಎಚ್‌. ಮಾತನಾಡಿ, ಸಾಮಾಜಿಕ ಜಾಲತಾಣಗಳ ದುರ್ಬಳಕೆಯಿಂದ ಯುವಜನತೆ ಮತ್ತು ಮಕ್ಕಳು ಸೈಬರ್ ಕ್ರೈಂ ಹಾಗೂ ವಂಚನೆಗಳಿಗೆ ಒಳಗಾಗುತ್ತಿದ್ದಾರೆ. ಪೋಷಕರು ತಮ್ಮ ಮಕ್ಕಳ ಚಟುವಟಿಕೆಗಳ ಮೇಲೆ ಸೂಕ್ತ ನಿಗಾ ವಹಿಸಿ, ಅವರು ಯಾವುದೇ ತೊಂದರೆಗೆ ಸಿಲುಕದಂತೆ ನೋಡಿಕೊಳ್ಳಬೇಕು ಎಂದರು. 

ಯಶೋದಾ ಜೋಶಿ ಪ್ರಾರ್ಥಿಸಿದರು. ಜಿಲ್ಲಾ ನಿರೂಪಣಾಧಿಕಾರಿಗಳು  ಸ್ವಾಗತಿಸಿ,  ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಿತಾ ಬಿರಾದಾರ ಪ್ರತಿಜ್ಞಾ ವಿಧಿ ಬೋಧಿಸಿದರು. ಮಿಷನ್ ಶಕ್ತಿ ಜಿಲ್ಲಾ ಸಂಯೋಜಕರಾದ ಭಾರತಿ ಪಾಟೀಲ ನಿರೂಪಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ದೀಪಾಕ್ಷಿ ಜಾನಕಿ ವಂದಿಸಿದರು. 

ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಿಷನ್ ಶಕ್ತಿ ಹಾಗೂ ಜಿಲ್ಲಾ ಕಚೇರಿ ಸಿಬ್ಬಂದಿ, ಅಂಗನವಾಡಿ ಹಿರಿಯ ಮೇಲ್ವಿಚಾರಕಿಯರು, ಅಂಗನವಾಡಿ ಕಾರ್ಯಕರ್ತೆಯರು, ಶಕ್ತಿ ಸದನ ಸಿಬ್ಬಂದಿ, ಸಾಂತ್ವನ ಕೇಂದ್ರದ ಮುಖ್ಯಸ್ಥರು, ಆಪ್ತ ಸಮಾಲೋಚಕರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಹಾಗೂ ಸಖಿ ಒನ್ ಸ್ಟಾಪ್ ಸೆಂಟರ್‌ನ ಸಿಬ್ಬಂದಿ ಉಪಸ್ಥಿತರಿದ್ದರು.