ವಂಟಮುರಿ ಮಹಿಳೆಯನ್ನು ವಿವಸ್ತ್ರ ಗೊಳಿಸಿ ಹಲ್ಲೆ ನಡೆಸಿದ ಆರೋಪಿಗಳ ಬಿಡುಗಡೆ, ಪಟಾಕಿ ಸಿಡಿಸಿ ಸಿಹಿ ತಿನ್ನಿಸಿ ಸಂಭ್ರಮಾಚರಣೆ !

ಬೆಳಗಾವಿ 23 : ಬೆಳಗಾವಿ ತಾಲೂಕಿನ ವಂಟಮುರಿ ಗ್ರಾಮದಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿ ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಪ್ರಕರಣ ಭಾರೀ ಸುದ್ದಿಯಾಗಿತ್ತು. ಇದೀಗ ಪ್ರಕರಣದ ಆರೋಪಿಗಳು ಬಿಡುಗಡೆಯಾಗಿದ್ದು ಅವರ ಬೆಂಬಲಿಗರು ಅದ್ದೂರಿಯಾಗಿ ಸ್ವಾಗತಿಸಿರುವ ಘಟನೆ ಬೆಳಕಿಗೆ ಬಂದಿದೆ.

ಹಲ್ಲೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೀಗ ಆರೋಪಿಗಳು ನಾಲ್ಕು ತಿಂಗಳ ನಂತರ ಜಾಮೀನು ಮೇಲೆ ಬಿಡುಗಡೆಗೊಂಡಿದ್ದಾರೆ. ಬಿಡುಗಡೆಯಾಗುತ್ತಿದ್ದಂತೆ ಆರೋಪಿಗಳಿಗೆ ಹೂವಿನ ಹಾರ ಹಾಕಿ ಸಿಹಿ ತಿಂಡಿ ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಒಟ್ಟು 13 ಜನ ಆರೋಪಿಗಳನ್ನು ಕಾಕತಿ ಪೊಲೀಸರು ಬಂಧಿಸಿ ಹಿಂಡಲಗಾ ಜೈಲಿನಲ್ಲಿ ಇಟ್ಟಿದ್ದರು. ಕೊನೆಗೂ ಎಲ್ಲಾ ಆರೋಪಿಗಳಿಗೆ ಹೈಕೋರ್ಟ್ ಶರತ್ತು ಬದ್ಧ ಜಾಮೀನು ನೀಡಿದೆ. ಆರೋಪಿಗಳು ಸೋಮವಾರ ರಾತ್ರಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಜೈಲಿನ ಎದುರು ಪ್ರಮುಖ ಆರೋಪಿ ಬಸಪ್ಪ ನಾಯಕಗೆ ಹೂಹಾರ ಹಾಕಿ ಸಿಹಿ ತಿನ್ನಿಸಲಾಗಿದೆ. ವಂಟಮುರಿಯಲ್ಲಿ ಆರೋಪಿಗಳನ್ನು ಮೆರವಣಿಗೆ ಮಾಡಲು ಬೆಂಬಲಿಗರು ಮುಂದಾಗಿದ್ದರು. ಆದರೆ ಪೊಲೀಸರು ಅವಕಾಶ ನೀಡಲಿಲ್ಲ. ಆದರೆ, ಹಿಂಡಲಗಾ ಜೈಲಿನ ಎದುರು ನಡೆದ ಈ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.