ಕುಡಿಯುವ ನೀರಿನ ವಿಷಯದಲ್ಲೂ ರಾಜಕೀಯ: ರವಿ ಜವಳಗಿ

ಮಹಾಲಿಂಗಪುರ 02: ನಗರದ 7 ನೇ ವಾರ್ಡಿನ ನಿವಾಸಿಗಳಾದ ನುಚ್ಚಿ, ಗಣಿ, ಯಂಕಾಂಚಿಯವರ ಮನೆ ಹತ್ತಿರದ ಮನೆಗಳಿಗೆ ಕುಡಿಯಲು ಹೊಳೆನೀರು ಒದಗಿಸುವ ಉದ್ದೇಶದಿಂದ ಪೈಪ್ ಅಳವಡಿಸಿ ನಂತರ ಒತ್ತಡಕ್ಕೆ ಮಣಿದು ಪೈಪ್ ಲೈನ್ ಕಿತ್ತು ಹಾಕಿ ಜನರ ಕುಡಿಯುವ ನೀರಿನ ವಿಷಯದಲ್ಲಿಯು ರಾಜಕೀಯ ಮಾಡಲಾಗಿದೆ ಎಂದು ವಾರ್ಡಿನ ಸದಸ್ಯ ರವಿ ಜವಳಗಿ ಆರೋಪಿಸಿದ್ದಾರೆ. 

ನಿವಾಸಿಗಳ ಬಹುದಿನದ ಬೇಡಿಕೆಯಂತೆ ಜೆಸಿಬಿ ಸಹಾಯದಿಂದ ಸುಮಾರು 200 ರಿಂದ 300 ಅಡಿಗಳ ಪೈಪ್ ಲೈನ್ ಅಳವಡಿಸಲಾಗಿದ್ದು ಅಲ್ಲಿಂದ ಮುಂದೆ ಸಾಧುವಿನ ಗುಡಿ ಮುಖ್ಯ ರಸ್ತೆಯವರೆಗೆ ಎಚ್‌ಡಿಪಿ ಪೈಪ್ ಅಳವಡಿಸಿ ಸಕಾರಣವಿಲ್ಲದೇ ಪುನಃ ಪೈಪ್ ಲೈನ್ ತೆರವುಗೊಳಿಸಿದ್ದರಿಂದ ಯಕ್ಸಂಬಿ ಆಸ್ಪತ್ರೆಯಿಂದ ಭಗತ್‌ಸಿಂಗ್ ಬಡಾವಣೆಯವರೆಗಿನ ಸುಮಾರು 150 ಕ್ಕೂ ಅಧಿಕ ಮನೆಗಳಿಗೆ ಕುಡಿಯುವ ನೀರಿಲ್ಲದೇ ಪರಿತಪಿಸುವಂತಾಗಿದೆ. 

ಬೇಸಿಗೆಯ ಬಿರು ಬಿಸಿಲಿನಿಂದ ಅಂತರ್ಜಲ ಬತ್ತಿಹೋಗಿದ್ದು ತುರ್ತು ಪರಿಹಾರ ಮಾಡುವ ಮತ್ತು ಬಡಾವಣೆಯ ಜನರಿಗೆ ನೀರು ಒದಗಿಸುವ ಮಾನವೀಯ ಕೆಲಸಕ್ಕೆ ಕಲ್ಲು ಬಿದ್ದಿದ್ದು ಜನ ಹಿಡಿ ಶಾಪ ಹಾಕುತ್ತಿದ್ದಾರೆ.  

ಜನರ ನೀರಿನ ಬವಣೆಯನ್ನು ನೀಗಿಸಲು ಯಾವುದೇ ಟೆಂಡರ್ ಅವಶ್ಯಕತೆ ಇಲ್ಲ, ಇದ್ದ ಸಂಪನ್ಮೂಲಗಳನ್ನು ಬಳಸಿಕೊಂಡು ಜನರಿಗೆ ನೀರು ಒದಗಿಸಬೇಕೆಂಬ ನಿಯಮವಿದ್ದರೂ ಈಗಾಗಲೇ ಅಂದಾಜು 300 ಮೀಟರ್ ಪೈಪ್ ಒಳಾಂಗಣ ಅಳವಡಿಕೆ ವ್ಯರ್ಥವಾಗುವಂತಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಬಡಾವಣೆಯ ನಿವಾಸಿಯೊಬ್ಬರು ಆಕ್ರೋಶ ಹೊರಹಾಕಿದ್ದಾರೆ. 

ಮುಖ್ಯ ರಸ್ತೆಯವರೆಗಿನ ಪೈಪ್ ಲೈನ್ ತೆರವಿನಿಂದ ಬಡಾವಣೆಯ ಜನರು ನೀರಿಗಾಗಿ ಪರದಾಡುವಂತಾಗಿದ್ದು ಕೂಡಲೇ ಪೈಪ್ ಲೈನ್ ಮರು ಅಳವಡಿಕೆ ಮಾಡಿ ನೀರಿನ ಬವಣೆ ನೀಗಿಸಲು ಸ್ಥಳೀಯ ನಿವಾಸಿಗಳಾದ ಸುನಿಲ ಯಾದವಾಡ, ಶ್ರೀಶೈಲ ಯಂಕಾಂಚಿ, ಗುರು ಯಂಕಾಂಚಿ ಮುಂತಾದವರು ಆಗ್ರಹಿಸಿದ್ದಾರೆ. 

ಪುರಸಭೆಯ ನೀರು ಸರಬರಾಜು ಸಹಾಯಕ ಸುರೇಶ ಹರಿಜನ ಪತ್ರಿಕೆಗೆ ಪ್ರತಿಕ್ರಿಯೆ ನೀಡಿ, ಸ್ಥಳಕ್ಕೆ ಭೇಟಿ ನೀಡಿ ನಮಗೆ ಕರೆ ಮಾಡಿ ಎಂದು ಉಡಾಫೆ ಉತ್ತರ ನೀಡಿದ್ದಾರೆ. 

ಪತ್ರಿಕೆ ಪ್ರತಿನಿಧಿ ಸ್ಥಳ ಪರೀಶೀಲನೆ ಮಾಡಿದಾಗ ನೀರಿನ ಬವಣೆ, ಪೈಪ್ ಲೈನ್ ಅಳವಡಿಕೆ ಸೇರಿದಂತೆ ಸಾರ್ವಜನಿಕರ ಆರೋಪ ಮತ್ತು ಬೇಡಿಕೆ ಸಮರ​‍್ಕವಾಗಿರುವುದು ಕಂಡು ಬಂತು.