ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕು

ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಸಂಕಲ್ಪ ಮಾಡಬೇಕು Students must pledge to build a corruption-free India

ಲೋಕದರ್ಶನ ವರದಿ 

ಧಾರವಾಡ 28: ಭಾರತದ ಚಾರಿತ್ರಿಕ ಘನತೆಗೆ ಧಕ್ಕೆ ಉಂಟುಮಾಡುತ್ತಿರುವ ಭ್ರಷ್ಟಾಚಾರವು ರಾಷ್ಟ್ರದ ಸಾಧನಾ ಪಥಕ್ಕೆ ಅಡ್ಡಿಯಾಗಿದ್ದು, ದೇಶದ ಭವಿಷ್ಯ ರೂಪಿಸುವ ವಿದ್ಯಾರ್ಥಿಗಳು ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು ಎಂದು ಲೇಖಕ ಗುರುಮೂರ್ತಿ ಯರಗಂಬಳಿಮಠ ಕರೆ ನೀಡಿದರು.  

ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಮಂಗಳವಾರ ಸಿ.ವಿ. ರಾಮನ್ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ 2026-27ನೇ ಸಾಲಿನ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.  

ವಿದ್ಯಾರ್ಥಿಗಳು ಚರಿತ್ರೆಹೀನರಾಗದೆ ಒಳ-ಹೊರಗಿನ ಅರಿವಿನೊಂದಿಗೆ ಸರಳತೆ, ಸಜ್ಜನಿಕೆ, ಸತ್ಯನಿಷ್ಠೆ, ಚಾರಿತ್ರಿಕ ಪರಿಶುದ್ಧತೆ, ಶಿಸ್ತು, ಸಮಯ ಪ್ರಜ್ಞೆ ಹಾಗೂ ಸಹೋದರತ್ವದ ಗುಣಗಳನ್ನು ಬೆಳೆಸಿಕೊಂಡಾಗ ಉನ್ನತ ವ್ಯಕ್ತಿತ್ವ ನಿರ್ಮಾಣ ಸಾಧ್ಯವಾಗುತ್ತದೆ ಎಂದರು.  

ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆಗಳನ್ನು ಕಲ್ಪಿಸುವ ಮೂಲಕ ಅವರ ಪ್ರತಿಭೆ ಬೆಳೆಯಲು ಸಾಂಸ್ಕೃತಿಕ ಚಟುವಟಿಕೆಗಳು ಸಹಕಾರಿಯಾಗಬೇಕು. ಭಾರತೀಯ ಸಂಸ್ಕೃತಿಯ ಮೌಲ್ಯಗಳು ಉತ್ತಮ ಜೀವನ ವಿಧಾನಕ್ಕೆ ಮಾರ್ಗದರ್ಶಿಯಾಗಿವೆ ಎಂದು ಅವರು ಹೇಳಿದರು.  

ಮುಖ್ಯ ಅತಿಥಿಯಾಗಿದ್ದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೀರೀಶ್ ಜುಂಜುರಿ ಮಾತನಾಡಿ, ವಿದ್ಯಾರ್ಥಿಗಳು ಹೊಸ ಅನ್ವೇಷಣೆಗಳತ್ತ ಮುಖ ಮಾಡಿ ಸ್ಪರ್ಧಾತ್ಮಕ ಜಗತ್ತನ್ನು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ಪೂರಕವಾದ ಅಧ್ಯಯನದ ವಿಧಾನ ರೂಪಿಸಿಕೊಂಡಾಗ ಮಾತ್ರ ಎಲ್ಲ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಸಲಹೆ ನೀಡಿದರು.  

ಶಿಕ್ಷಣ ಚಿಂತಕ ಡಾ. ಸತೀಶ್ ಜಾಧವ ಮಾತನಾಡಿ, ಯೌವನದ ಅವಧಿಯನ್ನು ಧನಾತ್ಮಕವಾಗಿ ಬಳಸಿಕೊಂಡು ವರ್ಷದ ಪ್ರತಿದಿನವನ್ನೂ ಅಧ್ಯಯನಕ್ಕೆ ಮೀಸಲಿಟ್ಟರೆ ವಿದ್ಯಾರ್ಥಿಗಳು ತಮ್ಮ ಜೀವನದ ಗುರಿ ತಲುಪಬಹುದು ಎಂದರು.  

ಕಾಲೇಜಿನ ಪ್ರಾಚಾರ್ಯೆ ಅನುರಾಧಾ ಆರಾಧ್ಯಮಠ ಮಾತನಾಡಿ, ವಿದ್ಯಾರ್ಥಿಗಳ ವ್ಯಾಸಂಗದ ಪ್ರತಿಯೊಂದು ಕ್ಷಣವೂ ತಪಸ್ಸಿನಂತೆ ಇರಬೇಕು. ಅನಗತ್ಯ ವಿಚಾರಗಳಿಗೆ ಕಿವಿಗೊಡದೆ ಕೇವಲ ಅಧ್ಯಯನದ ಕಡೆ ಗಮನ ಹರಿಸಿದರೆ ನೀರೀಕ್ಷಿತ ಫಲಿತಾಂಶ ಪಡೆಯಬಹುದು ಎಂದು ಹೇಳಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತಾಧಿಕಾರಿ ದುಂಡಯ್ಯ ಹಿರೇಮಠ ವಹಿಸಿದ್ದರು. ಉಪನ್ಯಾಸಕರಾದ ಮಾರುತಿ ಕಡಂ, ಪ್ರೇಮಾ ಎಸ್‌., ಬಸವರಾಜ ಉಪಸ್ಥಿತರಿದ್ದರು. ಎಸ್‌.ಎಂ. ಸಿದ್ಧಾರ್ಥ ಸ್ವಾಗತಿಸಿದರು. ಸ್ನೇಹಾ ಕಾಂತಿ ಹಾಗೂ ಕಾವ್ಯಶ್ರೀ ಮಡಿವಾಳ ನಿರೂಪಿಸಿದರು. ಉಪನ್ಯಾಸಕಿ ತನೂಜಾ ವಂದಿಸಿದರು. ಇದೇ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.