ಹೂವಿನ ಹಡಗಲಿ

ಸಿಂಗಟಾಲೂರು ನೀರಾವರಿ ಯೋಜನೆ ಬ್ಯಾರೇಜ್ ಭರ್ತಿ: 10 ಕೆರೆಗಳಿಗೆ ನೀರು ಹರಿಸುವ ಕಾರ್ಯ ಆರಂಭ

ಸಿಂಗಟಾಲೂರು ನೀರಾವರಿ ಯೋಜನೆ ಬ್ಯಾರೇಜ್ ಭರ್ತಿ: 10 ಕೆರೆಗಳಿಗೆ ನೀರು ಹರಿಸುವ ಕಾರ್ಯ ಆರಂಭ

ಲೋಕದರ್ಶನ ವರದಿ  

ಹೂವಿನಹಡಗಲಿ 10: ಇಲ್ಲಿನ ಸಿಂಗಟಾಲೂರು ನೀರಾವರಿ ಯೋಜನೆಯ ಬ್ಯಾರೇಜ್ ಭರ್ತಿಯಾಗಿದ್ದು, ನೀರು ಹೊರಬಿಡಲಾಗಿದೆ. ಕಳೆದ ಒಂದು ವಾರದಿಂದ ಪಶ್ಚಿಮಘಟ್ಟದ ಮಲೆನಾಡು ಭಾಗದಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಾ ಮತ್ತು ಭದ್ರಾ ಜಲಾಶಯಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹೆಚ್ಚುವರಿ ನೀರನ್ನು ತುಂಗಭದ್ರಾ ನದಿಗೆ ಹರಿಸಲಾಗುತ್ತಿದೆ.  

ಬುಧವಾರ ರಾತ್ರಿ ಹಾಗೂ ಗುರುವಾರ ಮಧ್ಯಾಹ್ನದವರೆಗೆ ಸುಮಾರು 50 ಸಾವಿರ ಕ್ಯೂಸೆಕ್ ನೀರಿನ ಒಳಹರಿವು ದಾಖಲಾಗಿದ್ದು, ಇದರಿಂದ ಸಿಂಗಟಾಲೂರು ನೀರಾವರಿ ಯೋಜನೆಯ ಬ್ಯಾರೇಜ್ ಸಂಪೂರ್ಣ ಭರ್ತಿಯಾಗಿದೆ.  

ಈ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ 10 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಶಾಸಕ ಕೃಷ್ಣನಾಯ್ಕ ಗುರುವಾರ ಈ ಕಾರ್ಯಕ್ಕೆ ಚಾಲನೆ ನೀಡಿದರು.  ಶಾಕಾರ ಜಾಕ್ವೆಲ್ನಿಂದ ಹಗರಡ ಹಾಗೂ ಹೊಸಹಳ್ಳಿ, ದಾಸನಹಳ್ಳಿ ಕೆರೆ, ಜತೆಗೆ ಹಿರೇಹಡಗಲಿ, ಹಗರನೂರು, ಮಾನ್ಯರ ಮಸಲವಾಡ, ನಾಗತಿಬಸಾಪುರ, ಮುಡೇನೂರು, ತಳಕಲ್ ಸೇರಿದಂತೆ ವಿವಿಧ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ.  

ಮಾನ್ಯರ ಮಸಲವಾಡ ಕೆರೆಯಲ್ಲಿ ಸಣ್ಣ ತಾಂತ್ರಿಕ ದೋಷವಿದ್ದು, ಶುಕ್ರವಾರದಿಂದ ನೀರು ಹರಿಸಲಾಗುವುದು. ತಳಕಲ್ ಕೆರೆಗೆ ನೀರು ತುಂಬಿಸಲು ಹುಗಲೂರು ಪಂಪ್ ಹೌಸ್ ಬಳಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.  

ಈ ಯೋಜನೆಯಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸೌಲಭ್ಯ ದೊರೆಯುವುದರೊಂದಿಗೆ ಅಂತರ್ಜಲ ಮಟ್ಟ ಹೆಚ್ಚಳಕ್ಕೂ ಸಹಕಾರಿಯಾಗಲಿದೆ.  ಮಲೆನಾಡು ಭಾಗದಲ್ಲಿ ಪ್ರವಾಹ ಭೀತಿ ಎದುರಾಗಿದ್ದರೂ, ಇಲ್ಲಿ ಮಳೆಯಿಲ್ಲದ ಸಂದರ್ಭದಲ್ಲಿಯೂ ನದಿಯಲ್ಲಿ ನೀರು ಹರಿದು ಬರುತ್ತಿರುವುದು ನದಿ ತೀರದ ಗ್ರಾಮಗಳಿಗೆ ಅನುಕೂಲವಾಗಿದೆ. ನದಿ ತೀರದ ಗ್ರಾಮಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.  

ಇದೇ ವೇಳೆ ನದಿ ದಂಡೆಯ ಗ್ರಾಮಗಳ ನೀರಾವರಿ ಕೃಷಿ ಜಮೀನುಗಳಲ್ಲಿ ಭತ್ತ ನಾಟಿ ಕಾರ್ಯ ನಡೆಯುತ್ತಿದೆ. ಈಗಾಗಲೇ ಬಿತ್ತನೆ ಮಾಡಿರುವ ಜಮೀನುಗಳಲ್ಲಿ ಬೆಳೆದಿರುವ ಸೂರ್ಯಕಾಂತಿ, ಮೆಕ್ಕೆಜೋಳ, ಹೈಬ್ರಿಡ್ ಜೋಳ ಸೇರಿದಂತೆ ವಿವಿಧ ಬೆಳೆಗಳಿಗೆ ಪಂಪ್ಸೆಟ್ಗಳ ಮೂಲಕ ನದಿ ನೀರು ಹರಿಸಲಾಗುತ್ತಿದೆ.  ಮಳೆ ಇಲ್ಲದಿದ್ದರೂ ನದಿಯಲ್ಲಿ ನೀರು ಹರಿದು ಬಂದಿರುವುದು ನದಿ ತೀರದ ರೈತರಿಗೆ ವರದಾನವಾಗಿದೆ. 


ಸುದ್ದಿ ಓದಿ