ಹೂವಿನ ಹಡಗಲಿ

ಸುಕ್ಷೇತ್ರ ಹೊಳಗುಂದಿಯಲ್ಲಿಂದು ಸಿದ್ದೇಶ್ವರ ಸ್ವಾಮಿಯ ರಥೋತ್ಸವ

ಸುಕ್ಷೇತ್ರ ಹೊಳಗುಂದಿಯಲ್ಲಿಂದು ಸಿದ್ದೇಶ್ವರ ಸ್ವಾಮಿಯ ರಥೋತ್ಸವ

ಮುದೇಗೌಡ್ರ ಅಶೋಕ

ಹೂವಿನಹಡಗಲಿ 05: ಹೂವಿನ ಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷ ಸಹ ಜ.6ರಂದು ಸಿದ್ದೇಶ್ವರ ಸ್ವಾಮಿಯ ರಥೋತ್ಸವ ,7ರಂದು ಅಗ್ನಿ ಕಾರ್ಯಕ್ರಮ ಜರುಗಲಿದೆ. 

ಗ್ರಾಮದ ಬೆಟ್ಟದ ಮೇಲೆ ಕಟ್ಟಲಾಗಿರುವ ಶ್ರೀಸಿದ್ದೇಶ್ವರ ಸುಕ್ಷೇತ್ರ ಗತ ಕಾಲ ವೈಭವ ಸಾರುವ ಜತೆಗೆ ಕಲೆ,ಸಂಸ್ಕೃತಿ,ಸಾಹಿತ್ಯ,ರಂಗಭೂಮಿ  ಮತ್ತು ಸರ್ವ ಧರ್ಮವನ್ನು ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಸಾರುತ್ತಿದೆ. ಹೂವಿನ ಹಡಗಲಿಯಿಂದ ಪೂರ್ವ ದಿಕ್ಕಿನಲ್ಲಿ 9ಕಿ.ಮೀ.ದೂರ ವಿರುವ ಸುಕ್ಷೇತ್ರ ಹೊಳಗುಂದಿ-ಬಾವಿಹಳ್ಳಿ ಅವಳಿ ಗ್ರಾಮಗಳಿವೆ. ಪುರಾತನ ಕಾಲದಲ್ಲಿ *.ವೀರಾಪುರ,*.ಸಿದ್ದಾಪುರ,*.ಜೈರಾಪುರ , *.ಗಿರಿಯಾಪುರ, *.ಸೋಮಾಪುರ, *.ಅರಿಕೇರಿ ಹಾಗೂ *.ಸನಗಟ್ಟಿ ಈ ಏಳು ಹಳ್ಳಿಗಳನ್ನೊಳಗೊಂಡ ಏಳಗುಂದಿ ಹೆಸರಿನಲ್ಲಿ ಗುರುತಿಸಲ್ಪಟ್ಟಿದ್ದು ಈ ಗ್ರಾಮ ಕ್ರಮೇಣ ಹೊಳಗುಂದಿ ಎಂಬ ಹೆಸರು ಪಡೆಯಿತು. 

 ಈ ಗ್ರಾಮದ ಒಂದು ಬೆಟ್ಟದಲ್ಲಿ ಶ್ರೀಸಿದ್ದೇಶ್ವರ ಸ್ವಾಮಿಯ ಲಿಂಗದ ಉದ್ಬವ ಮೂರ್ತಿ  ಇದೆ.ಇದರ ಸುತ್ತ-ಮುತ್ತಲೂ ಹಾವಿನ ಹುತ್ತ,ಗಿಡ ಬಳ್ಳಿ ಬೆಳೆದಿದ್ದು ,ಗವಿಯಂತಿದ್ದ ಬೆಟ್ಟದಲ್ಲಿ ಮೇಯಲು ಹೋಗುತ್ತಿದ್ದ ಜಾನುವಾರುಗಳ ಪೈಕಿ ಗೌರಿ ಎಂಬ ಗೋವು ಪ್ರತಿನಿತ್ಯ ಲಿಂಗದ ಮೇಲೆ ಹಾಲನ್ನು ಕರೆಯಿತಿತ್ತೆಂಬ ಕಥೆಯಿದೆ.ಇದನ್ನು ಕಂಡ ಗ್ರಾಮದ ಹಿರಿಯರ ಕನಸಿನಲ್ಲಿ ಬಂದ ಶ್ರೀಸಿದ್ದೇಶ್ವರ ಸ್ವಾಮಿ ತನ್ನ ದೇವಸ್ಥಾನ ನಿರ್ಮಿ ಸುವಂತೆ ತಿಳಿಸಿದ ಎನ್ನಲಾಗಿದೆ.ಅಂದು ಆ ಸ್ಥಳದಲ್ಲಿ ಶ್ರೀಸಿದ್ದೇಶ್ವರ ದೇವಸ್ಥಾನ ನಿರ್ಮಿಸಿರುವ ಪ್ರತೀತಿಯಿದೆ. ದೇವಸ್ಥಾನದಲ್ಲಿ ಸ್ವಾಮಿಯ ಉದ್ಬವ ಲಿಂಗದ ಹಿಂಭಾಗದಲ್ಲಿ ರೇಣುಕಾ ಚಾರ್ಯರ ಪ್ರತಿಮೆ,ಗರ್ಭಗುಡಿಯ ಹೊರಭಾಗದಲ್ಲಿ ಅಶ್ವತ್ಥ ವೃಕ್ಷಗಳು ಇವೆ. ಇತಿಹಾಸ ಸಾರುವ ಶಾಸನಗಳಿರುವ ದೇವಾಲಯಗಳಿದ್ದು,ಪಂಚಲಿಂಗು ಗ್ರಾಮವೆಂಬ ಹೆಗ್ಗಳಿಕೆಗೆ ಪಾತ್ರವಾದ ಹೊಳಗುಂದಿಯಲ್ಲಿ ಸಿದ್ದೇಶ್ವರ,ಬೆಲ್ಲೇಶ್ವರ, ಸೋಮೇಶ್ವರ,ಬಾಳೇಶ್ವರ ಗುಡಿಗಳಲ್ಲಿ ಶಾಸನಗಳಿವೆ.ಇದೀಗ ಸೋಮೇಶ್ವರ ದೇವಸ್ಥಾನ ಶೀಥಿಲಾವಸ್ಥೆಯಲ್ಲಿದೆ.

  ಧಾರ್ಮಿಕ ಕಾರ್ಯಕ್ರಮಗಳು : ಕಾರ್ತಿಕಮಾಸ,ಶ್ರಾವಣ ಮಾಸದಲ್ಲಿ ಪ್ರಮುಖ ಧಾರ್ಮಿ ಕ ಕಾರ್ಯಕ್ರಮಗಳು ಇಂದಿಗೂ ಆಚರಣೆಯಲ್ಲಿವೆ.ಈ ಎಲ್ಲ ಕಾರ್ಯಕ್ರಮಗಳು ಮಾಡಲು ದೇವಸ್ಥಾನ ಕ್ರಿಯಾ ಮೂರ್ತಿಗಳಾದ ಮರುಳಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು, ಸಿದ್ದೇಶ್ವರ ಸಂಸ್ಥಾನ ಮಠ ಅಳವಂಡಿ, ಹೊಳಗುಂದಿ-ಬಾವಿಹಳ್ಳಿ ಇವರ ದಿವ್ಯ ನೇತೃತ್ವದಲ್ಲಿ ಜರುಗಲಿವೆ. ದೇವಸ್ಥಾನ ಸಮಿತಿಯಿಂದ ಸಭೆ,ಸಮಾರಂಭ,ಸಾಂಸ್ಕೃತಿಕ,ಮದುವೆ ಸಮಾರಂಭ ಮಾಡಲು 1986ರಲ್ಲಿ ಕಲ್ಯಾಣ ಮಂಟಪ ನಿರ್ಮಿಸಿ ಬಡಜನರ ಕಲ್ಯಾಣಕ್ಕೆ ಅನುಕೂಲ ಕಲ್ಪಿಸಿದೆ.

ನವಗ್ರಹ ಮೂರ್ತಿ  ಪ್ರತಿಷ್ಠಾಪಿಸಲಾಗಿದೆ.ಶ್ರೀಮರಿಸ್ವಾಮಿ ಮಠದ ಪಾಟೀಲ ಪ್ರಸಾದ ನಿಲಯ ಕಟ್ಟಡ ನಿರ್ಮಿಸಲಾಗಿದೆ.   ಹೀಗೆ ಹತ್ತು ಹಲವು ವೈಶಿಷ್ಟಗಳೊಂದಿಗೆ ಜ.6ರಂದು ಸುಕ್ಷೇತ್ರ ಹೊಳಗುಂದಿ ಶ್ರೀಸಿದ್ದೇಶ್ವರ ಸ್ವಾಮಿಯ  ರಥೋತ್ಸವ,7ರಂದು ಸ್ವಾಮಿಯ ಅಗ್ನಿ ಕಾರ್ಯಕ್ರಮ,ಪಲ್ಲಕ್ಕಿ ಉತ್ಸವ  ನಡೆಯಲಿದ್ದು, ಸಾವಿರಾರು ಸಂಖ್ಯೆಯ ಭಕ್ತರು ಪಾಲ್ಗೊಳ್ಳಲಿದ್ದಾರೆ.ಜಾತ್ರೆಯ ನಿಮಿತ್ತ ಗ್ರಾಮದ ಕಲಾವಿದರಿಂದ ನಾಟಕ ಪ್ರದರ್ಶನ ಜತೆಗೆ ರಸ ಮಂಜರಿ ಕಾರ್ಯಕ್ರಮಗಳು ನಡೆಯಲಿದ್ದು, ಸಾಂಸ್ಕೃತಿಕ ಕಾರ್ಯಕ್ರಮ ಹಬ್ಬ,ಹರಿ ದಿನಗಳಲ್ಲಿ ನಿರಂತರ ಜರುಗುತ್ತಿವೆ. ಈಚೆಗೆ ದೇವಸ್ಥಾನದ ಕಮಿಟಿ ಅಧ್ಯಕ್ಷ ಶ್ಯಾನಭೋಗರ ಮಹೇಶ್ವರಪ್ಪ ಮತ್ತು ಕಮಿಟಿ ಸದಸ್ಯರು ಸೇರಿಕೊಂಡು ದೇವಸ್ಥಾನದ ಅಭಿವೃದ್ದಿ ಕಾರ್ಯಗಳಿಗೆ ಶ್ರಮಿಸುತ್ತಿದ್ದಾರೆ. ಜತೆಗೆ ದೇವಸ್ಥಾನದಲ್ಲಿ ನಾನಾ ಅಭಿವೃದ್ದಿ ಕಾರ್ಯಗಳು ನಡೆಯಲಿದ್ದು, ಭಕ್ತರು ಧನ ಸಹಾಯ ಮಾಡಬೇಕೆಂದು ಕಮಿಟಿಯವರು ಕೋರಿದ್ದಾರೆ. 


ಸುದ್ದಿ ಓದಿ