ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ: ಯಶವಂತರಾಯಗೌಡ
ಸಾರ್ವಜನಿಕ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ: ಯಶವಂತರಾಯಗೌಡ
ಲೋಕದರ್ಶನ ವರದಿ
ಇಂಡಿ 12: ತಾಲ್ಲೂಕಿನ ಅಥರ್ಗಾ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಸಾರ್ವಜನಿಕರ ಕೆಲಸಗಳನ್ನು ಅಧಿಕಾರಿಗಳು ತ್ವರಿತವಾಗಿ ಹಾಗೂ ಪ್ರಾಮಾಣಿಕವಾಗಿ ಮಾಡಿಕೊಡಬೇಕು. ಯಾವುದೇ ರೀತಿಯಲ್ಲಿ ಲಂಚಕ್ಕೆ ಬೇಡಿಕೆ ಇಟ್ಟರೆ ತಮ್ಮ ಗಮನಕ್ಕೆ ತರಬೇಕು. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜನಸ್ಪಂದನ ಕಾರ್ಯಕ್ರಮವು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ, ಆಡಳಿತಾತ್ಮಕವಾಗಿ ತ್ವರಿತ ಪರಿಹಾರ ಒದಗಿಸುವ ಜನಪರ ಕಾರ್ಯಕ್ರಮವಾಗಿದೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಡಿತರ ಚೀಟಿ, ಪಿಂಚಣಿ, ಕಂದಾಯ ಇಲಾಖೆಯ ದಾಖಲೆಗಳು, ರಸ್ತೆ, ವಿದ್ಯುತ್ ದೀಪ, ಕುಡಿಯುವ ನೀರು ಸೇರಿದಂತೆ ವಿವಿಧ ಮೂಲಸೌಕರ್ಯ ಹಾಗೂ ಇತರ ಸಮಸ್ಯೆಗಳ ಕುರಿತು ಶಾಸಕರಿಗೆ ಅರ್ಜಿ ಸಲ್ಲಿಸಿದರು. ಅರ್ಜಿಗಳನ್ನು ಪರೀಶೀಲಿಸಿದ ಶಾಸಕರು, ಸಂಬಂಧಪಟ್ಟ ಅಧಿಕಾರಿಗಳ ಮೂಲಕ ಸಾಧ್ಯವಾದಷ್ಟು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಒದಗಿಸಲು ಸೂಚಿಸಿದರು.
ಇಂಡಿ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿ, ಜನಸಾಮಾನ್ಯರ ಕುಂದುಕೊರತೆ ಹಾಗೂ ಅಗತ್ಯಗಳಿಗೆ ಆಡಳಿತ ಸ್ಪಂದಿಸಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಇಂಡಿ ತಹಶೀಲ್ದಾರ್ ನಾಗೇಂದ್ರ ಕೊಳಶೆಟ್ಟಿ ಕಾರ್ಯಕ್ರಮದಲ್ಲಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಇಂಡಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾದೇವಪ್ಪ ಏವೂರ, ಭೂಸ್ವಾಧೀನ ಅಧಿಕಾರಿ ಜಿ.ಎಸ್. ಹೀರೆಮಠ, ನಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಭೀಮಣ್ಣ ಕವಲಗಿ, ಸಿಪಿಐ ಸುನೀಲ ಪಾಟೀಲ, ಬಳ್ಳೊಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ. ಸಾಹುಕಾರ, ಅಥರ್ಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗೀರೀಶ್ ಚಾಂದಕೋಟೆ, ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಗಣಪತಿ ಬಾಣಿಕೋಲ್, ಬಳ್ಳೊಳ್ಳಿ ಉಪ ತಹಶೀಲ್ದಾರ್ ಎಚ್.ಎಚ್. ಗುನ್ನಾಪೂರ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ರಾವೂರ, ಎಸ್.ಎಚ್. ಮುಜಗೊಂಡ, ಬಳ್ಳೊಳ್ಳಿ ಕಂದಾಯ ನೀರೀಕ್ಷಕ ಪಿ.ಎಸ್. ಕೊಡವನರ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು. ಕೃಷಿ, ತೋಟಗಾರಿಕೆ, ಪಂಚಾಯಿತಿ, ಅಬಕಾರಿ, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ನೀರಾವರಿ, ಕೆಬಿಜೆಎನ್, ಸಾರಿಗೆ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.