ಹಗಲು ಹೊತ್ತಿನಲ್ಲಿ ವಿದ್ಯುತ್ತು ಕೊಡಬೇಕೆಂದು ಆಗ್ರಹಿಸಿ ಮನವಿ
ಹೂವಿನಹಡಗಲಿ 08: ತಾಲೂಕಿನ ಉತ್ತಂಗಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ರೈತರ ಪಂಪ್ ಸೆಟ್ಗಳಿಗೆ ಬೆಳಗಿನ ಜಾವ ನಾಲ್ಕು ಗಂಟೆಗೆ ವಿದ್ಯುತ್ ಸರಬರಾಜು ಮಾಡುವುದನ್ನು ನಿಲ್ಲಿಸಿ ಹಗಲಿನಲ್ಲಿ ವಿದ್ಯುತ್ತು ಕೊಡಬೇಕೆಂದು ಆಗ್ರಹಿಸಿ, ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ರಾಜ್ಯಧ್ಯಕ್ಷ ಎನ್ ಎಂ ಸಿದ್ದೇಶ್ ಅವರು ಇಟ್ಟಿಗಿ ವಿದ್ಯುತ್ ಸರಬರಾಜು ಕಚೇರಿಯ ಶಾಖಾಧಿಕಾರಿ ಎನ್ ಆನಂದ್ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಅವರು ಈ ಸಂದರ್ಭದಲ್ಲಿ ಮನವಿ ಸಲ್ಲಿಸಿ ಮಾತನಾಡಿ, ಕಾಡು ಪ್ರಾಣಿಗಳ ವಿಷಜಂತುಗಳ ಕಾಟಕ್ಕೆ ರಾತ್ರಿ ವೇಳೆಯಲ್ಲಿ ರೈತರು ಹೊಲಗಳಿಗೆ ನೀರು ಹಾಯಿಸಲು ಹೋಗಲು ಹೆದರುತ್ತಿದ್ದಾರೆ. ಇತ್ತೀಚಿಗೆ ಹಗಲಿನ ವೇಳೆಯಲ್ಲಿ ಚಿರತೆಗಳು ಕಾಡು ಹಂದಿಗಳು, ವಿಷಕಾರಿ ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಇಂತಹ ಪರಿಸ್ಥಿತಿಯಲ್ಲಿ ರಾತ್ರಿ ವೇಳೆಯಲ್ಲಿ ಹೊಲಗಳಿಗೆ ನೀರು ಹಾಯಿಸಲು ಹೋದಂತಹ ರೈತರಿಗೆ ಜೀವ ಭಯ ಹೆದರಿಕೆ ಕಾಡುತ್ತಿದೆ. ಕೂಡಲೇ ಅಧಿಕಾರಿಗಳು ರೈತರ ಸಂಕಷ್ಟ ಅರಿತು ಹಗಲಿನಲ್ಲಿ ವಿದ್ಯುತ್ ಕಲ್ಪಿಸಲು ಆಗ್ರಹಿಸಿದರು.
ರೈತರ ಮನವಿಗೆ ಸ್ಪಂದಿಸಿ ಹಲಿನಲ್ಲಿ ವಿದ್ಯುತ್ ಸರಬರಾಜು ಮಾಡದಿದ್ದಲ್ಲಿ ನೀರು ಹಾಯಿಸಲು ಹೋದಂತಹ ರೈತರ ಜೀವಕ್ಕೆ ಏನಾದರು ತೊಂದರೆಯಾದಲ್ಲಿ ಅದಕ್ಕೆ ಜೆಸ್ಕಾಂ ಇಲಾಖೆಯ ಅಧಿಕಾರಿಗಳೇ ಹೊಣೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಈರುಳ್ಳಿ ಬೆಳೆಗಾರರ ಸಂಘದ ಖಜಾಂಚಿ ಮೂಲಿಮನಿ ಶರಣಪ್ಪ, ರಾಜ್ಯ ಕಾರ್ಯದರ್ಶಿ ಹೆಚ್. ಭದ್ರಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಎಚ್ಎಂ ಮಂಜಯ್ಯ, ರೈತರಾದ ಕೆ. ಕೊಟ್ರೇಶ್, ಕೆ. ತಾತಪ್ಪ, ಶಿವರೆಡ್ಡಿ, ಸುರೇಶ್ ಕಳಕಪ್ಪನವರ್, ದಸ್ತಗಿರಿ ಸಾಬ್, ಸಿಜೆ ನಾಗರಾಜ್, ಸೇರಿದಂತೆ ಇತರೆ ರೈತರು ಇದ್ದರು. ಈ ಸಂದರ್ಭದಲ್ಲಿ ಮನವಿ ಸ್ವೀಕರಿಸಿ ಶಾಖಾಧಿಕಾರಿ ಎನ್ ಆನಂದ ಅವರು ಮಾತನಾಡಿ, ಈ ವಿಷಯವನ್ನು ಮೇಲಾಧಿಕಾರಿಗಳ ಗಮನಕ್ಕೆ ತಂದು ಹಗಲಿನಲ್ಲಿ ವಿದ್ಯುತ್ ಕಲ್ಪಿಸುವ ಭರವಸೆ ನೀಡಿದರು.