ಹೂವಿನ ಹಡಗಲಿ

ಮಳೆ ಕೊರತೆ: ಬರಪೀಡಿತ ಪ್ರದೇಶಗಳಿಗೆ ಸಚಿವ ಜಮೀರ್ ಭೇಟಿ

ಮಳೆ ಕೊರತೆ: ಬರಪೀಡಿತ ಪ್ರದೇಶಗಳಿಗೆ ಸಚಿವ ಜಮೀರ್ ಭೇಟಿ


ಹೂವಿನಹಡಗಲಿ  09: ಬರ ನಿರ್ವಹಣೆ ಹಾಗೂ ಬೆಳೆ ನಷ್ಟದ ಪರೀಶೀಲನೆಗಾಗಿ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಶುಕ್ರವಾರ ತಾಲೂಕಿನ ಇಟ್ಟಿಗಿ ಗ್ರಾಮಕ್ಕೆ ಭೇಟಿ ನೀಡಿ ರೈತರಿಂದ ಅಹವಾಲು ಆಲಿಸಿದರು.  

ಮಳೆ ಕೊರತೆಯಿಂದ ಸೂರ್ಯಕಾಂತಿ, ಈರುಳ್ಳಿ ಸೇರಿದಂತೆ ವಿವಿಧ ಬೆಳೆಗಳು ಒಣಗಿ ನಷ್ಟವಾಗಿರುವುದನ್ನು ಸಚಿವರು ಪರೀಶೀಲಿಸಿದರು. ಶಾರದಮ್ಮ ಎಂಬ ರೈತ ಮಹಿಳೆಯ ಹೊಲಕ್ಕೆ ಭೇಟಿ ನೀಡಿದ ಅವರು, ಮಳೆ ಬಾರದ ಕಾರಣ ಬೆಳೆ ಸಂಪೂರ್ಣ ಹಾನಿಯಾಗಿರುವ ಕುರಿತು ಮಾಹಿತಿ ಪಡೆದರು. ಪ್ರತಿ ಎಕರೆಗೆ ಸುಮಾರು ?25 ಸಾವಿರ ಖರ್ಚು ಮಾಡಿದ್ದು, ಬೆಳೆ ನಷ್ಟವಾಗಿರುವುದರಿಂದ ಸರ್ಕಾರದಿಂದ ತಕ್ಷಣ ಪರಿಹಾರ ನೀಡಬೇಕು ಎಂದು ರೈತರು ಮನವಿ ಮಾಡಿದರು.  

ಈರುಳ್ಳಿ ಸೇರಿದಂತೆ ಮಳೆ ಕೊರತೆಯಿಂದ ಹಾನಿಗೊಳಗಾದ ವಿವಿಧ ಬೆಳೆಗಳ ನಷ್ಟವನ್ನು ಪರೀಶೀಲಿಸಿ ಸೂಕ್ತ ಪರಿಹಾರ ಒದಗಿಸುವ ಭರವಸೆಯನ್ನು ಸಚಿವರು ನೀಡಿದರು. ಮುಂಗಾರು ಮಳೆ ಕೊರತೆಯಿಂದ ಬಿತ್ತನೆ ಮಾಡಲು ಸಾಧ್ಯವಾಗದ ಕೃಷಿ ಜಮೀನುಗಳಿಗೂ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದರು.  

ಮುಂಗಾರು ಬೆಳೆಗಳಿಗೆ ಸರ್ಕಾರದಿಂದ ಪ್ರತಿ ಎಕರೆಗೆ ?50 ಸಾವಿರ ಪರಿಹಾರ ನೀಡಬೇಕು ಎಂದು ರೈತ ಸಂಘಟನೆಗಳು ಹಾಗೂ ರೈತರು ಸಚಿವರಿಗೆ ಮನವಿ ಸಲ್ಲಿಸಿದರು. ಶಾಸಕ ಎಲ್‌. ಕೃಷ್ಣನಾಯ್ಕ, ಜಿಲ್ಲಾಧಿಕಾರಿ ಕವಿತಾ ಎಸ್‌. ಮನ್ನಿಕೇರಿ, ಎಸ್‌ಪಿ ಎಸ್‌. ಜಾಹ್ನವಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಿ.ಟಿ. ಮಂಜುನಾಥ್, ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.  

ಸಚಿವ ಜಮೀರ್ ಅಹ್ಮದ್ ಖಾನ್ ಅವರು ಕೊಟ್ಟೂರು ತಾಲೂಕಿನ ಗಜಾಪುರ, ಹರಪನಹಳ್ಳಿ ತಾಲೂಕಿನ ಮೈದೂರು, ಹಗರಿಬೊಮ್ಮನಹಳ್ಳಿ ತಾಲೂಕಿನ ವರದಾಪುರ ಹಾಗೂ ಹೊಸಪೇಟೆ ತಾಲೂಕಿನ ನಂದಿಬಂಡಿ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿಯನ್ನು ಪರೀಶೀಲಿಸಿದರು. ಸಂಜೆ ಹೊಸಪೇಟೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. 


ಸುದ್ದಿ ಓದಿ