ದೇವರಹಿಪ್ಪರಗಿಯಲ್ಲಿ ಸಮಗ್ರ ಅಭಿವೃದ್ಧಿಗೆ ಆದ್ಯತೆ

ದೇವರಹಿಪ್ಪರಗಿಯಲ್ಲಿ ಸಮಗ್ರ ಅಭಿವೃದ್ಧಿಗೆ ಆದ್ಯತೆ  Priority for comprehensive development in Devarahipparagi

ಲೋಕದರ್ಶನ ವರದಿ 

  ದೇವರಹಿಪ್ಪರಗಿ 29: ಪಟ್ಟಣದ ಸಮಗ್ರ ಅಭಿವೃದ್ಧಿಗೆ ಬದ್ಧರಾಗಿದ್ದು, ಇನ್ನಷ್ಟು ಮೂಲಸೌಕರ್ಯ ಹಾಗೂ ಜನಪರ ಯೋಜನೆಗಳನ್ನು ಮಂಜೂರು ಮಾಡುವ ಮೂಲಕ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಶಾಸಕ ರಾಜುಗೌಡ ಪಾಟೀಲ ಕುಡರಿಸಾಲವಾಡಗಿ ಹೇಳಿದರು.

ಪಟ್ಟಣದಲ್ಲಿ ಮಂಗಳವಾರ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಜನರ ಅಗತ್ಯ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.  

 ರಸ್ತೆ ಅಭಿವೃದ್ಧಿಗೆ ಸುಮಾರು 1.5 ಕೋಟಿ, ಐತಿಹಾಸಿಕ ಮಲ್ಲಯ್ಯನ ದೇವಸ್ಥಾನದ ಸಮೀಪ ಹಳ್ಳಕ್ಕೆ ತಡೆಗೋಡೆ ನಿರ್ಮಾಣಕ್ಕೆ 45 ಲಕ್ಷ, ಪ್ರಳಯಕಾಲದ ಕಟ್ಟೆ ಈರಣ್ಣ ದೇವಸ್ಥಾನದ ಸಮೀಪ ಸಮುದಾಯ ಭವನಕ್ಕೆ 10 ಲಕ್ಷ ಹಾಗೂ ಶಾದಿ ಮಹಲ್ ನಿರ್ಮಾಣಕ್ಕೆ ಸುಮಾರು 10 ಲಕ್ಷ ವೆಚ್ಚದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲಾಯಿತು.  

ಕಾಮಗಾರಿಗಳು ಗುಣಮಟ್ಟದಿಂದ ಹಾಗೂ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುವಂತೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಗಮನಹರಿಸಬೇಕು. ಮುಂದಿನ ದಿನಗಳಲ್ಲಿ ಪಟ್ಟಣ ಸೇರಿದಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದು ಶಾಸಕ ರಾಜುಗೌಡ ಪಾಟೀಲ ಹೇಳಿದರು.  

ಈ ಸಂದರ್ಭದಲ್ಲಿ ಪ.ಪಂ. ಅಧ್ಯಕ್ಷರ ಪ್ರತಿನಿಧಿ ಬಸವರಾಜ ದೇವಣಗಾಂವ, ಉಪಾಧ್ಯಕ್ಷ ರಮೇಶ ಮಸಿಬಿನಾಳ, ಸದಸ್ಯ ಕಾಸುಗೌಡ ಜಲಕತ್ತಿ, ಪ್ರಕಾಶ ಮಲ್ಹಾರಿ ಸೇರಿದಂತೆ ವಿವಿಧ ಮುಖಂಡರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.