ಮಾತೃಭಾಷೆಯ ಶಿಕ್ಷಣಕ್ಕೆ ಆದ್ಯತೆ ನೀಡಿ: ಶಿವಾಜಿ ಕಾಗಣಿಕರ

  ಮಾತೃಭಾಷೆಯ ಶಿಕ್ಷಣಕ್ಕೆ ಆದ್ಯತೆ ನೀಡಿ: ಶಿವಾಜಿ ಕಾಗಣಿಕರ  Prioritize education in the mother tongue: Shivaji Kaganikar

ಲೋಕದರ್ಶನ ವರದಿ 

 ಬೆಳಗಾವಿ, ಸೆ. 7: ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ನೀಡುವ ಮನೋಭಾವವನ್ನು ಬೆಳೆಸಬೇಕು. ಮಾತೃಭಾಷೆ ಉಳಿದರೆ ಸಂಸ್ಕೃತಿಯೂ ಶಾಶ್ವತವಾಗಿ ಉಳಿಯುತ್ತದೆ ಎಂದು ಪರಿಸರ ಹೋರಾಟಗಾರ ಹಾಗೂ ಗಾಂಧೀವಾದಿ ಶಿವಾಜಿ ಕಾಗಣಿಕರ ಹೇಳಿದರು.  

 ನಗರದ ಭಡಕಲ್ ಗಲ್ಲಿಯ ಶ್ರೀ ಬನಶಂಕರಿ ದೇವಸ್ಥಾನದ ಸಭಾಂಗಣದಲ್ಲಿ ಗುರು ವಿವೇಕಾನಂದ ವಿವಿಧೋದ್ದೇಶಗಳ ಸಹಕಾರಿ ಸಂಘದ 14ನೇ ವಾರ್ಷಿಕ ಸರ್ವಸಾಧಾರಣ ಸಭೆ ಹಾಗೂ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

 ದೇಶದಲ್ಲಿ ವಿವಿಧ ಭಾಷೆ, ಧರ್ಮ ಹಾಗೂ ಜಾತಿಗಳಿದ್ದರೂ ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು. ಇತ್ತೀಚಿನ ದಿನಗಳಲ್ಲಿ ಇಂಗ್ಲಿಷ್ ಭಾಷೆಯ ಮೇಲಿನ ವ್ಯಾಮೋಹ ಹೆಚ್ಚುತ್ತಿದ್ದು, ಹಣ ಖರ್ಚು ಮಾಡಿ ಇಂಗ್ಲಿಷ್ ಕಲಿಸುವ ಭರದಲ್ಲಿ ಮಾತೃಭಾಷೆಯನ್ನು ಮರೆಯುತ್ತಿರುವುದು ಕಳವಳಕಾರಿ ಬೆಳವಣಿಗೆ ಎಂದು ಅವರು ಹೇಳಿದರು.  

 ಸಮಾಜದಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ದೃಢ ಸಂಕಲ್ಪ ಅಗತ್ಯ ಎಂದು ಕಾಗಣಿಕರ ತಿಳಿಸಿದರು.  

 ಆಧುನಿಕ ಕೃಷಿ ಪದ್ಧತಿಯಿಂದ ಆಹಾರ, ನೀರು ಹಾಗೂ ಗಾಳಿಯ ಮಾಲಿನ್ಯ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪೂರ್ವಜರು ಅನುಸರಿಸುತ್ತಿದ್ದ ಸಾವಯವ ಕೃಷಿ ಪದ್ಧತಿ ಇಂದಿನ ಕಾಲದಲ್ಲಿ ಅತ್ಯಂತ ಮಹತ್ವದ್ದಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಪಾಲ್ಗೊಂಡಾಗ ಮಾತ್ರ ಭವಿಷ್ಯದ ಭಾರತ ಉಜ್ವಲವಾಗಲಿದೆ ಎಂದರು.