ರೇಷನ್ ಕಾರ್ಡ್‌ ಇ-ಕೆವೈಸಿಗೆ ಒಟಿಪಿ ರದ್ದು

ರೇಷನ್ ಕಾರ್ಡ್‌ ಇ-ಕೆವೈಸಿಗೆ ಒಟಿಪಿ ರದ್ದು  OTP requirement for ration card e-KYC scrapped


ಕಾರವಾರ ಸೆ. 18: ರೇಷನ್ ಕಾರ್ಡ್‌ ಇ-ಕೆವೈಸಿ ಪ್ರಕ್ರಿಯೆ ನಿಧಾನಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಸೆ.17ರಿಂದ ಒಟಿಪಿ ಪದ್ಧತಿಯನ್ನು ಕೈಬಿಟ್ಟು, ಬಯೋಮೆಟ್ರಿಕ್ ಮೂಲಕ ಇ-ಕೆವೈಸಿ ನವೀಕರಿಸುವ ವ್ಯವಸ್ಥೆ ಜಾರಿಗೆ ತಂದಿದೆ.  ಉತ್ತರ ಕನ್ನಡ ಜಿಲ್ಲೆಯಲ್ಲಿ ಸೆ.16ರವರೆಗೆ 1,52,913 ರೇಷನ್ ಕಾರ್ಡ್ಗಳ ಇ-ಕೆವೈಸಿ ಪೂರ್ಣಗೊಂಡಿದ್ದು, ಶೇ.26.87ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯ ಒಟ್ಟು 5,69,044 ಕಾರ್ಡ್ಗಳ ಪೈಕಿ ಇನ್ನೂ 4,16,131 ಕಾರ್ಡ್ಗಳ ಇ-ಕೆವೈಸಿ ಬಾಕಿಯಿದೆ. ಈ ಪ್ರಕ್ರಿಯೆ ಸೆ.30ರವರೆಗೆ ಮುಂದುವರಿಯಲಿದೆ.  

ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಹಾಗೂ ಇಂಟರ್ನೆಟ್ ಬಳಕೆಯ ಸಮಸ್ಯೆ, ಸರ್ವರ್ ತೊಂದರೆ ಸೇರಿದಂತೆ ವಿವಿಧ ಕಾರಣಗಳಿಂದ ಇ-ಕೆವೈಸಿ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿತ್ತು. ಇದೀಗ ಒಟಿಪಿ ಬದಲಿಗೆ ಬಯೋಮೆಟ್ರಿಕ್ ವ್ಯವಸ್ಥೆ ಜಾರಿಯಾಗಿರುವುದರಿಂದ ಇ-ಕೆವೈಸಿ ಕಾರ್ಯ ವೇಗ ಪಡೆಯುವ ನೀರೀಕ್ಷೆ ಇದೆ ಎಂದು ಆಹಾರ ಇಲಾಖೆ ತಿಳಿಸಿದೆ.  ರಾಜ್ಯದಲ್ಲಿ ಇ-ಕೆವೈಸಿ ಪ್ರಗತಿಯಲ್ಲಿ ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳು ಮೊದಲ ಎರಡು ಸ್ಥಾನದಲ್ಲಿವೆ. ಉತ್ತರ ಕನ್ನಡ ಜಿಲ್ಲೆ 7ನೇ ಸ್ಥಾನದಲ್ಲಿದೆ.