13 ವರ್ಷದ ಬಾಲಕಿ ಮೇಲಿನ ದೌರ್ಜನ್ಯ ಖಂಡನೆ

13 ವರ್ಷದ ಬಾಲಕಿ ಮೇಲಿನ ದೌರ್ಜನ್ಯ ಖಂಡನೆ  Condemnation of the atrocity against a 13-year-old girl


ಗದಗ, ಸೆ.18: ಗದಗ ನಗರದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ 13 ವರ್ಷದ ಬಾಲಕಿ ಮೇಲೆ ನಡೆದ ಅಮಾನವೀಯ ದೌರ್ಜನ್ಯವನ್ನು ರಾಜ್ಯ ಎಸ್ಸಿ/ಎಸ್ಟಿ ನಕಲಿ ಜಾತಿ ಪ್ರಮಾಣಪತ್ರ ತಡೆ ಸಮಿತಿಯ ಗದಗ ಜಿಲ್ಲಾ ಅಧ್ಯಕ್ಷ ಶ್ರೀಕಾಂತ ಎಸ್‌. ಪೂಜಾರ ತೀವ್ರವಾಗಿ ಖಂಡಿಸಿದ್ದಾರೆ.  

ಘಟನೆ ನಡೆದು ಹಲವು ದಿನಗಳಾದರೂ ನೊಂದ ಕುಟುಂಬದ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳದ ಹಾಗೂ ಪರಿಹಾರದ ಭರವಸೆ ನೀಡದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯವನ್ನು ಅವರು ಆಕ್ರೋಶದಿಂದ ಟೀಕಿಸಿದ್ದಾರೆ.  

ಇಂತಹ ಸೂಕ್ಷ್ಮ ಸಂದರ್ಭದಲ್ಲಿ ನೊಂದವರ ಮನೆಗೆ ಮೊದಲು ಭೇಟಿ ನೀಡಿ ಆತ್ಮಸ್ಥೈರ್ಯ ತುಂಬುವುದು ಸಮಾಜ ಕಲ್ಯಾಣ ಇಲಾಖೆಯ ಕರ್ತವ್ಯ. ಆದರೆ ಗದಗ ಜಿಲ್ಲೆಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಶೋಷಿತ ಸಮಾಜಕ್ಕೆ ಮಾಡಿದ ದ್ರೋಹವಾಗಿದೆ ಎಂದು ಅವರು ಹೇಳಿದ್ದಾರೆ.  

ಸಮಾಜ ಕಲ್ಯಾಣ ಇಲಾಖೆಯ ಉನ್ನತಾಧಿಕಾರಿಗಳು ತಕ್ಷಣ ಬಾಲಕಿಯ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಬೇಕು. ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆಯಡಿ ಸಿಗಬೇಕಾದ ತುರ್ತು ಪರಿಹಾರಧನ ಹಾಗೂ ಬಾಲಕಿಯ ಮುಂದಿನ ಭವಿಷ್ಯಕ್ಕಾಗಿ ಸರ್ಕಾರದಿಂದ ?50 ಲಕ್ಷ ವಿಶೇಷ ಪರಿಹಾರವನ್ನು ತಕ್ಷಣ ಮಂಜೂರು ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.  

ನೊಂದ ಕುಟುಂಬಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ ತಕ್ಷಣ ನ್ಯಾಯ ದೊರೆಯದಿದ್ದರೆ ಮುಂದಿನ ದಿನಗಳಲ್ಲಿ ಗದಗ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಕಚೇರಿಗೆ ಬೀಗ ಹಾಕಿ, ಕಚೇರಿ ಆವರಣದಲ್ಲೇ ಉಗ್ರ ಪ್ರತಿಭಟನೆ ಹಾಗೂ ಸತ್ಯಾಗ್ರಹ ನಡೆಸಲಾಗುವುದು ಎಂದು ಶ್ರೀಕಾಂತ ಎಸ್‌. ಪೂಜಾರ ಎಚ್ಚರಿಸಿದ್ದಾರೆ.