ಬಡ ಕಾರ್ಮಿಕರಿಗೆ ಭೂಮಿ, ವಸತಿ ಸೌಲಭ್ಯ ಕಲ್ಪಿಸಲು ಆಗ್ರಹ

ಬಡ ಕಾರ್ಮಿಕರಿಗೆ ಭೂಮಿ, ವಸತಿ ಸೌಲಭ್ಯ ಕಲ್ಪಿಸಲು ಆಗ್ರಹ  Demand to provide land and housing facilities to poor workers


ಕೊಪ್ಪಳ 18: ಸ್ವಾತಂತ್ರ್ಯ ದೊರೆತು 79 ವರ್ಷ ಕಳೆದರೂ ಬಡ ಕಾರ್ಮಿಕರು ಇಂದಿಗೂ ಭೂಮಿ ಮತ್ತು ವಸತಿ ಸೌಲಭ್ಯಗಳಿಂದ ವಂಚಿತರಾಗಿರುವುದು ವಿಷಾದನೀಯ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ ಶೀಲವಂತರ ಕಲವಳ ವ್ಯಕ್ತಪಡಿಸಿದರು.  

ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಕರ್ನಾಟಕ ಗ್ರಾಮ ಪಂಚಾಯಿತಿ ಮಲ್ಟಿ ಪರ​‍್ಪಸ ಆ್ಯಂಡ್ ಅನ್‌ಆರ್ಗನೈಸ್ಡ್‌ ವರ್ಕರ್ಸ್‌ ಯೂನಿಯನ್ ಹಾಗೂ ಕರ್ನಾಟಕ ವೃತ್ತಿಪರ ವ್ಯವಸಾಯ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ನಾಲ್ಕನೇ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ಬಿಸಿಯೂಟ ಅಡುಗೆದಾರರಿಗೆ ನೀಡುತ್ತಿರುವ ದಿನಕ್ಕೆ 150 ಗೌರವಧನ ಜೀವನ ನಿರ್ವಹಣೆಗೆ ಸಾಲದು. ಬೆಲೆ ಏರಿಕೆಯ ಈ ಸಂದರ್ಭದಲ್ಲಿ ಕಾರ್ಮಿಕರ ಹಕ್ಕುಗಳಿಗಾಗಿ ದೇಶವ್ಯಾಪಿ ಹೋರಾಟ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.  

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಅಸಂಘಟಿತ ಕೃಷಿ ಕಾರ್ಮಿಕರಿಗೆ ಭೂಮಿ ಹಾಗೂ ಮನೆ ಸೌಲಭ್ಯ ಕಲ್ಪಿಸುವುದು ಸರ್ಕಾರದ ಆದ್ಯತೆಯಾಗಬೇಕು. ಕಾರ್ಮಿಕ ವರ್ಗ ಸಂಘಟಿತರಾದರೆ ಮಾತ್ರ ತಮ್ಮ ಹಕ್ಕುಗಳನ್ನು ಪಡೆಯಲು ಸಾಧ್ಯ ಎಂಬ ಕಾರ್ಲ್‌ ಮಾರ್ಕ್ಸ ಅವರ ಮಾತು ಇಂದಿಗೂ ಪ್ರಸ್ತುತವಾಗಿದೆ ಎಂದರು.  

ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್‌.ಎ. ಗಫಾರ್ ಮಾತನಾಡಿ, ಐತಿಹಾಸಿಕ ಕಾರ್ಮಿಕ ಚಳವಳಿಗಳ ಫಲವಾಗಿ ಎಂಟು ಗಂಟೆಗಳ ಕೆಲಸದ ಅವಧಿ ಜಾರಿಗೆ ಬಂದಿದೆ. ಅದೇ ಮಾದರಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣವಾಗಿ ವೇತನ, ಪಿಂಚಣಿ ಹಾಗೂ ವಿಮಾ ಸೌಲಭ್ಯಗಳನ್ನು ಒದಗಿಸಲು ಒಗ್ಗಟ್ಟಿನ ಹೋರಾಟ ಅಗತ್ಯವಿದೆ ಎಂದು ಕರೆ ನೀಡಿದರು.  

ಸಹಾಯಕ ಕಾನೂನು ನೆರವು ಅಭಿಯೋಜಕ ರವಿಚಂದ್ರ ಆರ್‌. ಮಾಟಲದಿನ್ನಿ ಮಾತನಾಡಿ, ಆರ್ಥಿಕವಾಗಿ ಹಿಂದುಳಿದವರು ಹಾಗೂ ಬಡ ಕಾರ್ಮಿಕರಿಗೆ ಉಚಿತ ಕಾನೂನು ಸಲಹೆ ಮತ್ತು ಪ್ರಕರಣಗಳ ನಿರ್ವಹಣೆಗೆ ಸರ್ಕಾರಿ ವಕೀಲರ ಸೌಲಭ್ಯವಿದೆ.

ಬಡ ಪಕ್ಷಿದಾರರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕೆಂಬ ಸುಪ್ರೀಂ ಕೋರ್ಟ್‌ ತೀರ​‍್ಿನ ಪ್ರಯೋಜನವನ್ನು ಕಾರ್ಮಿಕರು ಪಡೆದುಕೊಳ್ಳಬೇಕು. ಬಾಲ್ಯವಿವಾಹ ತಡೆ ಹಾಗೂ ಅಪ್ರಾಪ್ತರಿಗೆ ವಾಹನ ನೀಡದಂತೆ ಎಚ್ಚರ ವಹಿಸಬೇಕು ಎಂದು ಮನವಿ ಮಾಡಿದರು.  

ಕಾರ್ಯಕ್ರಮಕ್ಕೂ ಮುನ್ನ ನಗರದ ಅಶೋಕ ವೃತ್ತದಿಂದ ತಾಲ್ಲೂಕು ಕ್ರೀಡಾಂಗಣದವರೆಗೆ ಕಾರ್ಮಿಕರ ಬೃಹತ್ ಮೆರವಣಿಗೆ ನಡೆಯಿತು. ಧರಣಿ ಕಲಾ ಬಳಗದ ಶ್ರೀಮತಿ ಗೌರಿ ಡಿ. ಗೋನಾಳ ಹಾಗೂ ತಂಡದವರು ಕ್ರಾಂತಿ ಗೀತೆಗಳನ್ನು ಹಾಡಿದರು.  

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಗ್ರಾಮ ಪಂಚಾಯಿತಿ ಮಲ್ಟಿ ಪರ​‍್ಪಸ ಆ್ಯಂಡ್ ಅನ್‌ಆರ್ಗನೈಸ್ಡ್‌ ವರ್ಕರ್ಸ್‌ ಯೂನಿಯನ್ ಅಧ್ಯಕ್ಷ ಕರಿಯಪ್ಪ ಮಣ್ಣಿನವರ್ ವಹಿಸಿದ್ದರು. ಮಹಾದೇವಪ್ಪ ಸಾಲಗುಂದಿ, ಸಮತಾ ಸಂಸ್ಥೆ ಅಧ್ಯಕ್ಷೆ ಸೌಭಾಗ್ಯ ಎಸ್‌. ದೊಡ್ಡಮನಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.  

ಕುಕನೂರು ತಾಲ್ಲೂಕು ಕೆವಿವಿಯು ಅಧ್ಯಕ್ಷೆ ಲಲಿತಾ ಭಜಂತ್ರಿ ಸ್ವಾಗತಿಸಿದರು. ರಾಜ್ಯ ಸಂಚಾಲಕ ಯಲ್ಲಪ್ಪ ಮಾಯಗೇರಿಕೇರಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಕೊಪ್ಪಳ ತಾಲ್ಲೂಕು ಕೆವಿವಿಯು ಅಧ್ಯಕ್ಷ ಸುಂಕಪ್ಪ ಮೀಸಿ ವಂದಿಸಿದರು.