ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಮೈಸೂರಿನಲ್ಲಿ ವಿವೇಕ ಸ್ಮಾರಕ ಉದ್ಘಾಟಿಸಲಿರುವ ಪ್ರಧಾನಿ ಮೋದಿ Modi to inaugurate Viveka Smaraka in Mysuru on Saturday

ಬೆಂಗಳೂರು, ಜುಲೈ 31 : ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮೈಸೂರಿಗೆ ಭೇಟಿ ನೀಡಿ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ನಿರ್ಮಿಸಲಾಗಿರುವ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರ ‘ವಿವೇಕ ಸ್ಮಾರಕ’ವನ್ನು ಉದ್ಘಾಟಿಸಲಿದ್ದಾರೆ. ಯುವಜನರಲ್ಲಿ ಮೌಲ್ಯಾಧಾರಿತ ಶಿಕ್ಷಣ, ನಾಯಕತ್ವ ಗುಣಗಳು ಮತ್ತು ವ್ಯಕ್ತಿತ್ವ ವಿಕಸನವನ್ನು ಉತ್ತೇಜಿಸುವ ಉದ್ದೇಶದಿಂದ ಈ ಮಹತ್ವದ ಕೇಂದ್ರವನ್ನು ಸ್ಥಾಪಿಸಲಾಗಿದೆ.

ಪ್ರಧಾನಿ ಕಚೇರಿ (ಪಿಎಂಒ) ಮಾಹಿತಿ ಪ್ರಕಾರ, ಮೋದಿ ಅವರು ಮಧ್ಯಾಹ್ನ ಸುಮಾರು 3.30ಕ್ಕೆ ಕೇಂದ್ರವನ್ನು ಉದ್ಘಾಟಿಸಿ, ನಂತರ ನಡೆಯುವ ಸಮಾರಂಭದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಸ್ವಾಮಿ ವಿವೇಕಾನಂದರು 1892ರ ನವೆಂಬರ್‌ನಲ್ಲಿ ದೇಶಾದ್ಯಂತ ಕೈಗೊಂಡ ಆಧ್ಯಾತ್ಮಿಕ ಯಾತ್ರೆಯ ಸಂದರ್ಭದಲ್ಲಿ ಮೈಸೂರಿಗೆ ಭೇಟಿ ನೀಡಿದ ಐತಿಹಾಸಿಕ ಘಟನೆಯನ್ನು ಸ್ಮರಿಸುವ ಉದ್ದೇಶದಿಂದ ವಿವೇಕ ಸ್ಮಾರಕವನ್ನು ನಿರ್ಮಿಸಲಾಗಿದೆ. ಮೈಸೂರಿನ ವಾಸದ ಅವಧಿಯಲ್ಲಿ ವಿವೇಕಾನಂದರು ಉಪನ್ಯಾಸಗಳನ್ನು ನೀಡಿದ್ದರು, ಪಂಡಿತರು ಮತ್ತು ಭಕ್ತರೊಂದಿಗೆ ಸಂವಾದ ನಡೆಸಿದ್ದರು. ಅಲ್ಲದೆ, 1893ರಲ್ಲಿ ಚಿಕಾಗೋದಲ್ಲಿ ನಡೆದ ವಿಶ್ವ ಧರ್ಮ ಸಂಸತ್ತಿಗೆ ಅವರ ಪ್ರಯಾಣಕ್ಕೆ ಮಹಾರಾಜ ಶ್ರೀ ಚಾಮರಾಜೇಂದ್ರ ಒಡೆಯರ್‌ ಅವರು ನೀಡಿದ ಪ್ರೋತ್ಸಾಹ ಮತ್ತು ಬೆಂಬಲ ಪ್ರಮುಖ ಪಾತ್ರ ವಹಿಸಿತ್ತು.

ಐತಿಹಾಸಿಕ ನಿರಂಜನ ಮಠದ ಆವರಣದಲ್ಲಿ ನಿರ್ಮಿಸಲಾಗಿರುವ ಈ ಕೇಂದ್ರವು 81,000 ಚದರ ಅಡಿಗೂ ಹೆಚ್ಚು ವಿಸ್ತೀರ್ಣ ಹೊಂದಿದೆ. ಇದರಲ್ಲಿ ಮುಖ್ಯ ಕಟ್ಟಡ ಹಾಗೂ ಒಂದು ಹೆಚ್ಚುವರಿ ಕಟ್ಟಡವಿದೆ. ಕೇಂದ್ರದಲ್ಲಿ 4-ಡಿ ಅನುಭವ ಕೇಂದ್ರ, ಪ್ರದರ್ಶನ ಸಭಾಂಗಣ, ಸುಮಾರು 700 ಆಸನಗಳ ಸಾಮರ್ಥ್ಯದ ಬಯಲು ರಂಗಮಂದಿರ, ತರಗತಿ ಕೊಠಡಿಗಳು, ಸಮ್ಮೇಳನ ಕೊಠಡಿಗಳು, ಗ್ರಂಥಾಲಯ, ವಾಚನಾಲಯ, ಧ್ಯಾನ ಮತ್ತು ಯೋಗ ಸಭಾಂಗಣ, ಪುಸ್ತಕ ಮಳಿಗೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುವ ವಿದ್ಯಾರ್ಥಿಗಳಿಗೆ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಸ್ವಾಮಿ ವಿವೇಕಾನಂದರ ಜೀವನ ಮತ್ತು ಬೋಧನೆಗಳಿಂದ ಪ್ರೇರಣೆ ಪಡೆದು, ಮೌಲ್ಯಾಧಾರಿತ ಶಿಕ್ಷಣ, ನಾಯಕತ್ವ ತರಬೇತಿ ಮತ್ತು ವ್ಯಕ್ತಿತ್ವ ವಿಕಸನದ ಕೇಂದ್ರವಾಗಿ ಈ ಸ್ಮಾರಕವನ್ನು ರೂಪಿಸಲಾಗಿದೆ.

ಮೈಸೂರು ನಗರ ಮತ್ತು ಸುತ್ತಮುತ್ತಲಿನ ಶಿಕ್ಷಣ ಸಂಸ್ಥೆಗಳ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ನಗರ ಮತ್ತು ಗ್ರಾಮೀಣ ಭಾಗದ ಯುವಜನರು ಈ ಕೇಂದ್ರದ ಪ್ರಯೋಜನ ಪಡೆಯಲಿದ್ದಾರೆ. ಉಪನ್ಯಾಸಗಳು, ಕಾರ್ಯಾಗಾರಗಳು, ಅಲ್ಪಾವಧಿ ಕೋರ್ಸ್‌ಗಳು ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳ ಮೂಲಕ ರಾಷ್ಟ್ರ ನಿರ್ಮಾಣ ಮತ್ತು ವ್ಯಕ್ತಿತ್ವ ರೂಪಿಸುವ ಚಟುವಟಿಕೆಗಳನ್ನು ಇಲ್ಲಿ ನಡೆಸಲಾಗುತ್ತದೆ.

ಕೇಂದ್ರ ಉದ್ಘಾಟನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಸಮಾರಂಭವನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ.