ಸಚಿವ ಎಂ. ಬಿ. ಪಾಟೀಲ ಅವರು ಸಿದ್ಧೇಶ್ವರ ಸ್ವಾಮೀಜಿಗಳ ಜ್ಞಾನಯೋಗಾಶ್ರಮಕ್ಕೆ ತೆರಳಿ ಪೂಜೆ

ಸಚಿವ ಎಂ. ಬಿ. ಪಾಟೀಲ ಅವರು ಸಿದ್ಧೇಶ್ವರ ಸ್ವಾಮೀಜಿಗಳ ಜ್ಞಾನಯೋಗಾಶ್ರಮಕ್ಕೆ ತೆರಳಿ ಪೂಜೆ Minister M. B. Patil visited Siddheshwar Swamiji's Gyan Yoga Ashram and offered prayers

ವಿಜಯಪುರ 06 :  ನೂತನ ಸಂಪುಟದಲ್ಲಿ ಸಚಿವರಾದ ನಂತರ ಇದೇ ಮೊದಲ ಬಾರಿಗೆ  ಇಂದು ಶನಿವಾರ ತವರು ಜಿಲ್ಲೆಗೆ ಆಗಮಿಸಿದ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಅವರು ನೇರವಾಗಿ ನಗರದ ಸಿದ್ಧೇಶ್ವರ ಸ್ವಾಮೀಜಿಗಳ ಜ್ಞಾನಯೋಗಾಶ್ರಮಕ್ಕೆ ತೆರಳಿ ಪೂಜೆ ಸಲ್ಲಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು.   ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆಗೆ ಪೂಜೆ  ಸಲ್ಲಿಸಿದ ಸಚಿವರನ್ನು ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿಯವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು ರಚಿಸಿದ ಮೊದಲ ಕೃತಿ ವಚನ ಚಿಂತನ ನೀಡಿ ಆಶೀರ್ವದಿಸಿದರು.   

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬಸವಲಿಂಗ ಸ್ವಾಮೀಜಿ, 21 ವರ್ಷಗಳ ಹಿಂದೆ ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳು ಇದೇ ದಿನದಂದು 9 ಜನರಿಗೆ ಸನ್ಯಾಸ ದೀಕ್ಷೆ ನೀಡಿದ್ದರು.  ಇದೇ ದಿನ ಸಚಿವರು ಆಶ್ರಮಕ್ಕೆ ಭೇಟಿ ನೀಡಿದ ಯೋಗಾಯೋಗ ಬಂದಿದೆ.  ನನ್ನ ಜೀವಮಾನದಲ್ಲಿ ಬೇಸಿಗೆಯಲ್ಲೂ ಹಳ್ಳಗಳು ತುಂಬಿ ಹರಿಯುತ್ತಿರುವುದನ್ನು  ಕಂಡು ಸಂತಸವಾಗಿದೆ.  ಇದಕ್ಕೆ ಸಚಿವ ಎಂ. ಬಿ. ಪಾಟೀಲ ಅವರು ಕೈಗೊಂಡಿರುವ ನೀರಾವರಿ ಯೋಜನೆಗಳು ಕಾರಣವಾಗಿವೆ.  ಸಚಿವರು ಶ್ರೀ ಸಿದ್ಧೇಶ್ವರ ಸ್ವಾಮೀಜಿಗಳ ಮಾತನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಅಪ್ಪಟ ಭಕ್ತರಾಗಿದ್ದಾರೆ. 

ಶ್ರೀಗಳು ಹೇಳಿದಂತೆ ಎಂ. ಬಿ. ಪಾಟೀಲರು ಜನಮನದಲ್ಲಿ ಯಾವಾಗಲೂ ಜಲಸಂಪನ್ಮೂಲ ಸಚಿವರಾಗಿ ಉಳಿದಿದ್ದಾರೆ.  ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ವ್ಯಕ್ತಿತ್ವ ಅವರಾಗಿದ್ದು, ಇನ್ನೂ ಉನ್ನತ ಸ್ಥಾನಕ್ಕೇರಲಿ ಎಂದು ಆಶೀರ್ವದಿಸಿದರು.   ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಂ. ಬಿ. ಪಾಟೀಲ, ನನ್ನ ಜೀವನವೀಡೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ಕೆಲಸ ಮಾಡುತ್ತೇನೆ.  ಶ್ರೀ ಸಿದ್ಧೇಶ್ವರ ಸ್ವಾಮೀಜಿ ಆಶೀರ್ವಾದದಿಂದ ಜನಸೇವೆ, ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ.  ಅವರ ಕಿವಿಮಾತಿನಂತೆ ಚಾಚೂ ತಪ್ಪದೆ ಪಾಲಿಸುತ್ತ ರಾಜ್ಯದ ಅಭಿವೃದ್ಧಿಗೆ ಸಮಯ ಮೀಸಲಿಟ್ಡಿದ್ದೇನೆ.  

 ಶ್ರೀಗಳ ಆಶೀರ್ವಾದ ನನಗೆ ಕಾಯಕ ಮಾಡಲು ಸ್ಪೂರ್ತಿಯಾಗಿದ್ದು, ಈಗ ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ನನಗೆ ಸಂತೃಪ್ತಿ ಇದೆ.  ಸಾರ್ವಜನಿಕ ಜೀವನದಲ್ಲಿ ಸದಾ ನನ್ನ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತಾ, ಮಾರ್ಗದರ್ಶನ ನೀಡಿದ ಮಹಾನ್ ಸಂತ, ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳವರು ನಡೆದಾಡಿದ ಪುಣ್ಯಭೂಮಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗುರುಗಳ ಆಶೀರ್ವಾದವನ್ನು ಪಡೆದು ಧನ್ಯನಾಗಿದ್ದೇನೆ.   ಬೆಂಗಳೂರಿನಿಂದ ಬಂದು ನೇರವಾಗಿ ಆಶ್ರಮಕ್ಕೆ ಮೊದಲ ಭೇಟಿ ನೀಡಿದ್ದೇನೆ.  ಶ್ರೀಗಳು ಮತ್ತು ಬಸವಾದಿ ಶರಣರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಜೀವನಪೂರ್ತಿ ಶ್ರೀಗಳ ಆಶಯದಂತೆ ನಡೆಯುತ್ತೇನೆ ಎಂದು ಹೇಳಿದರು.   

ಈ ಸಂದರ್ಭದಲ್ಲಿ ಅಮೃತಾನಂದ ಸ್ವಾಮೀಜಿ ಬಾಲಗಾಂವ, ಹರ್ಷಾನಂದ ಸ್ವಾಮೀಜಿ, ಪ್ರಸಾದ ಸ್ವಾಮೀಜಿ, ಜಗನು ಮಹಾರಾಜ, ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಸಂಬಣ್ಣಿ ಮುಖಂಡರಾದ ಸಂಗು ಸಜ್ಜನ, ವಿ. ಸಿ. ನಾಗಠಾಣ, ಮಲ್ಲಿಕಾರ್ಜುನ ಹಳ್ಳದ, ಪಿ. ಎಸ್‌. ಬಿರಾದಾರ, ಘನಶ್ಯಾಮ ತೋಶ್ನಿವಾಲ, ಶಿವಾನಂದ ಸಂಖ, ವಿಠ್ಠಲಗೌಡ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.  ನಂತರ ಸಚಿವರು ಬಿ.ಎಲ್‌.ಡಿ.ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಆವರಣದಲ್ಲಿರುವ ಸಂಸ್ಥೆಯ ಪ್ರಾತಃ ಸ್ಮರಣೀಯರಾದ ದಿ. ಬಿ. ಎಂ. ಪಾಟೀಲ, ವಚನ ಪಿತಾಮಹಡಾ. ಫ. ಗು. ಹಳಕಟ್ಟಿ ಸಮಾಧಿ, ಬಂಥನಾಳ ಶಿವಯೋಗಿಗಳ ದೇವಸ್ಥಾನ ಹಾಗೂ 770 ಅಮರಗಣಂಗಳ ಲಿಂಗದ ಗುಡಿಗೆ ತೆರಳಿ ನಮನ ಸಲ್ಲಿಸಿದರು.   

ಈ ಸಂದರ್ಭದಲ್ಲಿ ಬಿ.ಎಲ್‌.ಡಿ.ಇ ಸಂಸ್ಥೆಯ ನಿರ್ದೇಶಕರಾದ ಸಂಗು ಸಜ್ಜನ, ಡೀಮ್ಡ್‌ ವಿಶ್ವವಿದ್ಯಾಲಯದ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ, ರಜಿಸ್ಟ್ರಾರ್ ಡಾ. ಆರ್‌. ವಿ. ಕುಲಕರ್ಣಿ, ಪ್ರಾಚಾರ್ಯೆ ತೇಜಶ್ವಿನಿ ವಲ್ಲಭ, ಹಿರಿಯ ಉಪಪ್ರಾಚಾರ್ಯ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ಉಪಪ್ರಾಚಾರ್ಯ ಡಾ. ರವಿ ಬಿರಾದಾರ, ಸಂಸ್ಥೆಯ ಆಡಳಿತಾಧಿಕಾರಿಗಳಾದ ಎಸ್‌. ಎ. ಬಿರಾದಾರ(ಕನ್ನಾಳ), ವಿಲಾಸ ಬಗಲಿ, ಐ. ಎಸ್‌. ಕಾಳಪ್ಪನವರ, ಹಳಕಟ್ಟಿ ಸಂಶೋಧನ ಕೇಂದ್ರದ ಕಾರ್ಯದರ್ಶಿ ಡಾ. ಎಂ. ಎಸ್‌. ಮದಭಾವಿ ಮುಂತಾದವರು ಉಪಸ್ಥಿತರಿದ್ದರು.