ಶಾಸಕರ ಎದುರು ಗದ್ದಲ, ಮೌನಕ್ಕೆ ಶರಣಾದ ಪೌರಾಯುಕ್ತೆ
ಜಮಖಂಡಿ 26: ಭಾರೀ ಕೋಲಾಹಲ, ಏರು ಧ್ವನಿಯಲ್ಲಿ ಮಾತು, ಅಭಿವೃದ್ದಿ ಕಾಮಗಾರಿ ಸಮಸ್ಯೆಗೆ ಚರ್ಚೆ ಇಲ್ಲ, ಪ್ರತಿಷ್ಠೆಗೆ ಹಾಳಾಯಿತು ಸಾಮಾನ್ಯ ಸಭೆ, ಶಾಸಕರ ಎದುರು ಗದ್ದಲ, ಮೌನಕ್ಕೆ ಶರಣಾದ ಪೌರಾಯುಕ್ತೆ, ಅಧ್ಯಕ್ಷರ ಮಧ್ಯಸ್ಥಿಕೆ ವಿಫಲ, ಸದಸ್ಯರ ಸಭಾ ತ್ಯಾಗ,
ಇಲ್ಲಿನ ನಗರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೂಗಾಟ-ಚಿರಾಟ ಕೋಲಾಹಲ ಗಲಾಟೆ ಏರು ಧ್ವನಿ ಮಾತುಗಳು ನಡೆದ ಘಟನೆ ನಡೆಯಿತು.
ಸ್ವಾತಂತ್ಯ ಸೇನಾನಿ ವೀರ ಸಾವರ್ಕರ್, ಜೋತಿಬಾ ಪುಲೆ, ಸಾವಿತ್ರಿಬಾಯಿ ಪುಲೆ ಅವರುಗಳ ವೃತ್ತಗಳನ್ನು ನಗರದಲ್ಲಿ ನಿರ್ಮಿಸುವ ಬಗ್ಗೆ ನಗರಸಭೆ ಸಾಮಾನ್ಯ ಸಭೆಯಲ್ಲಿ ಸದಸ್ಯ ಕುಶಾಲ ವಾಘ್ಮೋರೆ ಪ್ರಸ್ತಾಪ ಮಾಡುತ್ತಿದ್ದಂತೆ ಆಡಳಿತ ಪಕ್ಷದ ಸದಸ್ಯರು ಚೇಳು ಕಡಿದವರಂತೆ ತಮ್ಮ ಸ್ಥಾನದಲ್ಲಿ ಎದ್ದು ನಿಂತು ವೀರ ಸಾವರಕರ ಅವರ ವೃತ್ತ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಅದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ವೃತ್ತ ನಿರ್ಮಿಸಬೇಕೆಂದು ಪಟ್ಟು ಹಿಡಿದು ಎದ್ದು ನಿಂತು ವಾದಕ್ಕೀಳಿದರು.
ನೀವು ಹೇಳಿದಂತೆ ಮಾಡಲಾಗುವುದಿಲ್ಲ. ಈ ವಿಷಯ ಮತ ಚಲಾಯಿಸಿ ತೀರ್ಮಾನಿಸಲಾಗುತ್ತದೆ ಎಂದು ಅಧ್ಯಕ್ಷರು ಹೇಳುತ್ತಿದ್ದಂತೆ ರೊಚ್ಚಿಗೆದ್ದ ಬಿಜೆಪಿ ಸದಸ್ಯರೆಲ್ಲರೂ ಕಾಂಗ್ರೆಸ್ ಸದಸ್ಯರು ಹೇಳಿ ವೃತ್ತ ನಿರ್ಮಾಣಕ್ಕೆ ಒಪ್ಪಿಗೆ ನೀಡುವದಕ್ಕೆ, ನೀವು ಇನ್ನಿತರರ ವೃತ್ತಕ್ಕೆ ವಿರೋಧ ವ್ಯಕ್ತಪಡಿಸುವುದು ಏಕ ಪಕ್ಷೀಯ, ನಗರಸಭೆಯಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತದೆಂದು ನಾಮನಿದೇರ್ಶಕ ಸದಸ್ಯರಾದ ಪ್ರಶಾಂತ ಶಂಕರ್ಪಗೋಳ, ವಿನಾಯಕ ಗವಳಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು.
ಬಿಜೆಪಿ ಸದಸ್ಯರು ವೃತ್ತ ನಿರ್ಮಿಸಬೇಕೆಂದು ಪಟ್ಟು ಹಿಡಿದು ಒತ್ತಾಯಿಸದ್ದಕ್ಕೆ ಶಾಸಕರು ಸಭೆಯಿಂದ ಎದ್ದು ಹೋದ ಪ್ರಸಂಗ ನಡೆಯಿತು.
ನಗರಸಭೆ ಕೆಲವು ಪ್ರದೇಶಗಳಲ್ಲಿ ಅನಧಿಕೃತ ಲೇಜೌಟ್ಗಳು ನಿರ್ಮಾಣಗೊಳ್ಳುತ್ತಿದ್ದು, ನಗರಸಭೆ ಸಿಬ್ಬಂದಿಗಳು ಈ ಅವ್ಯವಹಾರದಲ್ಲಿ ಶಾಮೀಲಾಗಿದ್ದು, ಅವುಗಳ ಬಗ್ಗೆ ಚರ್ಚಿಸುವಂತೆ ಸಭೆಯಲ್ಲಿ ಮಾಜಿ ಅಧ್ಯಕ್ಷ ದಿಲಾವರ ಶಿರೋಳ ಒತ್ತಾಯಿಸಿದರು. ಅದಕ್ಕೆ ನಗರಸಭೆ ಅಧ್ಯಕ್ಷ ದಾನೇಶ ಘಾಟಗೆ ಮಾತನಾಡಿ, ಈ ಬಗ್ಗೆ ಮುಂದಿನ ಸಭೆಯಲ್ಲಿ ಇದರ ಬಗ್ಗೆ ಚರ್ಚಿಸುತ್ತೇವೆ ಎಂದರು.
2022-23 ನೇ ಸಾಲಿನ ಎಸ್ಎಫ್ಸಿ ಹಾಗೂ ಸ್ಥಳಿಯ ನಿಧಿ ಯೋಜನೆಯಡಿಯಲ್ಲಿ ಶೇ. 24.20, ಶೇ.7.25 ಮತ್ತು ಶೇ. 5 ಹಾಗೂ ಶೇ.1 ಯೋಜನೆಗಳಿಗೆ ಸಾರ್ವಜನಿಕರಿಂದ ಬಂದ ಅರ್ಜಿಗಳಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆಯಲ್ಲಿ ನಗರಸಭೆ ಸದಸ್ಯರ ಗಮನಕ್ಕೆ ತರದೇ ಆಯ್ಕೆ ಮಾಡದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದು ಮಾಜಿ ಅಧ್ಯಕ್ಷ ಸಿದ್ದು ಮೀಶಿ ಆಗ್ರಹಿಸಿದರು.
ಇದರ ಮಧ್ಯ ಮಾಜಿ ಉಪಾಧ್ಯಕ್ಷೆ ಮಲ್ಲಮ್ಮಾ ಪಾಯಗೊಂಡ ಅವರು ತಮ್ಮ ವಾರ್ಡಗಳಲ್ಲಿ ಯಾವುದೇ ಕೆಲಸ, ಕಾಮಗಾರಿಗಳು ನಡೆಯುತ್ತಿಲ್ಲ. ನಗರಸಭೆಯಲ್ಲಿ ಹೇಳುವರು ಇಲ್ಲ. ಕೇಳುವರು ಇಲ್ಲದಂತೆ ಆಗಿದೆಂದು ಆಕ್ರೋಶ ವ್ಯಕ್ತಪಡಿಸುತ್ತಿದಂತೆ. ಸಾಮಾನ್ಯ ಸಭೆಯನ್ನು ಅರ್ಧಕ್ಕೆ ಮೊಟ್ಟಕುಗೊಳಿಸಿದ್ದಕ್ಕೆ ಅನೇಕ ಸದಸ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದರು.
ತಮ್ಮ ವಾರ್ಡ್ಗಳಲ್ಲಿ ಅಭಿವೃದ್ದಿ ಕಾಮಗಾರಿಗಳು ನಡೆಯುತ್ತಿಲ್ಲ, ಬೀದಿ ದೀಪಗಳಿಲ್ಲ, ಶುದ್ದ ಕುಡಿವ ನೀರು ಸಿಗುತ್ತಿಲ್ಲ, ನಲ್ಲಿಗಳಲ್ಲಿ ವಾರಗಟ್ಟಲೇ ನೀರು ಪೂರೈಕೆಯಾಗುತ್ತಿಲ್ಲ, ಗಟಾರ ಸ್ವಚ್ಚಗೊಳ್ಳುತ್ತಿಲ್ಲ ಹೀಗೆ ಹತ್ತು, ಹಲವಾರು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಬೇಕಾಗಿದ್ದು, ತಮ್ಮ ರಾಜಕೀಯ ಬೆಳೆ ಬೆಯಿಸಿಕೊಳ್ಳಲು ಮತ್ತು ವೈಯಕ್ತಿಕ ಪ್ರತಿಷ್ಠೆ ಹೆಚ್ಚಿಸಿಕೊಳ್ಳಲು ಸಭೆಯನ್ನು ಬಳಕೆ ಮಾಡಿಕೊಳ್ಳಲಾಗುತ್ತದೆಂದು ಅನೇಕ ಮಹಿಳಾ ಸದಸ್ಯರು ಆಕ್ರೋಶಗೊಂಡರು. ಕೆಲ ಸದಸ್ಯರು ತಮ್ಮ ವಾರ್ಡಗಳ ಸಮಸ್ಯೆಗಳನ್ನು ಹೇಳಲು ಸಾಧ್ಯವಾಗಲಿಲ್ಲ.
ಸಭೆಯಲ್ಲಿ ಸುಮಾರು 19 ವಿಷಯಗಳನ್ನು ಚರ್ಚಿಸಲಾಯಿತು .ಶಾಸಕ ಆನಂದ ನ್ಯಾಮಗೌಡ ಅವರು ಕೆಲ ವಿಷಯಗಳಲ್ಲಿ ಸೂಕ್ತ ಮಾರ್ಗದರ್ಶನ ನೀಡಿದರು. ಉಪಾಧ್ಯಕ್ಷೆ ಸಾಯಿರಾಬಾನು ಪಕಾಲಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುನೀಲ ಶಿಂಧೆ, ಪೌರಾಯುಕ್ತೆ ಲಕ್ಷ್ಮೀ ಅಷ್ಟಗಿ ಸಾಮಾನ್ಯ ಸಭೆಯಲ್ಲಿ ಮೂಖ ಪ್ರೇಕ್ಷಕರಾಗಿ ವೇದಿಕೆಯಲ್ಲಿದ್ದರು.
ಎ,ಬಿ,ಸಿ, ಇಲ್ಲಿನ ನಗರಸಭೆ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕೂಗಾಟ-ಚಿರಾಟ ಕೋಲಾಹಲ ಗಲಾಟೆ ಏರು ಧ್ವನಿ ಮಾತುಗಳು ಶಾಸಕರ ಮುಂದೆ ನಡೆದ ಘಟನೆ ಜರುಗಿತು,